ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭ. ನಾಡಗೌಡ ಪಕ್ಷಕ್ಕೆ ಬಂದರೆ ಸ್ವಾಗತ- ಡಿಸಿಎಂ ಸವದಿ

0
138

ಸಿಂಧನೂರು.ಅ.19- ಭತ್ತ ಕಟಾವಿಗೆ ಬಂದಿದ್ದು, ರೈತರ ಹಿತದೃಷ್ಟಿಯಿಂದ ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದರು.
ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಮಾಜಿ ಮಂತ್ರಿ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ನಾಡಗೌಡರಿಂದ ಮನವಿ‌ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ನೆರವಿಗೆ ಬರುವ ದೃಷ್ಟಿಯಿಂದ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುವುದೆಂದರು.
ತಾಲೂಕಿನಲ್ಲಿ ಆರ್.ಟಿ.ಓ‌ ಅಧಿಕಾರಿಗಳು ಪ್ರತಿ‌ ತಿಂಗಳು ಬಂದು ವಾಹನ ತಪಾಸಣೆ ಮಾಡುತ್ತಿದ್ದು, ಲಾಕ್‌ಡೌನ್ ನಂತರ ಅಧಿಕಾರಿಗಳು ಸಿಂಧನೂರಿಗೆ ಬಾರದೆ ಇರುವುದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಗರಕ್ಕೆ ಬಂದು ಕೆಲಸ ಮಾಡುವಂತೆ ಸೂಚಿಸುವುದಾಗಿ ತಿಳಿಸಿದ ಅವರು, ಜವಳಗೇರಾ ಗ್ರಾಮದಲ್ಲಿ ಜಾಗ ಇದ್ದು ಬಸ್ ನಿಲ್ದಾಣ ನಿರ್ಮಿಸುವಂತೆ ಶಾಸಕರ ಮನವಿಗೆ ಸ್ಪಂದಿಸಿದ ಅವರು ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣ ಆರಂಭಿಸುವಂತೆ ಭರವಸೆ ನೀಡಿದರು.
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ದೊಡ್ಡ ತಾಲೂಕಾಗಿದ್ದು ಎ.ಆರ್.ಟಿ.ಒ ಕಛೇರಿಯ ವಿಷಯ ಪ್ರಸ್ತಾಪದಲ್ಲಿದ್ದು, ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಸಿಂಧನೂರು ನಗರದಲ್ಲಿ ಎ.ಆರ್.ಟಿ.ಒ ಕಛೇರಿ ಆರಂಭಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ನೆರೆಹಾವಳಿಯಿಂದ ಹಲವು ಜಿಲ್ಲೆಗಳಲ್ಲಿ ರೈತರ ಬೆಳೆ ಹಾಗೂ ಮನೆ ನಷ್ಟವಾಗಿ ಸಾಕಷ್ಟು ಜನರು ತೊಂದರೆಯಲ್ಲಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ನೀಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಪತ್ರಕರ್ತರ ಕೇಳಿದ ಪ್ರಶ್ನೆಗೆ ಕೆಲವು ಸಚಿವರು ಮನೆಯ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಭೇಟಿ ನೀಡಿಲ್ಲ. ಈಗ ಉಸ್ತುವಾರಿಯನ್ನು ಬೇರೆಯವರಿಗೆ ನೀಡಿ ನೆರೆ ಪರಿಸ್ಥಿತಿ ಬಗ್ಗೆ ವರದಿ ಪಡೆಯಲಾಗುತ್ತಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ರಾಯಚೂರು ಜಿಲ್ಲೆಯ ನೆರೆಹಾವಳಿ ವೀಕ್ಷಣೆ ಮಾಡಲು ಬಂದಿದ್ದು, ಉಳಿದ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು.
