ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಲೈನ್ ಜೋಡಣೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆ

ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಲೈನ್ ಜೋಡಣೆಗಾಗಿ ೬೩ ಎಕರೆ ೨ ಗುಂಟೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.

0
145

ರಾಯಚೂರು,ನ.7- ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಲೈನ್ ಜೋಡಣೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಭೂ ಮಾಲಿಕರ ಅಭಿಪ್ರಾಯ ಸಂಗ್ರಹಿಸಿ ದರ ನಿಗದಿಪಡಿಸಲಾಗುತ್ತದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ತಿಳಿಸಿದರು.

ಅವರು ನ.೦೬ರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಲೈನ್ ಜೋಡಣೆ ಮಾಡಲು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜಾಂತಾಪೂರ ಹಾಗೂ ಆರ್.ಎ.ಬೋಗಾಪೂರು ಗ್ರಾಮದಲ್ಲಿ ೬೩ ಎಕರೆ ೨ ಗುಂಟೆ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗಿರುವುದರಿಂದ ಜಮೀನು ಮಾಲೀಕರ ಅಭಿಪ್ರಾಯ ಸಂಗ್ರಹಿಸಿ ದರ ನಿಗದಿಪಡಿಸಲಾಗುತ್ತದೆ. ಪ್ರತಿ ಎಕರೆಗೆ ಸರ್ಕಾರವು ೪ ಲಕ್ಷ ೬೯ ಸಾವಿರ ರೂಗಳ ದರ ನಿಗದಿಪಡಿಸಿದೆ. ಇದಕ್ಕೆ ನಿಮ್ಮ ಆಕ್ಷೇಪಣೆ ಇದ್ದಲ್ಲಿ ನಿಮ್ಮ ಅಭಿಪ್ರಾಯ ಸಲ್ಲಿಸಬಹುದೆಂದರು.
ಜಾಂತಾಪೂರ ಗ್ರಾಮದಲ್ಲಿ ೩೦ ಎಕರೆ ೧೦ ಗುಂಟೆ ಹಾಗೂ ಆರ್.ಎ ಬೋಗಾಪೂರ ಗ್ರಾಮದಲ್ಲಿ ೩೨ ಎಕರೆ ೩೨ ಗುಂಟೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ೨೦೧೩ರ ಕಾಯ್ದೆ ಪ್ರಕಾರ ಬೆಲೆ ನಿಗದಿಪಡಿಸಬೇಕಾಗಿರುವುದರಿಂದ ಇಂದು ಜಮೀನು ಮಾಲೀಕರ ಸಭೆ ಕರೆದು ಅಭಿಪ್ರಾಯ ಮತ್ತು ಸಲಹೆ ಸೂಚನೆ ಪಡೆದುಕೊಂಡು ದರ ನಿಗದಿಪಡಿಸಲಾಗುತ್ತದೆ ಎಂದರು.

ಲಿಂಗಸೂಗೂರು ತಾಲೂಕುನಲ್ಲಿ ತುಂಗಭದ್ರ ಎಡದಂಡೆ ಕಾಲುವೆ ಇರುವುದರಿಂದ ನೀರಾವರಿಗೆ ಒಳಪಡುವ ಜಮೀನುಗಳು ಲಭ್ಯವಾಗುತ್ತಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಕೊಂಚ ಹಿನ್ನಡೆಯಾಗಿದೆ. ಆ ಭಾಗದಲ್ಲಿ ಜಮೀನು ಮಾರಾಟಕ್ಕೆ ದರ ನಿಗದಿಪಡಿಸುವುದು ಸವಾಲಿನ ಕೆಲಸವಾಗಿದೆ. ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಜೋಡಣೆಯಿಂದಾಗಿ ಭೂ ಸ್ವಾಧೀನ ಪಡಿಸಿಕೊಂಡಿರುವ ಸಂತ್ರಸ್ಥರಿಗೆ ರೈಲ್ವೆ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಡಿ ಸರ್ಕಾರಿ ನೌಕರಿ ದೂರೆಯುವ ಸಾಧ್ಯತೆಗಳಿವೆ.

ಈಗಾಗಲೇ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ೩೭೧ (ಜೆ) ಕಲಂ ತಿದ್ದುಪಡಿಯಿಂದ ಈ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.೮೦ ರಷ್ಟು ಮೀಸಲಾತಿ ಕಲ್ಪಿಸಲಾಗಿರುವುದರಿಂದ ಭೂ ಕಳೆದುಕೊಂಡ ಸಂತ್ರಸ್ಥರ ಕುಟುಂಬ ಸದ್ಯಸರಿಗೆ ಖಾಲಿಯಿರುವ ಹುದ್ದೆಗಳ ಭರ್ತಿಯಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಮುನ್ನ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡಿದ ನಂತರ ದರ ನಿಗದಿಪಡಿಸಲಾಗುತ್ತದೆಂದರು.

ವಿಶೇಷ ಭೂ ಸ್ವಾಧೀನ ಅಧಿಕಾರಿ ಡಾ.ಬಿ.ಶರಣಪ್ಪ ಅವರು ಮಾತನಾಡಿ, ವಾಡಿಯಿಂದ ಗದಗ್ ಜಿಲ್ಲೆಯವರೆಗೆ ರೈಲ್ವೆ ಲೈನ್ ಜೋಡಣೆಗಾಗಿ ೬೩ ಎಕರೆ ೨ ಗುಂಟೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ೨೦೧೩ರ ಕಾಯ್ದೆ ಪ್ರಕಾರ ಪ್ರತಿ ಎಕರೆಗೆ ಇಂತಿಷ್ಟುನಂತೆ ಉಪ ನೋಂದಣೆ ಅಧಿಕಾರಿಗಳ ನೀಡುವ ವರದಿ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತದೆ. ಈಗಾಗಲೇ ಸರ್ಕಾರವು ಪ್ರತಿ ಎಕರೆಗೆ ೪ ಲಕ್ಷ ೬೯ ಸಾವಿರ ರೂಗಳ ದರ ನಿಗದಿಪಡಿಸಿರುವುದರಿಂದ ಸರ್ಕಾರದ ದರಕ್ಕೆ ನಿಮ್ಮಲ್ಲಿ ಏನಾದರೂ ಆಕ್ಷೇಪಣೆ ಇದ್ದಲ್ಲಿ ನಿಮ್ಮ ಅಭಿಪ್ರಾಯ ಆಲಿಸಿನಿಂದ ನಂತರ ದರ ನಿಗದಿಪಡಿಸಲಾಗುತ್ತದೆ ಎಂದರು.

ಈ ಸಭೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳಿ, ತಹಶೀಲ್ದಾರ ಚಾಮರಾಸ್ ಪಾಟೀಲ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್, ಕೆಐಎಡಿಬಿ ಅಧಿಕಾರಿ ಪ್ರಕಾಶ ಹಾಗೂ ಭೂ ಮಾಲೀಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here