ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹಸ್ತಕ್ಷೇಪದ ವಿರುದ್ಧ ತಿರುಗಿ ಬಿದ್ದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯರು,

ಎರಡನೇ ಸಾಮಾನ್ಯ ಸಭೆಯ ಅಜೆಂಡ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. ಈ ಅಜೆಂಡದಲ್ಲಿ ಪ್ರಮುಖವಾಗಿ ಎರಡು ವಿಷಯ ಮಂಡಿಸಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮತ್ತು ಓಓಎಲ್ ಆಸ್ತಿಗಳಿಗೆ ಹಕ್ಕುಪತ್ರ ನೀಡುವ ವಿಷಯ ಪ್ರಸ್ತಾಪಿಸಲಾಗಿದೆ.

0
198

ಬಿಜೆಪಿ ಹಸ್ತಕ್ಷೇಪ – ಆಡಳಿತರೂಢ ಸದಸ್ಯರ ಆಕ್ರೋಶ

ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹಸ್ತಕ್ಷೇಪದ ವಿರುದ್ಧ ತಿರುಗಿ ಬಿದ್ದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯರು,

ರಾಯಚೂರು.ಮಾ.೦೨- ಆಡಳಿತರೂಢ ಕಾಂಗ್ರೆಸ್ ಪಕ್ಷದ ನಗರಸಭೆ ಆಡಳಿತವನ್ನು ನಿಯಂತ್ರಿಸುವ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹಸ್ತಕ್ಷೇಪದ ವಿರುದ್ಧ ತಿರುಗಿ ಬಿದ್ದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಷಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಮಹಾಸಭೆಯ ಅನುಮೋದನೆ ಪಡೆಯುವಂತೆ ಆಗ್ರಹಿಸಿ, ಇಂದು ನಗರಸಭೆ ಅಧ್ಯಕ್ಷರಿಗೆ ಮನವಿ ನೀಡುವ ಮೂಲಕ ಶಾಸಕರಿಗೆ ಸೆಡ್ಡು ಹೊಡೆದಿದ್ದಾರೆ.

ಎರಡನೇ ಸಾಮಾನ್ಯ ಸಭೆಯ ಅಜೆಂಡ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. ಈ ಅಜೆಂಡದಲ್ಲಿ ಪ್ರಮುಖವಾಗಿ ಎರಡು ವಿಷಯ ಮಂಡಿಸಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮತ್ತು ಓಓಎಲ್ ಆಸ್ತಿಗಳಿಗೆ ಹಕ್ಕುಪತ್ರ ನೀಡುವ ವಿಷಯ ಪ್ರಸ್ತಾಪಿಸಲಾಗಿದೆ. ಈ ಎರಡು ರಾಜಕೀಯವಾಗಿ ಅತ್ಯಂತ ಮಹತ್ವದ ಅಂಶಗಳಾಗಿದ್ದರಿಂದ ಬಿಜೆಪಿಯ ಶಾಸಕರು ಯಾವುದೇ ಕಾರಣಕ್ಕೂ ಈ ಎರಡು ವಿಷಯ ನಗರಸಭೆ ಅಜೆಂಡದಲ್ಲಿ ಸೇರಿಸದಂತೆ ಹಸ್ತಕ್ಷೇಪ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮತ್ತೊಂದು ಸಂಘರ್ಷಕ್ಕೆ ದಾರಿ ಮಾಡಿದೆ.

