ಉಮ್ಮುಲ್ ಮೂಮಿನೀನ್ ಹ. ಆಯಿಶಾ ಸಿದ್ದೀಕಾ(ರ)-ಸಂಕ್ಷಿಪ್ತ ಪರಿಚಯ; ಈಜಾಝುದ್ದೀನ್ ಉಮರಿ

0
235

ಫೆ.12-ಉಮ್ಮುಲ್ ಮೂಮಿನೀನ್ ಅಥವಾ ವಿಶ್ವಾಸಿಗಳ ಮಾತೆ ಎಂಬುದು ಪ್ರವಾದಿ ಪತ್ನಿಯಂದಿರ ಉಪನಾಮವಾಗಿರುತ್ತದೆ.
ಆಯಿಶಾ, ಹೆಸರು ಮತ್ತು ಸಿದ್ದೀಕಃ ಇವರ ಗೌರವ ನಾಮವಾಗಿತ್ತು. ಹ. ಆಯಿಶಾ (ರ) ರನ್ನು “ಹುಮೈರಾ” ಎಂದೂ ಕರೆಯುತ್ತಿದ್ದರು. ಉಮ್ಮುಲ್ ಮೂಮಿನೀನ್ ಹಾಗೂ ಉಮ್ಮು ಅಬ್ದುಲ್ಲಾಹ್ ಇವರ ಉಪನಾಮವಾಗಿತ್ತು. ಪ್ರವಾದಿವರ್ಯರು ಹೆಚ್ಚಾಗಿ “ಬಿಂತುಸ್ಸಿದ್ದೀಕ್” (ಸತ್ಯವಂತನ ಮಗಳು) ಎಂದೇ ಕರೆಯುತ್ತಿದ್ದರು.
ಹ.ಆಯಿಶಾ (ರ) ಪ್ರವಾದಿವರ್ಯರ ಪ್ರೀತಿಯ ಪತ್ನಿಯಾಗಿದ್ದರು. ಅವರು ಪ್ರವಾದಿವರ್ಯರ ನೆಚ್ಚಿನ ಸಂಗಾತಿ ಹಾಗೂ ಇಸ್ಲಾಮಿನ ಮೊದಲ ಖಲೀಫಃರಾಗಿದ್ದ ಹ.ಅಬೂಬಕ್ರ್ ರವರ ಸುಪುತ್ರಿಯಾಗಿದ್ದರು. ತಾಯಿಯ ಹೆಸರು ಉಮ್ಮು ರೂಮಾನ್ ಆಗಿತ್ತು.
ಹ.ಆಯಿಶಾ(ರ) ರದ್ದು ಅಸಾಧಾರಣ ಪ್ರತಿಭೆ, ತುಂಬಾ ಜಾಣೆಯಾಗಿದ್ದ ಇವರು ತಮ್ಮ ಬಾಲ್ಯದಲ್ಲೇ ತಂದೆಯವರಿಂದ ಅರಬರ ಸಾಹಿತ್ಯ ಮತ್ತು ಇತಿಹಾಸವನ್ನು ಕರಗತ ಮಾಡಿಕೊಂಡಿದ್ದರು. ವಿವಾಹವಾಗುವಾಗ ಅವರ ವಯಸ್ಸಿನ ಕುರಿತು ಇತಿಹಾಸಗಾರರಲ್ಲಿ ಹಲವು ಅಭಿಪ್ರಾಯಗಳಿವೆ. ಕೆಲವರ ಪ್ರಕಾರ ಆರನೇ ವಯಸ್ಸಿನಲ್ಲೇ ಅವರ ವಿವಾಹ ವಿಧಿ ಪೂರ್ಣಗೊಂಡಿತ್ತು ಮತ್ತು ಒಂಬತ್ತನೇ ವಯಸ್ಸಿನಲ್ಲಿ ತವರು ಮನೆಯಿಂದ ಅವರನ್ನು ಬೀಳ್ಕೊಡಲಾಯಿತು. ಇನ್ನು ಕೆಲವರ ಪ್ರಕಾರ ವಿವಾಹವಾಗುವಾಗ ಅವರಿಗೆ ಹದಿನಾಲ್ಕು ವರ್ಷ, ಮತ್ತು ಕೆಲವರ ಪ್ರಕಾರ ಹದಿನೇಳು ವರ್ಷ ವಯಸ್ಸಾಗಿತ್ತು. ಹ. ಆಯಿಶಾ(ರ) ರವರ ಜನನ ದಿನಾಂಕದ ಕುರಿತು ಉಲ್ಲೇಖವಾಗಿರುವ ವ್ಯತ್ಯಾಸವೇ ಈ ವಿರೋಧಾಭಾಸಗಳಿಗೆ ಮೂಲಕಾರಣವೆಂದು ಇತಿಹಾಸತಜ್ಞರ ಅಭಿಪ್ರಾಯ. ತರ್ಕ ಏನೇ ಇದ್ದರೂ ಮದುವೆಯಾಗುವಾಗ ಅವರು ಹದಿಹರೆಯದ ಪ್ರೌಢತೆ ಮುಟ್ಟಿದ ಹೆಣ್ಣಾಗಿದ್ದರು ಹಾಗೂ ಬದುಕಿನ ಸೂಕ್ಷ್ಮತೆಯನ್ನು ಬಲ್ಲ ಪ್ರಬುದ್ಧೆಯಾಗಿದ್ದರು.
