15 ನೇ ಹಣಕಾಸು ಯೋಜನೆ : ಮಾರ್ಗಸೂಚಿ ಉಲ್ಲಂಘನೆ ಕ್ರಿಯಾಯೋಜನೆ

0
21

ರಾಯಚೂರು.ಅ.06- ನಗರಸಭೆಗೆ ಸರ್ಕಾರದಿಂದ ಬಿಡುಗಡೆಯಾದ 15 ನೇ ಹಣಕಾಸು ಯೋಜನೆ ಅನುದಾನ ಬಳಕೆ ಕ್ರಿಯಾಯೋಜನೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ ವಿವಾದ ಈಗ ಜಿಲ್ಲಾಧಿಕಾರಿ ಅಂಗಳದಿಂದ ರಾಜ್ಯ ನಿರ್ದೇಶಕರ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಕಾಂಗ್ರೆಸ್ ಪಕ್ಷ ಶಾಸಕ ಡಾ.ಶಿವರಾಜ ಪಾಟೀಲ್ ಅವರ ವಿರುದ್ಧ ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಿದೆ.
15 ನೇ ಹಣಕಾಸು ಯೋಜನೆ ಬಳಕೆಗೆ ಸಂಬಂಧಿಸಿ, ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ, ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರಾದ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಯುವ ಮುಖಂಡ ರವಿ ಬೋಸರಾಜು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಗೂ ಪಕ್ಷೇತರ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ್ದರು. ಕ್ರಿಯಾಯೋಜನೆಯಲ್ಲಿ ಯಾವುದೇ ಬದಲಾವಣೆಗೆ ಸಂಬಂಧಿಸಿ, ಸೂಕ್ತ ಕ್ರಮ ವಿಳಂಬದ ಹಿನ್ನೆಲೆ, ಕಾಂಗ್ರೆಸ್ ಮತ್ತು ಪಕ್ಷೇತರ 18 ಜನ ಸದಸ್ಯರು ಅ.05 ರಂದು ಪೌರಾಡಳಿತ ನಿರ್ದೇಶಕರನ್ನು ಭೇಟಿಯಾಗಿ 15 ನೇ ಹಣಕಾಸು ಅನುದಾನದಡಿ ರಚಿಸಿದ ಕ್ರಿಯಾಯೋಜನೆ ಬಗ್ಗೆ ದೂರು ನೀಡಲಾಯಿತು.
ಕ್ರಿಯಾಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ನಿಗದಿ ಪಡಿಸಿದ 3.95 ಕೋಟಿ ಅನುದಾನ ರಸ್ತೆಗಳಿಗೆ ಬಳಸಿರುವುದನ್ನು ಆಕ್ಷೇಪಿಸಲಾಯಿತು. ವಾರ್ಡ್ ಅಭಿವೃದ್ಧಿಗಾಗಿ ಬಿಡುಗಡೆಗೊಂಡ ಈ ಅನುದಾನವನ್ನು ರಸ್ತೆಗೆ ಬಳಸದೇ, ವಾರ್ಡ್‌ ಅಭಿವೃದ್ಧಿಗಾಗಿಯೇ ಬಳಸುವಂತೆ ಆದೇಶಿಸಲು ಸೂಚಿಸಲಾಯಿತು. ನಿರ್ದೇಶಕರು ಕಾಂಗ್ರೆಸ್ ಸದಸ್ಯರ ಈ ದೂರು ಗಂಭೀರ ಪರಿಗಣಿಸಿದರು. 15 ನೇ ಹಣಕಾಸು ಯೋಜನೆ ಅನುದಾನ ಬಳಕೆಗೆ ಸಂಬಂಧಿಸಿ ಸರ್ಕಾರ ಮಾರ್ಗಸೂಚಿ ನೀಡಿದ ನಂತರವೂ ಈ ರೀತಿ ಅನುದಾನ ಹಂಚಿಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಆಯುಕ್ತರ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ತುರ್ತು ಕುಡಿವ ನೀರಿನ ಸೌಲಭ್ಯಕ್ಕೆ ಹೊರತು ಪಡಿಸಿದರೇ, ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲವೆಂದು ಹೇಳಿದರು ಎನ್ನಲಾಗಿದೆ. ಕೂ‌ಡಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ, ಈ ಲೋಪದೋಷ ಸರಿಪಡಿಸುವಂತೆ ಸೂಚಿಸಲಾಗುತ್ತದೆ ಮತ್ತು ಈ ರೀತಿ ಮಾರ್ಗಸೂಚಿ ಉಲ್ಲಂಘಿಸಿ, ಕ್ರಿಯಾಯೋಜನೆ ರೂಪಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಯುವ ಮುಖಂಡ ರವಿ ಬೋಸರಾಜು, ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಎನ್.ಶ್ರೀನಿವಾಸ ರೆಡ್ಡಿ, ಜಿಂದಪ್ಪ, ಜಿ.ತಿಮ್ಮಾರೆಡ್ಡಿ, ನರಸಿಂಹಲು ಮಾಡಗಿರಿ, ಮಹ್ಮದ್ ಶಾಲಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here