*ಟಿಪ್ಪು ಸುಲ್ತಾನ್ ನನ್ನು ಗೌಡರು ಕೊಂದರು ಎಂಬುದು ರಾಜಕೀಯ ಪ್ರೇರಿತ ಆಪಾದನೆ; ನವೀನ್ ಸುರಿಂಜೆ

*ಇತಿಹಾಸದಲ್ಲಿ ಘಟಿಸದೇ ಇರುವ ಘಟನೆಯನ್ನು ಸೃಷ್ಟಿಸಿ ಟಿಪ್ಪು ಕೊಂದ ವೀರರೆಂದು ಒಕ್ಕಲಿಗರನ್ನು ಹೊಗಳುವುದರ ಹಿಂದೆ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರೆಂದು ಬಿಂಬಿಸುವ ಬ್ರಾಹ್ಮಣ್ಯದ ಸಂಚು ಅಡಗಿದೆ

0
174

*Naveen Soorinje ಬರಹ….*

*ಟಿಪ್ಪು ಸುಲ್ತಾನ್ ನನ್ನು ಗೌಡರು ಕೊಂದರು ಎಂದು ಸಂಘಪರಿವಾರ ಹೊಸ ಕತೆಯನ್ನು ಸೃಷ್ಟಿಸುವುದರ ಹಿಂದೆ , ಒಕ್ಕಲಿಗರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಗುಪ್ತ ಅಜೆಂಡಾ ಹೊಂದಿದೆ. ಮುಂದಿನ ಪೀಳಿಗೆಯು ಇತಿಹಾಸವನ್ನು ಅಧ್ಯಯನ ಮಾಡುವಾಗ ಒಕ್ಕಲಿಗರು ಬ್ರಿಟೀಷರ ಜೊತೆ ಇದ್ದರು ಎಂಬ ಅಂಶ ಇರಕೂಡದು ಎಂದಿದ್ದರೆ ಸಂಘಪರಿವಾರದ ಈ ಹಿಡನ್ ಅಜೆಂಡಾವನ್ನು ಈಗಲೇ ಸಮುದಾಯ ವಿರೋಧಿಸಬೇಕು.*

*ನಮ್ಮ ನಾಡಿನ ಹೆಮ್ಮೆಯ ಒಕ್ಕಲಿಗರು ಟಿಪ್ಪುವಿನಂತೆಯೇ ಬ್ರಿಟೀಷರ ವಿರುದ್ಧವಿದ್ದರು. ಬ್ರೀಟಿಷರ ಪರವಿದ್ದಾರೆ ಎಂಬ ಅನುಮಾನದಲ್ಲಿ ಕೊಡವರು, ಕ್ರಿಶ್ಚಿಯನ್ನರು, ನಾಯರ್ ಗಳನ್ನು ಟಿಪ್ಪು ವಿಚಾರಣೆ ನಡೆಸಿದ್ದ ಮತ್ತು ಅವರ ಮೇಲೆ ನಿಗಾ ಇರಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆಯೇ ಹೊರತು ಒಕ್ಕಲಿಗರನ್ನು ಟಿಪ್ಪು ಟಾರ್ಗೆಟ್ ಮಾಡಿದ ದಾಖಲೆಗಳು ಸಿಗಲ್ಲ. ಹಾಗೆ ನೋಡಿದರೆ ಒಕ್ಕಲಿಗರು ಅಥವಾ ಬಂಟರು ಶಿಫಾರಸ್ಸು ಮಾಡಿದರೆ ಟಿಪ್ಪು ಯಾರ ಮೇಲಿನ ದಾಳಿಯನ್ನಾದರೂ ನಿಲ್ಲಿಸಿಬಿಡುತ್ತಿದ್ದ. ಬ್ರಿಟೀಷರು ಚರ್ಚ್ ಕಟ್ಟುತ್ತಿದ್ದಾರೆ ಎಂಬ ಅನುಮಾನದಲ್ಲಿ ಕ್ರಿಶ್ಚಿಯನ್ ಚರ್ಚ್ ಮೇಲೆ ಟಿಪ್ಪು ದಾಳಿ ಮಾಡಿದಾಗ ಒಕ್ಕಲಿಗರಾಗಿರುವ ಬಂಟರ ಮನವಿ ಮೇರೆಗೆ ದಾಳಿಯನ್ನೇ ಕೈ ಬಿಟ್ಟ ಉದಾಹರಣೆಗಳು ನಮ್ಮ ಮುಂದಿವೆ.*

