ಸಂಪುಟ ವಿಸ್ತರಣೆಗೆ ಅವಕಾಶ ಕೊಡದಿರುವುದಕ್ಕೆ C.M.ಯಡಿಯೂರಪ್ಪ ಕೆಂಡಮಂಡಲ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರುಗಳ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ.

0
222

ಸಂಪುಟ ವಿಸ್ತರಣೆಗೆ ಅವಕಾಶ ಕೊಡದಿರುವುದಕ್ಕೆ C.M.ಯಡಿಯೂರಪ್ಪ ಕೆಂಡಮಂಡಲ.

ಬೆಂಗಳೂರು,ನ.14- ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರುಗಳ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ದೆಹಲಿ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ ಎನ್ನಲಾಗುತ್ತಿದೆ.  ಬಿ.ಎಸ್.ಯಡಿಯೂರಪ್ಪ ನಾಯಕತ್ವವನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಪುಕಾರು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಒಂದು ವೇಳೆ ನನ್ನ ತೀರ್ಮಾನಕ್ಕೆ ವಿರುದ್ದವಾಗಿ ನಾಯಕತ್ವ ಬದಲಾವಣೆ ಮಾಡುವಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ತಮ್ಮ ಮುಂದಿನ ದಾರಿ ಏನಾಗಿರುತ್ತದೆ ಎಂಬ ಮುನ್ಸೂಚನೆಯನ್ನು ದೆಹಲಿ ನಾಯಕರಿಗೆ ಮುಟ್ಟಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಕಳೆದ ಮಂಗಳವಾರ ರಾಜರಾಜೇಶ್ವರಿನಗರ, ಶಿರಾ ಹಾಗೂ ನಾಲ್ಕು ಮೇಲ್ಮನೆ ಸ್ಥಾನಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ದೆಹಲಿಯಿಂದ ಕರೆ ಬರಬಹುದೆಂಬ ನಿರೀಕ್ಷೆ ಬಿಎಸ್‍ವೈ ಅವರದಾಗಿತ್ತು.  ಆದರೆ ಫಲಿತಾಂಶ ಪ್ರಕಟಗೊಂಡು ಐದು ದಿನವಾದರೂ ಬಿಹಾರದ ನೆಪವೊಡ್ಡಿ ಕೇಂದ್ರ ಬಿಜೆಪಿ ನಾಯಕರು ಭೇಟಿಗೆ ಅವಕಾಶ ಕೊಡುತ್ತಿಲ್ಲ.ಕೇವಲ ಟ್ವೀಟರ್‍ನಲ್ಲಿ ಅಭಿನಂದನೆ ಸಲ್ಲಿಸಿದ್ದನ್ನು ಬಿಟ್ಟರೆ ಕನಿಷ್ಟ ಪಕ್ಷ ದೂರವಾಣಿ ಮೂಲಕ ಮಾತುಕತೆ ನಡೆಸಿಲ್ಲ.

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಗೆ ಅವಕಾಶ ಕೊಡದಿರುವುದಕ್ಕೆ ಯಡಿಯೂರಪ್ಪ ಕೆಂಡಮಂಡಲರಾಗಿದ್ದಾರೆ. ಸಂಪುಟ ವಿಸ್ತರಣೆ ಮಾಡುವಂತೆ ಶಾಸಕರು ನಿರಂತರವಾಗಿ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ.  ಮೂಲಗಳ ಪ್ರಕಾರ ಹೈಕಮಾಂಡ್ ಈ ಬಾರಿ ನಾಯಕತ್ವ ಬದಲಾವಣೆ ಮಾಡುವ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ.

ಯಡಿಯೂರಪ್ಪ ನಾಯಕತ್ವವನ್ನು 2023ರವರೆಗೆ ಬದಲಾವಣೆ ಮಾಡುವುದಿಲ್ಲ ಎನ್ನುವುದಾದರೆ ವಿಸ್ತರಣೆ ಮತ್ತು ಪುನಾರಚನೆಗೆ ಅವಕಾಶ ನೀಡಲಿದೆ. ಕೆಲವು ತಿಂಗಳ ಮಟ್ಟಿಗೆ ಅನ್ನುವುದಾದರೆ ವಿಸ್ತರಣೆ ಮಾತ್ರ ಆಗಲಿದೆ.  ಇದಕ್ಕೆ ಪುಷ್ಠಿ ನೀಡುವಂತೆ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆಗಳು ಕೂಡ ದೆಹಲಿ ನಾಯಕರೇ ಹೇಳಿ ವ್ಯವಸ್ಥಿತವಾಗಿ ಈ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಗಾದರೆ ತಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ಹೈಕಮಾಂಡ್ ತೀರ್ಮಾನ ಕೈಗೊಂಡರೆ ತಮ್ಮ ಬೆಂಬಲಿಗ ಶಾಸಕರ ಜೊತೆ ಜೆಡಿಎಸ್ ಜೊತೆ ಕೈ ಜೋಡಿಸಲು ಹಿಂದೆಮುಂದೆ ನೋಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

