ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲು ಸಿದ್ಧ: ಡಿಸಿ ಸತೀಶ್

ತಿಪ್ಪನಹಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ

0
92

ತಿಪ್ಪನಹಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ

ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲು ಸಿದ್ಧ: ಡಿಸಿ ಸತೀಶ್

ರಾಯಚೂರು,ಅ.೧೬: ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತವನ್ನು ಕೊಂಡೊಯ್ದು, ಅವರ ಸಮಸ್ಯೆಗೆ ಸ್ಥಳದಲ್ಲೆಯೇ ಪರಿಹಾರ ಕಂಡುಕೊಳ್ಳುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹೇಳಿದರು.

ಅವರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿನ ಗ್ರಾಮಸ್ಥರ ಪಹಣಿ, ಪಿಂಚಣಿ, ಆಶ್ರಯ ಮನೆಗಳ ಸಮಸ್ಯೆ, ಸರ್ಕಾರಿ ಭೂಮಿ ಒತ್ತುವರಿ, ಪಡಿತರ ಅಂಗಡಿಗಳ ಸಮಸ್ಯೆಗಳು ಸೇರಿದಂತೆ ಕಂದಾಯ ಇಲಾಖೆ ವ್ಯಾಪ್ತಿಗಳಲ್ಲಿ ಬರುವ ವಿವಿಧ ವ್ಯಾಜ್ಯಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ರಾಜ್ಯ ಸರ್ಕಾರದ ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬರು ಸದುಪಯೋಗಪಡಿಸಿಕೊಂಡು ಅರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಬೇಕು. ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಒಂದು ಒಳ್ಳೆಯ ಅವಕಾಶವಾಗಿದೆ ಎಂದರು.

ಅದ್ದೂರಿ ಸ್ವಾಗತ: 

ಜಿಲ್ಲೆಯ ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹಾಗೂ ತಹಸೀಲ್ದಾರ್ ಮಂಜುನಾಥ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರನ್ನು ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುವ ಡೊಳ್ಳಿನ ಮೂಲಕ ಗ್ರಾಮದೊಳಗೆ ಮೆರವಣಿಗೆ ಸಮೇತ ಕರೆತರಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಕುಂಭ ಮೆರವಣಿಗೆ ಮತ್ತು ಆರತಿ ಮಾಡುವುದರ ಮೂಲಕ ಹಾಗೂ ಡೊಳ್ಳು ಕಲಾತಂಡಗಳ ಮೂಲಕ ಸ್ವಾಗತಿಸಿಕೊಂಡರು. ಹಳ್ಳಿಯ ಪ್ರತಿ ವಿದ್ಯುತ್ ಕಂಬಗಳಿಗೆ ತೇಗಿನ ತೋರಣಗಳು ಕಂಗೊಳಿಸುತ್ತಿದ್ದವು.ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರೆಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

೮೦ ಅರ್ಜಿಗಳು ಸ್ವೀಕಾರ, ೪೩ಅರ್ಜಿಗಳ ಇತ್ಯರ್ಥ: 

ಗ್ರಾಮಸ್ಥರಿಂದ ಈ ವೇಳೆ ಅಹವಾಲು ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ, ಗ್ರಾಮ ಪಂಚಾಯತಿ, ಆಹಾರ, ಲೋಕೋಪಯೋಗಿ, ಭೂ ಮಾಪನ, ಕೃಷಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ವಿಕಲಚೇತನ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ೮೦ ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದ್ದು, ಇವುಗಳಲ್ಲಿ ೪೩ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದ್ದು, ಇನ್ನೂ ೩೭ ಅರ್ಜಿಗಳು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದಲ್ಲಿ ಅರ್ಜಿಗಳು ಬಂದಿವೆ. ದೇವರಗುಡ್ಡ ದಿಂದ ಸಿಂಧನೂರಿಗೆ ಸಂಪರ್ಕಿಸುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಕೂಡಲೇ ಈ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here