ಭಾರತದ ಹಿಂದುತ್ವ ಸಂಸ್ಕೃತಿ ಮತ್ತು ಸನಾತನ ಧರ್ಮ ಉದಾರವಾಗಿದೆ ; ಮೊಹನ್ ಭಾಗವತ್.

ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮರಿಗೆ ಅಲ್ಲಿ ಹೆಚ್ಚಿನ ಘನತೆ  ಗೌರವ ಸಿಗುತ್ತಿಲ್ಲ.

0
28

ಹೊಸದಿಲ್ಲಿ: ಹಿಂದೂಗಳು ಮತ್ತು ಮುಸ್ಲಿಮರ ಪೂರ್ವಜರು ಒಬ್ಬರೇ ಎನ್ನುವ ಚಿಂತನೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದಿದ್ದರೆ, ಭಾರತದ ವಿಭಜನೆಯನ್ನು ತಡೆಯಬಹುದಿತ್ತು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.

“ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮರಿಗೆ ಅಲ್ಲಿ ಹೆಚ್ಚಿನ ಘನತೆ  ಗೌರವ ಸಿಗುತ್ತಿಲ್ಲ. ಆದರೆ ಭಾರತದಲ್ಲೇ ಉಳಿದವರಿಗೆ ಅವರ ಪ್ರಾರ್ಥನಾ ವಿಧಾನ ಯಾವುದೇ ಇದ್ದರೂ ಗೌರವ ಸಿಗುತ್ತಿದೆ” ಎಂದು ಅವರು ಹೇಳಿದ್ದಾರೆ. ಸಾಮರಸ್ಯದ ಸಮಾಜ ಅಸ್ತಿತ್ವದಲ್ಲಿರಬೇಕು ಎಂದು ಅವರು ಕರೆ ನೀಡಿದ್ದಾರೆ.

“ಭಾರತದ ಹಿಂದುತ್ವ ಸಂಸ್ಕೃತಿ ಮತ್ತು ಸನಾತನ ಧರ್ಮ ಉದಾರವಾಗಿದೆ. ಈ ಸಂಸ್ಕೃತಿ ನಮ್ಮಲ್ಲಿ ಅಂತರ್ಗತವಾಗಿ ಬಂದಿದೆ. ಯಾರನ್ನೂ ಅವರ ಧಾರ್ಮಿಕ ವಿಧಾನದ ಹಿನ್ನೆಲೆಯಲ್ಲಿ ಭಿನ್ನವಾಗಿ ಕಾಣುವಂತಿಲ್ಲ. ಹಿಂದೂಗಳು ಹಾಗೂ ಮುಸ್ಲಿಮರ ಪೂರ್ವಜರು ಒಬ್ಬರೇ. ಸ್ವಾತಂತ್ರ್ಯ ಚಳವಳಿಯಲ್ಲಿ ಈ ಯೋಚನಾ ಲಹರಿ ಇದ್ದಿದ್ದರೆ, ವಿಭಜನೆಯನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ.

ವಿ.ಡಿ.ಸಾವರ್ಕರ್ ಬಗೆಗಿನ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗ್ವತ್ ಮಾತನಾಡಿದರು. ಸಾವರ್ಕರ್ ರಾಷ್ಟ್ರೀಯವಾದಿ ಮತ್ತು ದೂರದೃಷ್ಟಿ ಇದ್ದ ನಾಯಕ ಎಂದು ಬಣ್ಣಿಸಿದರು.

ಸಾವರ್ಕರ್ ಅವರ ಹಿಂದುತ್ವ ಏಕೀಕೃತ ಭಾರತಕ್ಕೆ ಸಂಬಂಧಿಸಿದ್ದಾಗಿತ್ತು. ಇಲ್ಲಿ ಧರ್ಮ, ಜಾತಿ, ಅಂತಸ್ತು ಆಧಾರದಲ್ಲಿ ಯಾವುದೇ ತಾರತಮ್ಯ ಇರಬಾರದು ಎನ್ನುವುದು ಅವರ ನಿಲುವಾಗಿತ್ತು. ಇದು ದೇಶ ಮೊದಲು ಎಂಬ ತತ್ವದ ಹಿನ್ನೆಲೆ ಹೊಂದಿತ್ತು ಎಂದು ವಿಶ್ಲೇಷಿಸಿದರು.

“ಹಲವರು ಭಾರತೀಯ ಸಮಾಜದಲ್ಲಿ ಹಿಂದುತ್ವ ಮತ್ತು ಏಕತೆ ಬಗ್ಗೆ ಮಾತನಾಡಿದ್ದಾರೆ. ಆದರೆ ಅದನ್ನು ಗಟ್ಟಿಯಾಗಿ ಹೇಳಿದ್ದು ಸಾವರ್ಕರ್ ಮಾತ್ರ. ಇದೀಗ ಹಲವು ವರ್ಷಗಳ ಬಳಿಕ, ಪ್ರತಿಯೊಬ್ಬರೂ ಗಟ್ಟಿ ಧ್ವನಿ ಎತ್ತಿದ್ದರೆ ದೇಶದ ವಿಭಜನೆಯಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮರಿಗೆ ಅಲ್ಲಿ ಗೌರವ ಇಲ್ಲ; ಏಕೆಂದರೆ ಅವರು ಭಾರತಕ್ಕೆ ಸೇರಿದವರು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಎರಡೂ ಸಮುದಾಯಗಳ ಪೂರ್ವಜರು ಒಬ್ಬರೇ. ನಮ್ಮ ಪ್ರಾರ್ಥನಾ ವಿಧಾನವಷ್ಟೇ ಭಿನ್ನ. ನಮ್ಮ ಉದಾರ ಸನಾತನ ಧರ್ಮದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here