ನಾಯಕತ್ವ ಬದಲಾಗುವ ವರೆಗೂ ಸಂಪುಟ ವಿಸ್ತರಣೆ ಅಸಾಧ್ಯ

ಬಿಜೆಪಿಯಲ್ಲಿ ನಾಯಕತ್ವ ಗೊಂದಲ ಇತ್ಯರ್ಥವಾಗುವವರೆಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಗಗನಕುಸುಮವಾಗೇ ಉಳಿಯಲಿದೆ.

0
188

 ಬೆಂಗಳೂರು,ನ.21:  ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಗೊಂದಲ ಇತ್ಯರ್ಥವಾಗುವವರೆಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಗಗನಕುಸುಮವಾಗೇ ಉಳಿಯಲಿದೆ.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವವನ್ನು ಬದಲಾವಣೆ ಮಾಡಬೇಕೆ ಇಲ್ಲವೇ 2023ರ ವಿಧಾನಸಭೆ ಚುನಾವಣೆವರೆಗೂ ಅವರನ್ನೇ ಮುಂದುವರೆಸಬೇಕೆ ಎಂಬುದರ ಕುರಿತು ಈ ಬಾರಿ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಖಚಿತವಾಗಿದೆ.

ಹೆಚ್ಚೆಂದರೆ ಈ ಬಾರಿ ಪುನರಚನೆಗೆ ಅವಕಾಶ ಕೊಡದೆ ಕೇವಲ ವಿಸ್ತರಣೆಗೆ ಮಾತ್ರ ಅವಕಾಶ ನೀಡಲಿದ್ದು, ಆಪರೇಷನ್ ಕಮಲಕ್ಕೆ ಒಳಗಾಗಿದ್ದ ವಿಧಾನಪರಿಷತ್ ಸದಸ್ಯರಾಗಿರುವ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಶಾಸಕ ಮುನಿರತ್ನ ಸಂಪುಟಕ್ಕೆ ಸೇರ್ಪಡೆಯಾಗಬಹುದು.  ದೇಶದಲ್ಲಿ ಸದ್ಯ ಕೋವಿಡ್ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮಾರ್ಚ್ ತಿಂಗಳ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಒಂದು ವೇಳೆ ಕೋವಿಡ್‍ಗೆ ಲಸಿಕೆ ಸಿಕ್ಕರೆ ಜನರ ಗಮನವನ್ನು ಬೇರೆಡೆ ಸೆಳೆದು ಅದೇ ವೇಳೆ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ವರಿಷ್ಠರು ವೇದಿಕೆಯನ್ನು ಸಿದ್ದಪಡಿಸುತ್ತಿದ್ದಾರೆ.  ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಬಜೆಟ್ ಮಂಡನೆಯಾಗಲಿದ್ದು, ಅಷ್ಟರೊಳಗೆ ಬಿಎಸ್‍ವೈ ಬದಲಾಗಬೇಕು ಇಲ್ಲದಿದ್ದರೆ 2023ರ ಚುನಾವಣೆವರೆಗೂ ಮುಂದುವರೆಯುವುದು ಖಚಿತವಾಗಿದೆ.

ಈಗಿನ ಲೆಕ್ಕಾಚಾರವನ್ನು ಅವಲೋಕಿಸಿದರೆ ವರಿಷ್ಠರು ನೇರವಾಗಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಚಿಂತನಮಂಥನ ಆರಂಭಿಸಿದ್ದಾರೆ.  ಕಳೆದ ಮಾರ್ಚ್ ತಿಂಗಳಿನಲ್ಲೇ ಇದು ಚರ್ಚೆ ಹುಟ್ಟು ಹಾಕಿತ್ತು. ಆದರೆ ಆ ವೇಳೆಗೆ ದೇಶಾದ್ಯಂತ ಕೋವಿಡ್ ಕಂಡುಬಂದ ಕಾರಣ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಎಂಬಂತೆ ಹೇಗೋ ಬಿಎಸ್‍ವೈ ಪಾರಾದರು.

ಕಳೆದ ತಿಂಗಳು ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರಮೋದಿಯನ್ನು ಸಂಸತ್ ಭವನದಲ್ಲಿ ಭೇಟಿಯಾದಾಗಲೇ ನಾಯಕತ್ವ ಬದಲಾವಣೆ ಮುನ್ನಲೆಗೆ ಬಂದಿತ್ತು.  ಗೌರವಯುತವಾಗಿ ನೀವು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು. ಪಕ್ಷದ ಅಲಿಖಿತ ನಿಯಮದಂತೆ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ಕರ್ನಾಟಕದಲ್ಲಿ ನೀವು ಪಕ್ಷವನ್ನು ಕಟ್ಟಿ ಬೆಳೆಸಿದ್ದೀರಿ ಎಂಬ ಏಕೈಕ ಕಾರಣಕ್ಕಾಗಿ ವಿನಾಯಿತಿ ನೀಡಲಾಗಿದೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದರು.