ಹ. ಆಯಿಶಾ(ರ)ರವರು ಪ್ರವಾದಿಯವರೊಂದಿಗಿನ ಎಂಟು ವರ್ಷ ಐದು ತಿಂಗಳ ವೈವಾಹಿಕ ಬದುಕಿನಲ್ಲಿ ಪ್ರವಾದಿವರ್ಯ(ಸ)ರ ನೆಚ್ಚಿನ ಬಾಳ ಸಂಗಾತಿಯಾಗಿ, ಪ್ರವಾದಿಯವರ ಪಾಠಶಾಲೆಯಿಂದ ಒಂದಿನಿತೂ ಬಿಡದೆ ಜ್ಞಾನಾರ್ಜನೆ ಮಾಡಿದ ಮೆಚ್ಚಿನ ಶಿಷ್ಯೆಯಾಗಿ, ವಿದ್ಯೆ ನೀಡುವ ಆದರ್ಶ ಅಧ್ಯಾಪಕಿಯಾಗಿ, ಜ್ಞಾನ ಮತ್ತು ಯುಕ್ತಿಯ ವಕ್ತಾರೆಯಾಗಿ ತನ್ನ ಬದುಕನ್ನು ಸಾರ್ಥಕಗೊಳಿಸಿದ ಮಹಾನುಭಾವಿಯಾಗಿದ್ದರು. ಸುಮಾರು 2210 ಹದೀಸ್(ಪ್ರವಾದಿ ಚರ್ಯೆ) ಗಳನ್ನು ಹ. ಆಯಿಶಾ(ರ) ವರದಿ ಮಾಡಿರುವರೆಂದು ದಾಖಲೆಗಳು ತಿಳಿಸುತ್ತದೆ. ಹ. ಆಯಿಶಾ(ರ) ತನಗೆ ತಿಳಿಯದ್ದನ್ನು ಪ್ರವಾದಿಯವರಲ್ಲಿ ನಿಸ್ಸಂಕೋಚವಾಗಿ ಕೇಳಿ ತಿಳಿದು ಕೊಳ್ಳುತ್ತಿದ್ದರು. ಪ್ರವಾದಿವರ್ಯ(ಸ)ರು ಬಹಳ ಮುತುವರ್ಜಿಯಿಂದಲೇ ಅವರಿಗೆ ಜ್ಞಾನವನ್ನು ಎರೆದು ಕೊಡುತ್ತಿದ್ದರು. ನಮಾಝ್, ಝಕಾತ್, ಉಪವಾಸ, ಹಜ್ಜ್, ದ್ಸಿಕ್ರ್ ಮತ್ತು ದುಆ……. ಗಳ ಧಾರ್ಮಿಕ ವಿಧಿವಿಧಾನಗಳನ್ನು, ವಿವಾಹ, ವಿಚ್ಛೇದನ, ವ್ಯಾಪಾರ ವಹಿವಾಟು, ಯುದ್ಧ, ಒಪ್ಪಂದ……… ಗಳ ಕುರಿತು ಶರೀಯತ್ ನ ನಿರ್ಣಯಗಳನ್ನು, ಕುಟುಂಬ ವ್ಯವಸ್ಥೆ, ಮಾನವ ಹಕ್ಕು, ಮಹಿಳೆಯರ ಹಕ್ಕು, ಸಮಾಜದಲ್ಲಿ ಮಹಿಳೆಯರ ಪಾತ್ರ, ರಾಜಕೀಯ, ಆರ್ಥಿಕತೆ….. ಮುಂತಾದ ಸಾಮುದಾಯಿಕ ಸಮಸ್ಯೆಗಳನ್ನು…. ಮರಣ, ಪುನರುಜ್ಜೀವನ, ವಿಚಾರಣೆ, ಪ್ರತಿಫಲ, ಸ್ವರ್ಗ ಮತ್ತು ನರಕ ಮುಂತಾದ ಪಾರತ್ರಿಕ ವಿಷಯಗಳನ್ನು….. ಒಂದೊಂದಾಗಿ ಪ್ರವಾದಿವರ್ಯ(ಸ)ರು ಅವರಿಗೆ ವಿವರಿಸಿ ಕೊಡುತ್ತಿದ್ದರು, ಅವರಾದರೋ ಕುತೂಹಲ ಮತ್ತು ಆಸಕ್ತಿಯಿಂದಲೇ ಅದನ್ನೆಲ್ಲಾ ಕರಗತ ಮಾಡಿಕೊಳ್ಳುತ್ತಿದ್ದರು.

~~ ಈಜಾಝುದ್ದೀನ್ ಉಮರಿ

LEAVE A REPLY

Please enter your comment!
Please enter your name here