ನಿನ್ನೆ ಕಾಂಗ್ರೆಸ್ ಕೆಪಿಸಿಸಿ ಮಟ್ಟದ ಮುಖಂಡರು ಮತ್ತು ಬಿಜೆಪಿಯ ಶಾಸಕರು ಸೇರಿದಂತೆ ಇನ್ನಿತರ ಮುಖಂಡರ ಸಭೆಯಲ್ಲಿ ಅಜೆಂಡಗಳ ನಿರ್ಧಾರದ ಬಗ್ಗೆ ಚರ್ಚೆ ನಡೆಯಿತೆಂದು, ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸ್ಥಾಯಿ ಸಮಿತಿ ಮತ್ತು ಓಓಎಲ್ ವಿಷಯ ಪ್ರಸ್ತಾಪನೆಗೆ ವಿರೋಧ ವ್ಯಕ್ತಪಡಿಸಿದೆಂದು ಹೇಳಲಾಗಿದೆ. ಓಓಎಲ್‌ಗೆ ಸಂಬಂಧಿಸಿ ಈಗಾಗಲೇ ವಾರ್ಡ್ ೧೩ ರ ಸದಸ್ಯರಾದ ಉಮಾದೇವಿ ಜಲ್ದಾರ್ ಮತ್ತು ವಾರ್ಡ್ ೨೧ ರ ನಾಗರಾಜ ಆಕ್ಷೇಪ ವ್ಯಕ್ತಪಡಿಸಿದರು. ಇದರೊಂದಿಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಜಾದಳ ಪಕ್ಷಕ್ಕೆ ನೀಡಲು ಕಾಂಗ್ರೆಸ್ ತೀರ್ಮಾನಿಸಿತು. ಇದೇ ಆಧಾರದಲ್ಲಿ ಕವಿತಾ ತಿಮ್ಮಾರೆಡ್ಡಿ ಅವರು ಕಾಂಗ್ರೆಸ್ಸಿಗೆ ಬೆಂಬಲಿಸಿದ್ದರು. ಪೂರ್ವ ನಿರ್ಧಾರದಂತೆ ಅವರು ಅಧ್ಯಕ್ಷರನ್ನಾಗಿ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿರುವಾಗ ಶಾಸಕರು ನಿನ್ನೆಯ ಮುಖಂಡರ ಸಭೆಯಲ್ಲಿ ಕಾಂಗ್ರೆಸ್ಸಿನ ಮುಖಂಡರು ಮತ್ತು ನಗರಸಭೆ ಅಧ್ಯಕ್ಷರಾದ ಈ.ವಿನಯ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ ವಿಷಯವನ್ನು ಸಾಮಾನ್ಯ ಸಭೆಯ ಅಜೆಂಡದಿಂದ ಕೈ ಬಿಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಶಾಸಕರು ಎಲ್ಲಿಯೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲವಾದರೂ, ಆಪ್ತ ವಲಯ ಮತ್ತು ವಿಶ್ವಾಸನೀಯ ಮೂಲಗಳಿಂದ ಈ ವಿಷಯ ಸ್ಪಷ್ಟಗೊಂಡಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಮುನ್ನೂರುಕಾಪು ಸಮಾಜದ ಮಹಿಳೆಗೆ ನೀಡುವ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ಪ್ರಾತಿನಿಧ್ಯದ ಮೂಲಕ ಮುಂಬರುವ ಚುನಾವಣೆಯಲ್ಲಿ ನಗರದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳುವ ತಂತ್ರದ ಸೂಕ್ಷ್ಮತೆಯನ್ನು ಅರಿತ ಶಾಸಕರು ಇದನ್ನು ತಡೆಯುವ ಕೊನೆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಆದರೆ, ಈ ವಿಷಯ ತಿಳಿಯುತ್ತಿದ್ದಂತೆ ಸಾಮಾನ್ಯ ಸಭೆಗೆ ಅಜೆಂಡ ಮಂಡಿಸಲೇಬೇಕು ಎಂದು ಅಧ್ಯಕ್ಷರಿಗೆ ಕಾನೂನಿನಾತ್ಮಕ ಅನಿವಾರ್ಯತೆ ಮೂಡಿಸುವ ಉದ್ದೇಶದಿಂದ ೧೨ ಜನ ನಗರಸಭೆ ಸದಸ್ಯರು ಲಿಖಿತ ಪತ್ರ ನೀಡಿ, ಅಜೆಂಡ ಮಂಡಿಸುವಂತೆ ಮನವಿ ಮಾಡಿದ್ದಾರೆ.
ಈ ಪತ್ರದಲ್ಲಿ ಸ್ಥಾಯಿ ಸಮಿತಿ ರಚನೆ ಮಾಡುವುದು ಮಹಾಸಭೆಯ ಶಾಸನಾತ್ಮಕ ಕರ್ತವ್ಯವಾಗಿದೆ. ಕಾಯ್ದೆ ಪ್ರಕಾರ ಸ್ಥಾಯಿ ಸಮಿತಿಗೆ ತಮ್ಮದೇ ಅಧಿಕಾರ ಇರುತ್ತದೆ. ಕಾರಣ ಕರ್ನಾಟಕ ಮುನ್ಸಿಪಲ್ ಕಾಯ್ದೆ ೧೯೬೪ ರ ಪ್ರಕಾರ ಸಮಿತಿ ರಚನೆ ವಿಷಯವನ್ನು ಕಾರ್ಯಸೂಚಿಯಲ್ಲಿ ಸೇರಿಸಿ, ತಕ್ಷಣವೇ ಮಹಾಸಭೆಯ ಅನುಮೋದನೆಗೆ ಮಂಡಿಸಲು ಕೋರಿದ್ದಾರೆ.

