ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಾಣು ತಡೆಯಲು ಹರಸಾಹಸ, ವಿಶ್ವದಾದ್ಯಂತ ಏರುತ್ತಲೇ ಇದೇ ಸಾವಿನ ಸಂಖ್ಯೆ..!

0
272

ಬೀಜಿಂಗ್ ಮಾ.03- ಜಾಗತಿಕ ಪಿಡುಗಾಗಿ ಪರಿಣಮಿಸಿರುವ ವಿನಾಶಕಾರಿ ಕೊರೋನಾ ವೈರಾಣು(ಕೋವಿಡ್-19) ಸೋಂಕನ್ನು ಹತೋಟಿಗೆ ತರಲು ವಿಶ್ವದ ವಿವಿಧೆಡೆ ನಿರಂತರ ಪ್ರಯತ್ನಗಳು ಮುಂದುವರಿದಿವೆ. ವೈರಾಣು ನಿಯಂತ್ರಣಕ್ಕೆ ಹರಸಾಹಸ ಮುಂದುವರಿದಿದ್ದರೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚೀನಾದಲ್ಲಿ ಸತ್ತವರ ಸಂಖ್ಯೆ 3,000 ದಾಟಿದೆ. ಅಲ್ಲದೆ, ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಸುಮಾರು 90,000 ಮಂದಿಗೆ ಸೋಂಕು ತಗುಲಿದೆ.

ವೈರಾಣುವಿನಿಂದ ಬಾಧಿತರಾದವರಲ್ಲಿ ಅನೇಕರ ಸ್ಥಿತಿ ವಿಷಮವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಸೋಂಕಿನ ಕಬಂಧ ಬಾಹುಗಳು ವಿಶ್ವದ 70ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಈ ಸಾಂಕ್ರಾಮಿಕ ರೋಗ ಈಗಾಗಲೇ ವಿಶ್ವವ್ಯಾಪಿ 3,200ಕ್ಕೂ ಅಧಿಕ ಜನರ ಜೀವಗಳನ್ನು ನುಂಗಿ ಹಾಕಿದೆ.  ವಿಶ್ವದಾದ್ಯಂತ ವಿನಾಶಕಾರಿ ಕೊರೋನಾ ಸೋಂಕು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದ್ದು, ಇತ್ತೀಚಿನ ವರದಿಗಳ ಪ್ರಕಾರ ದಕ್ಷಿಣ ಕೊರಿಯಾ, ಇರಾನ್, ಅಮೆರಿಕದಲ್ಲಿ ಮತ್ತೆ ಸಾವು ಸಂಭವಿಸಿದೆ.

ಏಷ್ಯಾ, ಮಧ್ಯಪ್ರಾಚ್ಯ, ಯೂರೋಪ್, ಆಫ್ರಿಕಾ, ಅಮೆರಿಕ ಖಂಡಗಳ ಅನೇಕ ದೇಶಗಳಲ್ಲೂ ಕೋವಿಡ್ ಕಾಟ ವಿಸ್ತರಣೆಯಾಗಿದೆ.  ಇರಾನ್‍ನಲ್ಲಿ ಈ ವೈರಾಣುವಿಗೆ 50 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 34 ಜನರು ಸಾವಿಗೀಡಾಗಿದ್ದಾರೆ. ಆಪಾನ್, ಸಿಂಗಪೂರ್, ತೈವಾನ್, ವಿಯೆಟ್ನಾಂ, ಮಲೇಷ್ಯಾ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಐರ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿಯೂ ಸೋಂಕು ಪೀಡಿತರ ಸಂಖ್ಯೆ ವೃದ್ಧಿಯಾಗುತ್ತದೇ ಇದ್ದು, ಸಾವು-ನೋವಿನೊಂದಿಗೆ ಇದು ಜಾಗತಿಕ ಪಿಡುಗಾಗಿ ಪರಿಣಮಿಸಿದೆ.

ಬೀಜಿಂಗ್, ಹಾಂಕಾಂಗ್, ಶಾಂಘೈ, ಟೋಕಿಯೋ, ಸಿಂಗಪುರ್, ಮುಂಬೈ ಸೇರಿದಂತೆ ಏಷ್ಯಾದ ಷೇರು ಮಾರುಕಟ್ಟೆಗಳ ಮೇಲೆ ಇದು ದುಷ್ಪರಿಣಾಮ ಬೀರಿದ್ದು, ಕೋಟ್ಯಂತರ ರೂ.ಗಳ ನಷ್ಟವಾಗಿದೆ.

LEAVE A REPLY

Please enter your comment!
Please enter your name here