*ಹಾಗೆ ನೋಡಿದರೆ ಟಿಪ್ಪು ಕಾಲದಲ್ಲಿ ಒಕ್ಕಲಿಗರು ಪ್ರತಿಷ್ಠೆಯ ಜೀವನ ನಡೆಸಿದರು. ಬ್ರಾಹ್ಮಣರ ಶಾನುಭೋಗ ವ್ಯವಸ್ಥೆಯನ್ನು ರದ್ದು ಮಾಡಿ “ಊರ ಗೌಡ” ಪದ್ದತಿಯನ್ನು ಜಾರಿಗೆ ತಂದಿದ್ದನು. ಬ್ರಾಹ್ಮಣರು ಶಾನುಭೋಗರಾಗಿದ್ದರೆ ಒಕ್ಕಲಿಗರು ಮತ್ತಿತರ ಜಾತಿಗಳು ಬ್ರಾಹ್ಮಣರ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ಬ್ರಾಹ್ಮಣರಿಗೆ ಉಚಿತವಾಗಿ ಕೃಷಿ ಉತ್ಪನ್ನಗಳನ್ನು ಕೊಡಬೇಕಿತ್ತು. ಇದು ಕೃಷಿ ಮೇಲೆ ಪರಿಣಾಮ ಬಿದ್ದು ಆರ್ಥಿಕ ವ್ಯವಸ್ಥೆ ಹಾಳಾಗುತ್ತಿತ್ತು. ಹಾಗಾಗಿ ಕೃಷಿಕರೇ ಊರ ಗೌಡನಾಗಿರಬೇಕು ಎಂದು ಆದೇಶ ಹೊರಡಿಸಿದ. ಕಂದಾಯ ಲೆಕ್ಕಪತ್ರ ನೋಡಲು ಅಕ್ಷರಾಭ್ಯಾಸ ಇದ್ದ ಬ್ರಾಹ್ಮಣರ ಅವಶ್ಯಕತೆ ಇದ್ದಿದ್ದರಿಂದ ಬ್ರಾಹ್ಮಣರನ್ನು ಸಂಬಳಕ್ಕೆ ಕುಲಕರ್ಣಿಗಳನ್ನಾಗಿ ನೇಮಿಸಿದ. ಕುಲಕರ್ಣಿಗಳಿಗೆ ಸಂಬಳವನ್ನು ಊರ ಗೌಡರೇ ಕೊಡಬೇಕಿದ್ದರಿಂದ ಗೌಡರು ಸಾಮಾಜಿಕ ಪ್ರತಿಷ್ಟೆಯನ್ನು ಉಳಿಸಿಕೊಂಡಿದ್ದರು.*

*ಟಿಪ್ಪುವಿನ ಸೈನ್ಯದಲ್ಲಿ ಮೈಸೂರು, ಮಂಡ್ಯ ಭಾಗದ ಒಕ್ಕಲಿಗ ಮತ್ತು ಕುರುಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಕಾರಣಕ್ಕಾಗಿ ಸೈನಿಕರಿಗೆ ಭೂಮಿ ನೀಡುವ ಯೋಜನೆ ಜಾರಿಗೆ ತಂದ. ಇದರ ದೊಡ್ಡ ಫಲಾನುಭವಿಗಳು ಒಕ್ಕಲಿಗರು.*

*ಪಾಳೇಗಾರ ವ್ಯವಸ್ಥೆಯನ್ನು ನಾಶ ಮಾಡಿ ಸಾಮಾನ್ಯ ಒಕ್ಕಲಿಗರಿಗೆ ಭೂಮಿಯನ್ನು ಹಂಚಿದ‌. ಹಾಗಾಗಿಯೇ ಭೂ ರಹಿತ ಒಕ್ಕಲಿಗರೇ ಇಲ್ಲವೇನೋ ಎನ್ನುವಂತೆ ಒಕ್ಕಲಿಗರು ಕೃಷಿಯಲ್ಲಿ ಅಭಿವೃದ್ದಿಯನ್ನು ಕಂಡರು. ಕೃಷಿಕರು ಅಂದರೆ ಒಕ್ಕಲಿಗರು ಎಂಬಷ್ಟು ಕೃಷಿ ಉತ್ಪಾದನೆಯಲ್ಲಿ ಹಿಡಿತ ಸಾಧಿಸಿದರು.*

*ಟಿಪ್ಪುವಿನ ಕಾಲದಲ್ಲಿ ಸೈನಿಕರಿಗೆ ಭೂಮಿ ಮತ್ತು ಉತ್ತಮ ಸಂಬಳ ದೊರಕುವುದರ ಜೊತೆಗೆ ಸಾಮಾಜಿಕ ಸ್ಥಾನಮಾನಗಳೂ ಸಿಕ್ಕಿರುವಾಗ ಒಕ್ಕಲಿಗರು ಯಾಕೆ ಬ್ರಿಟೀಷರ ಸೈನ್ಯ ಸೇರುತ್ತಾರೆ ?*

*ಇತಿಹಾಸದಲ್ಲಿ ಘಟಿಸದೇ ಇರುವ ಘಟನೆಯನ್ನು ಸೃಷ್ಟಿಸಿ ಟಿಪ್ಪು ಕೊಂದ ವೀರರೆಂದು ಒಕ್ಕಲಿಗರನ್ನು ಹೊಗಳುವುದರ ಹಿಂದೆ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರೆಂದು ಬಿಂಬಿಸುವ ಬ್ರಾಹ್ಮಣ್ಯದ ಸಂಚು ಅಡಗಿದೆ ಎಂದು ತಿಳಿದಿರಲಿ.*

– ನವೀನ್ ಸೂರಿಂಜೆ

LEAVE A REPLY

Please enter your comment!
Please enter your name here