ಸದಸ್ಯತ್ವ ರದ್ದು – ನ್ಯಾಯಾಂಗ ನಿಂದನೆ ದಾವೆಗೆ ಸಿದ್ಧತೆ

ಡಾ.ಶಿವರಾಜ ಪಾಟೀಲ್ ಅವರಿಗೆ ಸವಾಲೆಸೆದಂತೆ ರವಿ ಬೋಸರಾಜು ಅವರು ಕಳೆದ ಎರಡು ದಿನಗಳಿಂದ ರೇಣುಕಮ್ಮ ಭೀಮರಾಯ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ.

0
44

ರಾಯಚೂರು.ಅ.30- ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಭಾರೀ ಜಿದ್ದಾಜಿದ್ದಿ ಹೋರಾಟದ ತಿರುವು ಪಡೆದು, ಒಂದೆಡೆ ನ್ಯಾಯಾಂಗ ನಿಂದನೆ ಮತ್ತೊಂದೆಡೆ ನಗರಸಭೆ ಗೆಲ್ಲುವ ಛಲದೊಂದಿಗೆ ಕಾಂಗ್ರೆಸ್, ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಪ್ರತಿ ಶಾಕ್ ನೀಡಲು ಭಾರೀ ಸಿದ್ಧತೆ ನಡೆಸಿದೆ.

ಶಾಸಕ ಡಾ.ಶಿವರಾಜ ಪಾಟೀಲ್ ಅವರು ನಗರಸಭೆಯಲ್ಲಿ ತಮ್ಮ ಪರ ಮತ ಚಲಾಯಿಸಲು ಒಪ್ಪದ ವಾರ್ಡ್ 31 ರ ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವವನ್ನೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಶಾಕ್ ನೀಡಿದ್ದಾರೆ. ಇದರಿಂದ ಕಾಂಗ್ರೆಸ್, ಪಕ್ಷೇತರರು ತೀವ್ರ ಆಕ್ರೋಶಗೊಂಡು ಪ್ರತಿ ಶಾಕ್ ನೀಡಲು ಮುಂದಾಗಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರನ್ನು ಸೆಳೆಯುವ ಮೂಲಕ ಶಾಸಕ ಮತ್ತು ಸರ್ಕಾರ ಒತ್ತಡಕ್ಕೆ ಹೈಕೋರ್ಟ್ ಆದೇಶಗಳನ್ನೇ ಉಲ್ಲಂಘಿಸಿದ್ದಕ್ಕೆ ಚಾಟಿ ಬೀಸುವುದರೊಂದಿಗೆ ಶಾಸಕರಿಗೆ ತಮ್ಮ ಬಲ ಪ್ರದರ್ಶಿಸಲು ಮುಂದಾಗಿದೆ.

ಡಾ.ಶಿವರಾಜ ಪಾಟೀಲ್ ಅವರಿಗೆ ಸವಾಲೆಸೆದಂತೆ ರವಿ ಬೋಸರಾಜು ಅವರು ಕಳೆದ ಎರಡು ದಿನಗಳಿಂದ ರೇಣುಕಮ್ಮ ಭೀಮರಾಯ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತು ರೇಣುಕಮ್ಮ ಭೀಮರಾಯ ಪ್ರಕರಣದಲ್ಲಿ ಇಲ್ಲಿವರೆಗೂ ತೆರೆಮರೆಯಲ್ಲಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ರವಿ ಬೋಸರಾಜು ಅವರ ಜಿದ್ದಾಜಿದ್ದಿ ರಾಜಕೀಯ ಸಂಘರ್ಷ ಈಗ ತೆರೆ ಮೇಲೆ ಬರುವಂತೆ ಮಾಡಿದೆ.

ರೇಣುಕಮ್ಮ ಭೀಮರಾಯ ಅವರ ನಗರಸಭೆ ಸದಸ್ಯತ್ವ ರದ್ದುಗೊಳಿಸುವಂತೆ ಅ.29 ರಂದು ಹೈಕೋರ್ಟ್‌ನಲ್ಲಿ ರವೀಂದ್ರ ಪಟ್ಟಿಯವರು ದಾವೆ ಹೂಡಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ಜಿ.ಎಂ.ಉಮಾ ಅವರು, ಸದಸ್ಯತ್ವ ರದ್ದುಗೊಳಿಸಲು ನಿರಾಕರಿಸಿ ಆದೇಶಿಸಿದ್ದರು. ಈ ಪ್ರಕರಣ ಕುರಿತು ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇರುವುದರಿಂದ ಅಂತಿಮ ಆದೇಶ ಹೊರ ಬಾರದೇ, ಸದಸ್ಯತ್ವ ರದ್ದು ಪಡಿಸುವ ಪ್ರಮೇಯ ಉದ್ಭವಿಸುವುದಿಲ್ಲವೆಂದು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

