ಹಿರಿಯ ನಾಗರಿಕರಿಗೆ ಊರುಗೋಲು, ವಾಕರ್ ಉಚಿತ ವಿತರಣೆ

0
8

ಬೀದರ:ಅ.4: ಹರಿ ಓಂ ಜ್ಞಾನದೀಪ ಗ್ರಾಮೀಣ ಶಿಕ್ಷಣ ಸಂಸ್ಥೆಯು ಹಿರಿಯ ನಾಗರಿಕರಿಗೆ ವಿವಿಧ ಸಾಧನ, ಸಲಕರಣೆಗಳನ್ನು ವಿತರಿಸುವ ಮೂಲಕ ನೆರವಾಗಿದೆ.
ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರು ಸಂಸ್ಥೆ ವತಿಯಿಂದ ಆರು ಮಂದಿಗೆ ಊರುಗೋಲು, ಐವರಿಗೆ ವಾಕರ್ ಹಾಗೂ 50 ಜನರಿಗೆ ಮಾಸ್ಕ್ ಉಚಿತ ವಿತರಿಸಿದರು.
ಸಂಸ್ಥೆಯು ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಹಿತರಕ್ಷಣೆಗೆ ಶ್ರಮಿಸುತ್ತಿದೆ. ಅವರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಹರಿ ಓಂ ಜ್ಞಾನದೀಪ ಗ್ರಾಮೀಣ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂತೋಷ ಭಾಲ್ಕೆ ತಿಳಿಸಿದರು.
ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಮಾಡಿಸಿಕೊಡಲಾಗುತ್ತಿದೆ. ನೌಬಾದ್ ಬಳಿಯ ವಿಶ್ವಾಸ ಮೆಮೊರಿಯಲ್ ಪಾರ್ಕ್‍ನಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನೂ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ತೆರೆದಿರುವ ಕೇಂದ್ರದಲ್ಲಿ ದಿನಪತ್ರಿಕೆ, ಗ್ರಂಥಾಲಯ, ಟಿವಿ, ಕೇರಂ ಸೇರಿದಂತೆ ಹಿರಿಯ ನಾಗರಿಕರಿಗೆ ಕಾಲ ಕಳೆಯಲು, ಮನೋರಂಜನೆಗೆ ಸಕಲ ಸೌಕರ್ಯಗಳು ಇವೆ. ಚಹಾ ಹಾಗೂ ತಿಂಡಿ ವ್ಯವಸ್ಥೆ ಕೂಡ ಇದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಹಿರಿಯ ನಾಗರಿಕರು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ಅಚ್ಚುಕಟ್ಟಾದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಸ್ಥೆ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶ ಸಿದ್ರಾಮ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಜಗದೀಶ್ ಕೆಂಪಣ್ಣನವರ್, ಮಾರುತಿರಾವ್ ಚಂದನಹಳ್ಳಿಕರ್ ಇದ್ದರು.

LEAVE A REPLY

Please enter your comment!
Please enter your name here