ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ; ವೀರಭದ್ರ ಶಿವಾಚಾರ್ಯ ಪೀಠಾಧಿಪತಿ ಗಬ್ಬೂರು ಮಠ

ನಿಜವಾದ ಸ್ವಾಮಿಯಾದವರು ಎಲ್ಲಿದ್ದರೆ ಅಲ್ಲೆ ಮಠ ನಿರ್ಮಾಣವಾಗುತ್ತದೆ. ಸ್ವಾಮೀಜಿ ಅಂದ ಮಾತ್ರಕ್ಕೆ ದೊಡ್ಡವರಾಗುವುದಿಲ್ಲ, ಯೋಗ್ಯ ಕೆಲಸ ಮಾಡಿದವರು ಮಾತ್ರ ದೊಡ್ಡವರೆನಿಸಿಕೊಳ್ಳುತ್ತಾರೆ.

0
348

ರಾಯಚೂರು,ಅ.31- ನಿಜವಾದ ಸ್ವಾಮಿಯಾದವರು ಎಲ್ಲಿದ್ದರೆ ಅಲ್ಲೆ ಮಠ ನಿರ್ಮಾಣವಾಗುತ್ತದೆ. ಸ್ವಾಮೀಜಿ ಅಂದ ಮಾತ್ರಕ್ಕೆ ದೊಡ್ಡವರಾಗುವುದಿಲ್ಲ, ಯೋಗ್ಯ ಕೆಲಸ ಮಾಡಿದವರು ಮಾತ್ರ ದೊಡ್ಡವರೆನಿಸಿಕೊಳ್ಳುತ್ತಾರೆ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. ಗಬ್ಬೂರು ಮಠಕ್ಕೆ ಸಂಬಂಧಿಸಿದಂತೆ ಮಹಾಂತ ಶಿವಾಚಾರ್ಯರು ಮಾಡಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕೇವಲ ಸುಳ್ಳು ಆರೋಪಗಳನ್ನು ಮಾಡಿ ಕಾಲ ಕಳೆಯುತ್ತಿದ್ದಾರೆ ಎಂದು ಗಬ್ಬೂರು ಮಠದ ಪೀಠಾಧಿಪತಿ ವೀರಭದ್ರ ಶಿವಾಚಾರ್ಯ ಕಡಗಂಚಿ ಅವರು ಹೇಳಿದರು.

ಅವರಿಂದು ನಗರದ ಸೋಮವಾರ ಪೇಟೆ ಮಠದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಹಾಂತ ಶಿವಾಚಾರ್ಯರು ರಾಜೀನಾಮೆ ನೀಡಿದ ನಂತರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮಕ್ಷಮದಲ್ಲಿ ನನ್ನನ್ನು ಪೀಠಾಧಿಪತಿಯಾಗಿ ನೇಮಿಸಲಾಗಿದೆ. ಮಹಾಂತ ಸ್ವಾಮಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಿಜವಾಗಿ ಅಕ್ರಮಗಳು ನಡೆದಿದ್ದರೆ ದಾಖಲೆಗಳನ್ನು ತಂದು ಸಾಬೀತುಪಡಿಸಲಿ. ಬಿಚ್ಚಾಲಿ, ಮಟಮಾರಿ ಮತ್ತು ಗಬ್ಬೂರು ಮಠಗಳಲ್ಲಿ ಭಕ್ತರನ್ನು ಒಗ್ಗೂಡಿಸಿ ಜಿರ್ಣೋದ್ದಾರ ಮಾಡಿದ್ದೇನೆ. ನನಗೆ ಯಾವುದೇ ಆಸ್ತಿಯ ಆಸೆಯಿಲ್ಲ ಎಂದರು.

ಮಹಾಂತ ಸ್ವಾಮಿಗಳು ೧೯೮೫ರಲ್ಲಿ ಮಠಕ್ಕೆ ಹಾಗೂ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಮಠದ ಆಸ್ತಿ ಭಕ್ತರು ನೀಡಿದ ಆಸ್ತಿಯಾಗಿದ್ದು, ಇದು ಕೇವಲ ಮಠಕ್ಕೆ ಸೇರಿದ್ದಾಗಿದೆ. ಇದರ ಮೇಲೆ ಯಾರಿಗೂ ಹಕ್ಕಿಲ್ಲ. ಮಹಾಂತ ಸ್ವಾಮಿಗಳು ಯಾವುದೇ ಅಕ್ರಮ ಕುರಿತು ದಾಖಲೆ ಒದಗಿಸಿ ಸಾಬೀತುಪಡಿಸಲು, ಅದಕ್ಕೆ ಉತ್ತರಿಸಲು ಸಿದ್ದರಿದ್ದೇವೆ ಎಂದು ತಿಮ್ಮಾರೆಡ್ಡಿ ಬಸಪ್ಪಗೌಡ ಹೇಳಿದರು.

ಮಹಾಂತ ಶಿವಾಚಾರ್ಯರು ಗಬ್ಬೂರು ಮಠದ ೨೦೦ ಎಕೆರೆ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಕೇವಲ ೬ ಎಕರೆ ಭೂಮಿಯನ್ನು ಉಳಿಸಿದ್ದಾರೆ. ಅವರ ವಿರುದ್ದ ದೂರು ದಾಖಲಿಸಲಾಗುವುದು ಎಂದು ಪಂಪನಗೌಡ ಹೇಳಿದರು.

ಲೋಕಯುಕ್ತರಿಂದ ನಮಗೆ ಇದುವರೆಗೆ ಯಾವುದೇ ಆದೇಶ ಬಂದಿಲ್ಲ. ಬೇಕಾಬಿಟ್ಟಿ ೪ ಕೋಟಿ ರೂ.ನೀಡಬೇಕು ಎಂದು ಅರೋಪಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಕಾನೂನಾತ್ಮಕವಾಗಿ ಎಲ್ಲಾ ದಾರಿಗಳು ಬಂದಾಗಿದ್ದರಿಂದ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೊಮವಾರ ಪೇಟೆ ಹೀರೇಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಮಹಾಸ್ವಾಮಿ, ಗಬ್ಬೂರ ಮತ್ತು ಎಲೆಬಿಚ್ಚಾಲಿ, ಮಟಮಾರಿ ಮಠದ ಭಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here