ಇದರಲ್ಲಿ ವಾರ್ಡ್ ೨೪ ರ ಸದಸ್ಯರಾದ ಶ್ರೀನಿವಾಸ ರೆಡ್ಡಿ, ವಾರ್ಡ್ ೯ ರ ಖುರ್ಶೀದ್ ಭಾನು, ವಾರ್ಡ್ ೨೮ ರ ಸದಸ್ಯರಾದ ಕವಿತಾ ತಿಮ್ಮಾರೆಡ್ಡಿ, ವಾರ್ಡ್ ೧೫ ರ ಸಾಜೀದ್ ಸಮೀರ್, ವಾರ್ಡ್ ೨೦ ರ ಸದಸ್ಯರಾದ ನರಸಮ್ಮ ಮಾಡಗಿರಿ, ವಾರ್ಡ್ ೧೯ ರ ಸದಸ್ಯರಾದ ಹೇಮಲತಾ ಪಿ.ಬೂದೆಪ್ಪ, ವಾರ್ಡ್ ೩೨ ರ ಸದಸ್ಯರಾದ ಸಮೀನಾ ಮುಕ್ರಂ, ವಾರ್ಡ್ ೩೪ ರ ಸದಸ್ಯರಾದ ತಿಮ್ಮಪ್ಪ, ವಾರ್ಡ್ ೨೬ ರ ಸದಸ್ಯರಾದ ಷಾ ನವಾಜ್ ವಾರ್ಡ್ ೩೩ ರ ಸದಸ್ಯರಾದ ಸಣ್ಣ ನರಸರೆಡ್ಡಿ, ವಾರ್ಡ್ ೩೫ ರ ಸದಸ್ಯರಾದ ಸ್ವಾತಿ, ವಾರ್ಡ್ ೨೯ ರ ಸದಸ್ಯರಾದ ಸುನೀಲ್ ಕುಮಾರ ಹಾಗೂ ವಾರ್ಡ್ ೩೧ ರ ಸದಸ್ಯರಾದ ರೇಣುಕಮ್ಮ ಭೀಮರಾಯ ಅವರು ಸಹಿ ಮಾಡಿದ್ದಾರೆ. ಈ ಪತ್ರವನ್ನು ಹಿರಿಯ ಸದಸ್ಯರಾದ ಜಯಣ್ಣ ಮತ್ತು ದರೂರು ಬಸವರಾಜ ಅವರ ಸಮ್ಮುಖದಲ್ಲಿಯೇ ೧೫ ಜನ ಸದಸ್ಯರು ಅಧ್ಯಕ್ಷರಿಗೆ ನೀಡಿದರು.

ಅಧ್ಯಕ್ಷರು ಈಗ ತೀವ್ರ ಇಕ್ಕಟ್ಟಿನ ಸ್ಥಿತಿಗೆ ಗುರಿಯಾಗುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯಗಳನ್ನು ಬಹುಮತದ ಮೇಲೆ ಅನುಮೋದನೆ ಪಡೆಯುವ ಸಂಖ್ಯಾಬಲವಿದೆ. ಆದರೆ, ಬಿಜೆಪಿ ಕೇವಲ ೧೨ ಸದಸ್ಯರನ್ನು ಮಾತ್ರ ಹೊಂದಿದ್ದು, ಈ ಸಭೆಗೆ ಶಾಸಕರು, ಸಂಸದರು ಹಾಜರಾದರೇ ಮಾತ್ರ ಅವರ ಸಂಖ್ಯಾಬಲ ೧೪ ಕ್ಕೆ ಮುಟ್ಟಲಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಬಹುಮತ ತೀರ್ಮಾನ ತಿರಸ್ಕರಿಸುವರೇ ಎನ್ನುವ ಕುತೂಹಲ ತೀವ್ರವಾಗಿದೆ.

ಇಲ್ಲಿವರೆಗೂ ನಗರಸಭೆ ವಿಷಯದಲ್ಲಿ ಶಾಸಕರ ವಿರುದ್ಧ ಸದಸ್ಯರ ನೇರ ಸೆಡ್ಡು ಹೊಡೆದ ರಾಜಕೀಯ ಪ್ರಸಂಗ ನಿರ್ಮಾಣವಾಗಿರಲಿಲ್ಲ. ಆದರೆ, ಸ್ಥಾಯಿ ಸಮಿತಿ ಅಧ್ಯಕ್ಷ ವಿಷಯ ವಿವಾದ ಈಗ ಕಾಂಗ್ರೆಸ್ ಮತ್ತು ಶಾಸಕರ ಮಧ್ಯೆ ತೂ ತೂ ಮೈ ಮೈ ಎನ್ನುವ ಹಂತಕ್ಕೆ ಸ್ಥಿತಿ ವಿಸ್ತರಿಸುವಂತೆ ಮಾಡಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ವಿಷಯ ಮಂಡಿಸುವಂತೆ ಮಾಡುವ ಮೂಲಕ ಕಾಂಗ್ರೆಸ್ ನಗರಸಭೆ ಮೇಲೆ ತನ್ನ ಅಧಿಪತ್ಯ ಮುಂದುವರೆಸುವುದೇ ಅಥವಾ ಶಾಸಕರ ಹಸ್ತಕ್ಷೇಪ ಮೇಲುಗೈ ಸಾಧಿಸಿ, ವಿರೋಧ ಪಕ್ಷದಲ್ಲಿದ್ದರೂ, ನಗರಸಭೆ ಆಡಳಿತ ನಿಯಂತ್ರಿಸುವ ಪ್ರಾಬಲ್ಯ ಅವರು ಪ್ರದರ್ಶಿಸುವರೇ ಎನ್ನುವುದು ಕಾದು ನೋಡುವಂತೆ ಮಾಡಿದೆ.

LEAVE A REPLY

Please enter your comment!
Please enter your name here