ಬೆಂಗಳೂರು ಹೈಕೋರ್ಟ್ ಈ ಆದೇಶ ಮತ್ತು ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ಈಗಾಗಲೇ ಜಾತಿ ಪ್ರಮಾಣ ಪತ್ರ ರದ್ದು ತಡೆ ಪ್ರಕರಣ ವಿಚಾರಣೆಯಲ್ಲಿರುವಾಗ ಕೇವಲ 12 ಗಂಟೆಯಲ್ಲಿ ಪ್ರಾದೇಶಿಕ ಆಯುಕ್ತರು ವಿಚಾರಣೆ ಕೈಗೆತ್ತಿಕೊಂಡು ನಗರಸಭೆ ಸದಸ್ಯತ್ವವನ್ನು ರದ್ದು ಮಾಡಿರುವುದು ಈಗ ನ್ಯಾಯಾಂಗ ನಿಂದನೆ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮೊರೆ ಹೋಗುವ ಸಿದ್ಧತೆ ನಡೆದಿದೆ. ಸ್ವತಃ ಬೆಂಗಳೂರು ಹೈಕೋರ್ಟ್ ಸಮಾನಾಂತರ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಇರುವಾಗ ಮತ್ತು ಇದಕ್ಕೆ ಸಂಬಂಧಿಸಿ ತುರ್ತು ಸೂಚನಾ ಪತ್ರಗಳನ್ನು ಜಿಲ್ಲಾಧಿಕಾರಿ, ಆಯುಕ್ತರು ಮತ್ತು ಪ್ರತಿವಾದಿಗಳಿಗೆ ರವಾನಿಸಿರುವಾಗ ಸದಸ್ಯತ್ವ ರದ್ದು ಪಡಿಸುವ ಅಗತ್ಯತೆ ಎನಿದೆಂದು ಪ್ರತಿವಾದಿಗಳನ್ನು ಪ್ರಶ್ನಿಸಿತ್ತು.

ಹೈಕೋರ್ಟ್‌ನ ಈ ಮಹತ್ವದ ತೀರ್ಪುನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಪ್ರಾದೇಶಿಕ ಆಯುಕ್ತರು ಈಗಾಗಲೇ ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ಸದಸ್ಯತ್ವ ರದ್ದುಗೊಳಿಸುವ ಅಂತಿಮ ತೀರ್ಪು ನೀಡಿರುವುದು ಎಷ್ಟು ಸರಿ ಎನ್ನುವುದೇ ಈಗ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಮೊರೆ ಹೋಗುವ ತಯಾರಿ ನಡೆದಿದೆ. ಒಟ್ಟಾರೆಯಾಗಿ ರೇಣುಕಮ್ಮ ಭೀಮರಾಯ ಅವರ ಪ್ರಕರಣ ಹಿಂದೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ರಾಜಕೀಯ ಆಡಳಿತರೂಢ ಪಕ್ಷದ ಪ್ರತಿಷ್ಠೆಯಾಗಿತ್ತು ಎನ್ನುವುದು ಸ್ಪಷ್ಟಗೊಳ್ಳುತ್ತದೆ.

ಏತನ್ಮಧ್ಯೆ ಸ್ವತಃ ಶಾಸಕರು ಮತ್ತು ಅವರ ಬೆಂಬಲಿಗರು ಪದೇ ಪದೇ ಭೀಮರಾಯ ಅವರನ್ನು ಸಂಪರ್ಕಿಸಿ, ತಮ್ಮೊಂದಿಗೆ ಬಂದರೇ, ಸದಸ್ಯತ್ವ ಉಳಿಯುತ್ತದೆ. ಇಲ್ಲದಿದ್ದರೇ ನಿಶ್ಚಿತವಾಗಿ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಬೆದರಿಕೆ ಹಾಕಿರುವ ಬಗ್ಗೆ ಸ್ವತಃ ಭೀಮರಾಯ ಅವರು ಹೇಳಿಕೊಂಡಿದ್ದಾರೆ. ನವೆಂಬರ್ 02 ರ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಅಧಿಕಾರ ಪ್ರಾಬಲ್ಯದೊಂದಿಗೆ ಸರ್ಕಾರದ ಎಲ್ಲಾ ಹಂತಗಳ ಒತ್ತಡವೇರಿ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರ ಮೂಲಕ ಎರಡು ಮಹತ್ವದ ಪ್ರಕರಣಗಳನ್ನು ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಏನೆ ಪ್ರಯತ್ನ ನಡೆಸಿದರೂ, ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಂಖ್ಯಾಬಲ ಕ್ರೂಢೀಕರಣ ಅಸಾಧ್ಯವೆನ್ನುವ ಚಿತ್ರ ಗೋಚರಿಸುತ್ತದೆ.

ಮುಂದಿನ ಎರಡು ದಿನಗಳಲ್ಲಿ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಪ್ರತಿಷ್ಠಿತ ಹೋರಾಟವನ್ನು ಯಶಸ್ವಿಗೆ ಯಾವ ತಂತ್ರ ರೂಪಿಸಿ, ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ?. ಇದಕ್ಕೆ ಪ್ರತಿಯಾಗಿ ರವಿ ಬೋಸರಾಜು ಅವರು ಮತ್ಯಾವ ತಂತ್ರದೊಂದಿಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಯುದ್ಧ ಗೆಲ್ಲುವ ಮೂಲಕ ನಗರಸಭೆ ಕೈವಶದೊಂದಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಅಧಿಕಾರಕ್ಕೆ ತಿರುಗೇಟು ನೀಡುತ್ತಾರೆಂಬುವುದು ಭಾರೀ ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here