ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಪುನಾರಂಭ: ದರ್ಶನಕ್ಕೆ ನೂರೆಂಟು ಕಟ್ಟುಪಾಡು

0
215

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠ, ಆರು ತಿಂಗಳ ನಂತರ ಭಕ್ತರಿಗೆ ಮತ್ತೆ ತೆರೆದುಕೊಂಡರೂ ಅನೇಕ ಬಿಗಿ ಕ್ರಮಗಳು ಶ್ರೀಕ್ಷೇತ್ರದಲ್ಲಿ ಜಾರಿಗೆ ಬಂದಿವೆ. ಭಕ್ತರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ.

ಕೊರೊನಾ ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಮಾರ್ಚ್ 21ರಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಬಾಗಿಲು ಮುಚ್ಚಲಾಗಿತ್ತು. ಮಠದ ಆಡಳಿತದ ಆಯ್ದ ಸಿಬ್ಬಂದಿಗೆ ಮಾತ್ರ ಶ್ರೀಮಠದ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ಅನುಮತಿಸುತ್ತಿದ್ದರು. ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನೂ ಈ ಬಾರಿ ಸರಳವಾಗಿ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಏನೇನು ನಿಯಮ?: ಶ್ರೀಮಠದ ಎಲ್ಲ ವಸತಿ ಗೃಹಗಳಲ್ಲಿ ಭಕ್ತರು ತಂಗಲು ಸೌಲಭ್ಯವಿರಲಿದೆ. ಈಗಾಗಲೇ ಆಡಳಿತವು ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿದೆ. ಪ್ರತಿ ಸಲ ಕೊಠಡಿಯನ್ನು ಭಕ್ತರು ತೆರವುಗೊಳಿಸುತ್ತಿದ್ದಂತೆಯೇ ಸ್ಯಾನಿಟೈಸ್‌ ಮಾಡಲು ನಿರ್ಧರಿಸಲಾಗಿದೆ. ಆನ್‌ಲೈನ್‌ನಲ್ಲಿ ವಸತಿ ಕೊಠಡಿ ಬುಕ್ ‌ಮಾಡಲು ಅವಕಾಶವಿಲ್ಲ. ಮಠದ ಮಹಾದ್ವಾರಕ್ಕೆ ತೆರಳುವ ಮಾರ್ಗದಲ್ಲಿಯೇ ಸಾಲಾಗಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ ದರ್ಶನಕ್ಕೆ ಅವಕಾಶವಿಲ್ಲ.

ಎಲ್ಲ ಭಕ್ತರೂ ಸರದಿಯಲ್ಲಿ ಸಾಲಾಗಿ ನಿಂತು ಮಠದೊಳಗೆ ಪ್ರವೇಶಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವವರ ಪತ್ತೆಗೆ ಮಠದ ಮಾರ್ಗದಲ್ಲಿಯೇ ಅತ್ಯಾಧುನಿಕ ಥರ್ಮಲ್‌ ಸ್ಕ್ಯಾ‌ನರ್‌ ಅಳವಡಿಸಿದ್ದು ಅದರ ಮೂಲಕವೇ ಎಲ್ಲರೂ ಸಾಗಬೇಕು. ಅನಾರೋಗ್ಯದಿಂದ ಬಳಲುವ ಭಕ್ತರಿಗೆ ಮಠದೊಳಗೆ ತೆರಳಲು ಅವಕಾಶವಿಲ್ಲ. ಎಲ್ಲರೂ ಸಾಮಾನ್ಯ ಸರದಿ ಸಾಲು (ಧರ್ಮ ದರ್ಶನ) ಮೂಲಕವೇ ರಾಯರ ದರ್ಶನಕ್ಕೆ ಸಾಗಬೇಕು.

ಉಳಿದ ಸೇವೆಗಳಿಗೆ ಅವಕಾಶವಿಲ್ಲ: ಶ್ರೀಮಠದಲ್ಲಿ ಭಕ್ತರಿಗೆ ಸದ್ಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತೀರ್ಥ ಮತ್ತು ಅನ್ನಪ್ರಸಾದದ ಸೌಲಭ್ಯ ಸದ್ಯಕ್ಕೆ ಇರುವುದಿಲ್ಲ. ಮಠದ ಮಹಾದ್ವಾರದಿಂದ ಪ್ರವೇಶಿಸಿ, ಶ್ರೀಮಠದ ಉತ್ತರ ಬಾಗಿಲು (ತುಂಗಭದ್ರಾ ನದಿಯೆಡೆಗಿನ) ಮೂಲಕ ಹೊರಹೋಗಲು ಮಾರ್ಗ ನಿರ್ಮಿಸಲಾಗಿದೆ. ಭಕ್ತರು ರಾಯರಿಗೆ ಸೇವೆಗಳನ್ನು ಆನ್‌ಲೈನ್‌ನಲ್ಲಿ ಇಲ್ಲವೇ ಖುದ್ದಾಗಿಯೂ ಸಲ್ಲಿಸಬಹುದು.

ರಥೋತ್ಸವ, ಉರುಳು ಸೇವೆಯಂಥ ಆಚರಣೆಗಳಲ್ಲಿ ಭಕ್ತರ ಪಾಲ್ಗೊಳ್ಳುವಿಕೆಗೆ ಸದ್ಯಕ್ಕೆ ಅವಕಾಶ ನೀಡುತ್ತಿಲ್ಲ. ದಿನವೂ ಬೆಳಗ್ಗೆ 8 ರಿಂದ ಸಂಜೆಯ 4ರ ವರೆಗೆ ಮಾತ್ರ ರಾಯರ ಮಠಕ್ಕೆ ಪ್ರವೇಶವಿರಲಿದೆ. ಕೊರೊನಾತಂಕದ ಮಧ್ಯೆಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ನೀಡಿರುವುದು ಸ್ವಲ್ಪ ಮಟ್ಟಿಗೆ ಮಾನಸಿಕ ನೆಮ್ಮದಿ ತಂದಿದೆ.

LEAVE A REPLY

Please enter your comment!
Please enter your name here