ಇದೀಗ ಪಕ್ಷ ಮತ್ತು ಸರ್ಕಾರದ ವಲಯದಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಗುಸುಗುಸು ಕೇಳಿಬರುತ್ತಿರುವುದರಿಂದ ವರಿಷ್ಠರು ಸ್ಪಷ್ಟ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ.  ದೆಹಲಿ ವಲಯದಿಂದ ಬಿ.ಎಸ್ ಯಡಿಯೂರಪ್ಪ ಪದೇ ಪದೇ ಹಿನ್ನಡೆಯನ್ನು ಅನುಭವಿಸಲು ಹಲವಾರು ಕಾರಣಗಳಿವೆ. ಮೂರ್ನಾಲ್ಕು ಬಾರಿ ಸಂಪುಟ ವಿಸ್ತರಣೆಗೆ ಅನುಮತಿ ಕೋರಿ ವರಿಷ್ಠರನ್ನು ಭೇಟಿಯಾದರೂ ಗ್ರೀನ್ ಸಿಗ್ನಲ್ ಮಾತ್ರ ಸಿಗುತ್ತಿಲ್ಲ. ಅಷ್ಟಕ್ಕೂ ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಬಿಎಸ್‍ವೈ ಅವರಂತಹ ಮಾಸ್ ನಾಯಕನನ್ನು ಹೈಕಮಾಂಡ್ ಹೀಗೆಲ್ಲಾ ಸತಾಯಿಸಲು ಕಾರಣ ಏನು ಎಂಬುದು ಸಹಜವಾಗಿ ಮೂಡುವ ಪ್ರಶ್ನೆ.

ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಸರ್ಕಾರವನ್ನು ರಚನೆ ಮಾಡಿದರೂ ಮೂಲ ಬಿಜೆಪಿಗರಿಗೆ ಇದರಿಂದ ಸಂತೋಷವೇನೂ ಇಲ್ಲ. ಪಕ್ಷದಲ್ಲಿ ವಲಸೆ ಬಂದವರ ಪ್ರಭಾವವೇ ಹೆಚ್ಚಾಗಿದೆ ಎಂಬುವುದು ಇವರ ಒಂದು ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷ ಕಟ್ಟಿದವರಿಗೆ ಹಾಗೂ ಸೈದ್ದಾಂತಿಕವಾಗಿ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಣೆ ಮಾಡಿದವರಿಗೆ ಇದೀಗ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನವೂ ಇದೆ.

ಇಷ್ಟು ಮಾತ್ರ ಅಲ್ಲ. ರಾಜ್ಯ ಸರ್ಕಾರದ ಪ್ರತಿಯೊಂದು ಹೆಜ್ಜೆಗಳಲ್ಲಿ ಬಿಎಸ್‍ವೈ ಕುಟುಂಬದ ಅದರಲ್ಲೂ ಬಿ.ವೈ ವಿಜಯೇಂದ್ರರ ಹಸ್ತಕ್ಷೇಪ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಎರಡು ಉಪಚುನಾವಣೆಗಳಲ್ಲಿ ಬಿ.ವೈ ವಿಜಯೇಂದ್ರ ಅವರನ್ನು ನಾಯಕ ಎಂದು ಬಿಂಬಿಸಲಾಗಿದೆ. ಈ ಮೂಲಕ ಬಿಜೆಪಿಯ ಮೂಲತತ್ವದ ವಿರುದ್ಧ ಬಿಎಸ್‍ವೈ ನಡೆದುಕೊಳ್ಳುತ್ತಿದ್ದಾರೆ ಎಂಬುದು ಕೆಲವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ಬಿಜೆಪಿ ಹೇಳಿಕೇಳಿ ಕೇಡರ್ ಪಕ್ಷ. ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ ಅಲ್ಲದೆ ಕುಟುಂಬ ರಾಜಕಾರಣದ ವಿರುದ್ಧವಾಗಿ ಪಕ್ಷದ ಸಿದ್ದಾಂತ. ಇದನ್ನು ಬಿಜೆಪಿಯ ಎಲ್ಲಾ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಯಡಿಯೂರಪ್ಪ ತಮ್ಮ ಪುತ್ರನಿಗೆ ಆದ್ಯತೆ ನೀಡುವ ಮೂಲಕ ಪಕ್ಷದ ಚೌಕಟ್ಟನ್ನು ಮೀರಿ ನಡೆಯುತ್ತಿದ್ದಾರೆ ಎಂಬುದು ಬಿಜೆಪಿ ಮುಖಂಡರ ವಾದವಾಗಿದೆ.

ಈ ವಿಚಾರವಾಗಿ ಕೆಲವು ಮುಖಂಡರು ಹೈಕಮಾಂಡ್‍ಗೆ ದೂರು ಕೊಟ್ಟಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿರುವ ರಾಜ್ಯದ ನಾಯಕರೂ ವರಿಷ್ಠರ ಗಮನಕ್ಕೆ ಈ ಎಲ್ಲಾ ಸಂಗತಿಯನ್ನು ತಂದಿದ್ದಾರೆ. ಇದೇ ಕಾರಣಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಬಿಎಸ್‍ವೈ ಮಾತು ನಡೆಯುತ್ತಿಲ್ಲ. ದೆಹಲಿಗೆ ಹೋದರೂ ವರಿಷ್ಠರನ್ನು ಭೇಟಿ ಮಾಡಿದರೂ ಬಿಎಸ್‍ವೈ ಇಚ್ಛೆ ಪೂರೈಕೆಯಾಗುತ್ತಿಲ್ಲ. ಆದರೆ ಇದನ್ನೆಲ್ಲಾ ಎಷ್ಟರ ಮಟ್ಟಿಗೆ ಬಿಎಸ್‍ವೈ ಸಹಿಸಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲ.

 

LEAVE A REPLY

Please enter your comment!
Please enter your name here