#ಇಬ್ಬರ ಗುರಿಯೂ ಒಂದೇ:
ಹಾಗೆ ನೋಡಿದರೆ ಬಿಜೆಪಿ ಹಾಗೂ ಜೆಡಿಎಸ್ ಒಂದೇ ಗುರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ತಡೆಯುವುದು. ಯಡಿಯೂರಪ್ಪ ಕೂಡ ಇತ್ತೀಚೆಗೆ ದಳಪತಿಗಳ ಮೇಲೆ ಮೃದುಧೋರಣೆ ತೋರುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಎಚ್.ಡಿ.ಕುಮಾರಸ್ವಾಮಿ ಕೂಡ ಬಿಜೆಪಿ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯವರನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ಎರಡು ದೇಹ ಒಂದೇ ಆತ್ಮ ಎಂಬಂತೆ ಇದ್ದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸಂಬಂಧ ಇತ್ತೀಚೆಗೆ ಹಾವು-ಮುಂಗುಸಿಯಂತಾಗಿದೆ. ಅತ್ತ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಪ್ರತಿದಿನ ಕೆಂಡ ಕಾರುತ್ತಿದೆ. ಹೀಗೆ ಬಿಜೆಪಿ-ಜೆಡಿಎಸ್ ಸಂಬಂಧ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಮುನ್ನುಡಿಗೆ ಭಾಷ್ಯ ಬರೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

2023ರವರೆಗೆ ಕುರ್ಚಿ ಉಳಿಸಿಕೊಳ್ಳುವುದು ಯಡಿಯೂರಪ್ಪನವರಿಗೆ ಸವಾಲಾಗಿದ್ದರೆ, ಸಾಲು ಸಾಲು ನಾಯಕರ ವಲಸೆಯಿಂದ ಅಸ್ತಿತ್ವದಿಂದ ಭೀತಿ ಎದುರಿಸುತ್ತಿರುವ ಜೆಡಿಎಸ್‍ಗೂ ಬಿಜೆಪಿ ಮೈತ್ರಿ ಅನಿವಾರ್ಯವಿದೆ.  ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಉದಾರವಾಗಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಎಲ್ಲ ಕೆಲಸಕಾರ್ಯಗಳು ಸರಾಗವಾಗಿ ನಡೆಯುತ್ತವೆ.

ಕಾಂಗ್ರೆಸ್ ನಾಯಕರು ಬಿಎಸ್‍ವೈ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೂ ಕುಮಾರಸ್ವಾಮಿ ಮಾತ್ರ ತಿಟಿಕ್‍ಪಿಟಿಕ್ ಎಂದಿರಲಿಲ್ಲ. ಎರಡು ಪಕ್ಷಗಳ ನಡುವೆ ಈಗ ಸುಮಧರ ಬಾಂಧವ್ಯ ಇರುವುದರಿಂದ ಯಡಿಯೂರಪ್ಪ ಅವರ ಕುರ್ಚಿಗೆ ಕಂಟಕ ಎದುರಾದರೆ ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗಿಯೋ ಸಹಾಯ ಒದಗಿಸಲು ಜೆಡಿಎಸ್ ತೆರೆಮರೆಯಲ್ಲಿ ಸಜ್ಜಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಅಧಿವೇಶನದ ವೇಳೆ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಉಭಯತ್ರರ ನಡುವೆ ಮಾತುಕತೆ ನಡೆದಿತ್ತು. ಅಧಿವೇಶನ ನಡೆಯುವಾಗ ವಿಧಾನಸೌಧದ ಸಿಎಂ ಕೊಠಡಿಯಲ್ಲೂ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರು. ಉಪಚುನಾವಣೆ ಬಳಿಕವೂ ಇಬ್ಬರು ನಾಯಕರ ಮುಖಾಮುಖಿಯಾಗಿದ್ದರು.

ರಾಜ್ಯದ ಇಬ್ಬರು ಪ್ರಬಲ ನಾಯಕರ ನಡುವೆ ಏನು ಮಾತುಕತೆ ನಡೆಯಿತು ಗೊತ್ತಿಲ್ಲ. ಇವರಿಬ್ಬರ ಮಾತುಕತೆಗೆ ಸಾಕ್ಷಿಯಾಗಿದ್ದವರು ಜೆಡಿಎಸ್ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ಮಾತ್ರ.

ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಜೆಡಿಎಸ್ ಸೋಲು ಕಂಡಿದೆ.ಇಬ್ಬರು ನಾಯಕರ ಭೇಟಿ ಬಗ್ಗೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಯಡಿಯೂರಪ್ಪ ಸರ್ಕಾರದ ಮೇಲೆ ಕುಮಾರಸ್ವಾಮಿ ಮೃಧು ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿಯೂ ಇದ್ದಾರೆ.

LEAVE A REPLY

Please enter your comment!
Please enter your name here