₹500 ದಂಡ ಹಾಕಿದ್ದಕ್ಕೆ ₹10 ಲಕ್ಷ ಪರಿಹಾರ! ವಕೀಲನ ವಿರುದ್ಧ ಹೋಗಿ ಪೇಚಿಗೆ ಸಿಲುಕಿದ ಪೊಲೀಸ್

0
169

ನವದೆಹಲಿ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದ್ದರೂ, ಕೆಲವರು ಅದರತ್ತ ಗಮನ ಕೊಡದಿರುವ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಒಂದು ಸಾವಿರ ರೂಪಾಯಿಗೆ ಏರಿಸಿರುವುದು ಇತ್ತೀಚಿನ ಬೆಳವಣಿಗೆ. ಸ್ವಲ್ಪ ದಿನಗಳ ಹಿಂದೆ ದಂಡದ ಮೊತ್ತ 500 ರೂಪಾಯಿ ಇದ್ದ ಸಂದರ್ಭದಲ್ಲಿ ನಡೆಸಿರುವ ಕುತೂಹಲಕರ ಘಟನೆ ಇದಾಗಿದೆ.

ಮಾಸ್ಕ್​ ನಿಯಮದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದ ಸರ್ಕಾರ, ಒಂಟಿಯಾಗಿ ಕಾರಿನಲ್ಲಿ ಹೋಗುತ್ತಿದ್ದರೆ ಮಾಸ್ಕ್​ ಧರಿಸುವುದು ಅಗತ್ಯವಿಲ್ಲ ಎಂದಿದೆ. ಆದರೆ ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚಿಗೆ ಇದ್ದರೆ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು ಎನ್ನುವುದು ನಿಯಮ.

ಅದರಂತೆ. ದೆಹಲಿ ಹೈಕೋರ್ಟ್​ನ ಸೌರಭ್ ಶರ್ಮ ಎನ್ನುವ ಹಿರಿಯ ವಕೀಲರು ಸೆಪ್ಟೆಂಬರ್​ 9ರಂದು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದರು. ಅವರು ನಿಯಮಯದಂತೆ ಮಾಸ್ಕ್​ ಧರಿಸಲಿಲ್ಲ. ಪೊಲೀಸರು ಅವರನ್ನು ಅಡ್ಡಗಟ್ಟಿಬಿಟ್ಟರು. ಪಾಪ ಅವರಿಗೇನು ಗೊತ್ತು ಇವರು 20 ವರ್ಷ ಅನುಭವ ಹೊಂದಿರುವ ವಕೀಲರೆಂದು. ಆ ಪೊಲೀಸರಿಗೆ ಸರಿಯಾಗಿ ನಿಯಮ ಗೊತ್ತಿತ್ತೋ, ಗೊತ್ತಿಲ್ಲವೋ, ಒಟ್ಟಿನಲ್ಲಿ ಸೌರಭ್​ ಅವರ ಕಾರಿಗೆ ಅಡ್ಡಹಾಕಿಬಿಟ್ಟರು.

ಇವರು ಕಾರಣ ಕೇಳಿದಾಗ, ಮಾಸ್ಕ್​ ಹಾಕಿಲ್ಲದ ಕಾರಣ, 500 ರೂಪಾಯಿ ದಂಡ ನೀಡುವಂತೆ ಅಲ್ಲಿದ್ದ ಪೊಲೀಸ್​ ಹೇಳಿದ್ದಾರೆ.
ಇದರಿಂದ ಗರಂ ಆದ ವಕೀಲರು ನಿಯಮಗಳನ್ನು ಪೊಲೀಸರಿಗೆ ಹೇಳಿದ್ದಾರೆ. ತಾವು ವಕೀಲರಾಗಿದ್ದು, ಎಲ್ಲಾ ನಿಯಮಗಳ ಪಾಲನೆ ಮಾಡಿರುವುದಾಗಿಯೂ ಹೇಳಿದ್ದಾರೆ. ಪೊಲೀಸರಿಗೆ ಎಲ್ಲಾ ರೀತಿಯ ಕಾನೂನು ಕಲಿಸಲು ಮುಂದಾಗಿದ್ದಾರೆ.

ಆದರೆ ಆ ಪೊಲೀಸ್​ ಮಾತ್ರ ಪಟ್ಟು ಬಿಡಲೇ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ, ಅದೆಲ್ಲಾ ಗೊತ್ತಿಲ್ಲ. ಈಗ 500 ರೂಪಾಯಿ ದಂಡ ಕಟ್ಟಿ ಎಂದಿದ್ದಾರೆ. ಸಿಟ್ಟಿನಿಂದ ವಕೀಲರು ಬೇರೆ ದಾರಿ ಕಾಣದೇ ದಂಡ ಕಟ್ಟಿಬಂದಿದ್ದಾರೆ.

ಹೇಳಿಕೇಳಿ ವಕೀಲರು. ಬಿಟ್ಟಾರೆಯೇ? ಇದೀಗ ಹೈಕೋರ್ಟ್​ಗೆ ಈ ದಂಡದ ವಿರುದ್ಧ ಅರ್ಜಿ ಹಾಕಿದ್ದಾರೆ. ನಿಯಮ ಪಾಲನೆ ಮಾಡಿದರೂ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ನಡೆದುಕೊಂಡಿರುವ ರೀತಿಯ ಕುರಿತು ಅರ್ಜಿಯಲ್ಲಿ ವಿವರಿಸಿರುವ ಸೌರಭ್​ ಅವರು, ತಮಗಾಗಿರುವ ಮಾನಸಿಕ ಹಿಂಸೆಯ ಕುರಿತು ಉಲ್ಲೇಖಿಸಿದ್ದಾರೆ.

ಮಾತ್ರವಲ್ಲದೇಮ ತಮ್ಮ 500 ರೂಪಾಯಿ ದಂಡದ ಹಣವನ್ನು ವಾಪಸ್​ ನೀಡುವಂತೆ ಹಾಗೂ ತಮಗಾಗಿರುವ ಅನ್ಯಾಯಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಪೊಲೀಸರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಉಲ್ಲೇಖಮಾಡಿದ್ದಾರೆ.

ವಕೀಲರು ನಿಯಮ ಪಾಲನೆ ಮಾಡಿದ್ದರೂ ದಂಡ ವಸೂಲಿ ಮಾಡಿರುವ ಪೊಲೀಸ್​ ಅಧಿಕಾರಿ ಸದ್ಯ ಪೇಚಿಗೆ ಸಿಲುಕಿದ್ದಾರೆ. ಕೋರ್ಟ್​ ಏನು ಆದೇಶ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ!

LEAVE A REPLY

Please enter your comment!
Please enter your name here