ಕೊರೊನಾ ವೈರಸ್ ದಾಳಿ ತಡೆಹಿಡಿಯಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ : ಸಚಿವ ಶ್ರೀರಾಮುಲು

0
206

ಬೆಂಗಳೂರು,ಮಾ.3- ರಾಜ್ಯದಲ್ಲಿ ಕರೋನ ವೈರಸ್ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡುವ ಅಥವಾ ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು. ಕರೋನ ವೈರಸ್ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಗಳಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿ, ಬಂದರುಗಳಲ್ಲಿ ತಪಾಸಣೆಗೊಳಪಡಿಸಲಾಗುತ್ತಿದೆ ಎಂದರು.

ಕೇರಳದಿಂದ ಬರುವವರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದುವರೆಗೂ 39,990 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, 245 ಮಂದಿ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 240 ಮಂದಿ ರಕ್ತ ಪರೀಕ್ಷೆಯಲ್ಲಿ ಕರೋನ ವೈರಸ್ ನೆಗೆಟಿವ್ ಬಂದಿದೆ. ಇನ್ನು ಎರಡು ವರದಿ ಬರಬೇಕಿದ್ದು ನೆಗೆಟಿವ್ ಇದೆ ಎಂದು ತಿಳಿದುಬಂದಿದೆ ಎಂದರು.

ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎರಡು ಲ್ಯಾಬ್‍ಗಳನ್ನು ರಕ್ತಪರೀಕ್ಷೆಗಾಗಿ ತೆರೆಯಲಾಗಿದೆ. ರಾಜ್ಯದ ಎಲಾ ಜಿಲ್ಲಾ, ತಾಲ್ಲೂಕು ಸೇರಿದಂತೆ 630 ಹಾಸಿಗೆಗಳನ್ನು ಐಸೋಲೇಷನ್ ವಾರ್ಡ್‍ಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಯ 1,689 ಹಾಸಿಗೆಗಳನ್ನು ಐಸೋಲೇಷನ್ ವಾರ್ಡ್‍ಗಾಗಿ ಮೀಸಲಿಡಲಾಗಿದೆ.

ಇದುವರೆಗೂ ದೆಹಲಿಯಲ್ಲಿ ಒಂದು, ತೆಲಂಗಾಣದಲ್ಲಿ ಒಂದು, ಕೇರಳದಲ್ಲಿ ಮೂರು ಕರೋನ ವೈರಸ್ ಪಾಸಿಟಿವ್ ಬಂದಿದೆ. 24 ಗಂಟೆಯೂ ಆರೋಗ್ಯ ಇಲಾಖೆಯು ಸನ್ನದ್ದವಾಗಿದ್ದು ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಈ ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈ ರೋಗಕ್ಕೆ ಔಷಧಿ ಇಲ್ಲದಿರುವುದರಿಂದ ರೋಗ ಹರಡದಂತೆ ತಡೆಯುವುದನ್ನುಸವಾಲಾಗಿ ಸ್ವೀಕರಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

LEAVE A REPLY

Please enter your comment!
Please enter your name here