ರಾಯಚೂರು ಜಿಲ್ಲೆಯಲ್ಲಿ 8 ಗ್ರಾಮಗಳು ತುರ್ತು ಪರಿಸ್ಥಿತಿ ಹಾಗೂ 16 ಗ್ರಾಮಗಳು ಮದ್ಯಮ ಪರಿಸ್ಥಿತಿಯಲ್ಲಿದ್ದು ಇಂದು ಅಧಿಕಾರಿಗಳ ಜೊತೆ ವೀಕ್ಷಣೆ ಮಾಡಿ ಬೆಳೆ ಹಾನಿ ಹಾಗೂ ಮನೆ ನಷ್ಟದ ಬಗ್ಗೆ ವರದಿ ತರಿಸಿಕೊಂಡು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರದಲ್ಲಿ ನಷ್ಟಕ್ಕೀಡಾದ ರೈತರು ಮತ್ತು ಸಾರ್ವಜನಿಕರಿಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ಉಪ ಚುನಾವಣೆಗಳಲ್ಲಿ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಪಕ್ಷದ ಅಭ್ಯರ್ಥಿಗಳೇ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಶಾಸಕ ನಾಡಗೌಡ ಬಿಜೆಪಿಗೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾಡಗೌಡರು ಬಿಜೆಪಿಗೆ ಬಂದರೆ ಸ್ವಾಗತ, ಸದಾ ನಾಡಗೌಡರಿಗಾಗಿ ಬಿಜೆಪಿ ಪಕ್ಷ ಬಾಗಿಲು ತೆರೆದಿರುತ್ತದೆ. ನಾಡಗೌಡ ಬಿಜೆಪಿ ಪಕ್ಷ ಸೇರುವ ಬಗ್ಗೆ ನನ್ನ ಕೇಳುವ ಬದಲು ಅವರನ್ನೇ ಕೇಳಿ ಎಂದು ಲಕ್ಷ್ಮಣ ಸವದಿ ಪಕ್ಕದಲ್ಲಿದ್ದ ಶಾಸಕ ನಾಡಗೌಡರೆ ಕಡೆ ತಿರುಗಿ ನೋಡಿ ಮುಗಳುನಗೆ ಬೀರಿದರು. ಆಗ ಶಾಸಕ ವೆಂಕಟರಾವ್ ನಾಡಗೌಡ ಏನು ಉತ್ತರ ಕೊಡದೇ ನಸು ನಗು ಬೀರಿದರು.
ಕೊರೊನಾ ಹಿನ್ನೆಲೆಯಲ್ಲಿ ‌ರಾಜ್ಯದಲ್ಲಿ ಸದ್ಯಕ್ಕೆ ಶಾಲಾ-ಕಾಲೇಜು ಆರಂಭಿಸುವ ಕುರಿತು ಸರ್ಕಾರ ಚಿಂತನೆ ಮಾಡಿಲ್ಲ. ಅಲ್ಲದೆ ಅವಶ್ಯಕತೆ ಇರುವ ಕಡೆ ಗ್ರಾಮೀಣ ಭಾಗಗಳಲ್ಲಿ ಸಾರಿಗೆ ‌ವ್ಯವಸ್ಥೆಯನ್ನು ಆರಂಭಿಸಲಾಗುವದೆಂದರು.
ಜೆಡಿಎಸ್ ಮುಖಂಡರಾದ ಜಿ.ಸತ್ಯನಾರಾಯಣ, ಲಿಂಗಪ್ಪ ದಡೆಸ್ಗೂರು, ಚಂದ್ರ ಭೂಪಾಲ‌ ನಾಡಗೌಡ, ಜಿಲಾನಿ‌ಪಾಷಾ, ಧರ್ಮನಗೌಡ, ಅಶೋಕ ಗೌಡ ಗದ್ರಟಗಿ , ನಾಗೇಶ ಹಂಚಿನಾಳ ಕ್ಯಾಂಪ್, ಮಲ್ಲೇಶಗೌಡ, ಜವಳಗೇರಾ ಗ್ರಾ.ಪ ಮಾಜಿ‌ ಅದ್ಯಕ್ಷರಾದ ಮಿಯಾಸಾಬ್, ಸೈಯದ್ ಆಸಿಫ್ ಅಲಿ‌ ಸೇರಿದಂತೆ ಇತರರು ಸಚಿವರಿಗೆ ಮನವಿ‌ಪತ್ರ ಕೊಡುವ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here