ಮಠದಲ್ಲಿ ಉಕ್ಕುತ್ತಿರುವ ಎಣ್ಣೆ ರೂಪದ ದ್ರವ; ಮಠದ ಶ್ರೀಗಳ ಪವಾಡ.

ಎಷ್ಟೇ ಖಾಲಿ ಮಾಡಿಸಿದರೂ ಈ ದ್ರವ ಬರುತ್ತಲೇ ಇದೆ

0
188

ಕಲಬುರಗಿ , ಅ.30: ತಾಲ್ಲೂಕಿನ ತಾಜ್‍ಸುಲ್ತಾನಪೂರದ ಸುಲಫಲಮಠದಲ್ಲಿ ಎಣ್ಣೆಯ ರೀತಿ ದ್ರವ ಉಕ್ಕುತ್ತಿದ್ದು, ಇದು ಜನರಲ್ಲಿ ಅಚ್ಚರಿ ಮೂಡಿಸಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠದ ಗದ್ದುಗೆ ಪ್ರಾಂಗಣದಲ್ಲಿ ನೆಲದ ಮೇಲೆಲ್ಲಾ ಎಣ್ಣೆ ರೂಪದ ದ್ರವ ಕಂಡುಬರುತ್ತಿದ್ದು, ಅದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ.

ಈ ಘಟನೆ ಎಲ್ಲರಲ್ಲಿಯೂ ವಿಸ್ಮಯವುಂಟು ಮಾಡಿದೆ. ಕಳೆದ ಎಂಟು ದಿನಗಳಿಂದಲೂ ಮಠದ ಗದ್ದುಗೆ ಪ್ರಾಂಗಣದಲ್ಲಿ ದ್ರವವೊಂದು ಉಕ್ಕಿ ಬರುತ್ತಿದೆ. ಅದನ್ನು ತೆಗೆದಷ್ಟು ಮತ್ತೆ, ಮತ್ತೆ ಉಕ್ಕಿ ಬರುತ್ತಿದ್ದು, ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಸ್ವತ: ಮಠದ ಪೀಠಾಧಿಪತಿಗಳೇ ಮಾಹಿತಿ ತಿಳಿದು ದಂಗಾಗಿ ಹೋಗಿದ್ದಾರೆ. ಭಕ್ತರು ಮತ್ತು ಮಠದ ಸಿಬ್ಬಂದಿ ಈ ವಿಷಯವನ್ನು ಗಮನಕ್ಕೆ ತರುತ್ತಿದ್ದಂತೆಯೇ ತಾಜ್‍ಸುಲ್ತಾನಪೂರಕ್ಕೆ ಭೇಟಿ ನೀಡಿದ ಮಠದ ಪೀಠಾಧಿಪತಿ ಡಾ. ಮಹಾಂತ್ ಶಿವಾಚಾರ್ಯರು ತಾವೇ ಖುದ್ದು ಪರಿಶೀಲನೆ ಮಾಡಿದರು.

ಎಣ್ಣೆ ನೆಲದಿಂದಲೇ ಉಕ್ಕುತ್ತಿದೆಯಾ ಎಂಬ ಕುರಿತು ಪರಿಶೀಲಿಸಲು ಪ್ರಾಂಗಣದಲ್ಲಿದ್ದ ಎಣ್ಣೆಯನ್ನು ಖಾಲಿ ಮಾಡಿಸಿ ಮತ್ತೆ ಮತ್ತೆ ಪರೀಕ್ಷೆ ಮಾಡಿದ್ದಾರೆ. ಗದ್ದುಗೆಯ ಪಕ್ಕದಲ್ಲಿಯೇ ಇರುವ ಕಂಬದಿಂದ ಈ ರೀತಿ ದ್ರವ ಒಸರುತ್ತಿದೆ. ನೆಲದಿಂದಲೂ ಚಿಕ್ಕದಾಗಿ ದ್ರವ ಹೊರಬರುತ್ತಿದೆ. ಅದನ್ನು ಕೈಯಿಂದ ಮುಟ್ಟಿ ನೋಡಿ ಎಣ್ಣೆ ಮಾದರಿಯ ಜಿಡ್ಡಿನ ರೂಪದಲ್ಲಿರುವುದನ್ನು ಖಾತ್ರಿ ಮಾಡಿಕೊಂಡ ಶ್ರೀಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಭೂಮಿಯಿಂದ ನೀರು ಪುಟಿದು ಬರುವುದನ್ನು ನೋಡಿದ್ದೇವೆ. ಆದಾಗ್‍ಯೂ, ಇಲ್ಲಿ ಎಣ್ಣೆ ಮಾದರಿಯ ದ್ರವ ಹೊರಬರುತ್ತಿದೆ.

ಎಷ್ಟೇ ಖಾಲಿ ಮಾಡಿಸಿದರೂ ಈ ದ್ರವ ಬರುತ್ತಲೇ ಇದೆ. ಇದೊಂದು ಪವಾಡವೆಂದು ನಾನು ನಂಬುವುದಿಲ್ಲ. ಆದಾಗ್ಯೂ, ಅದರ ಹಿಂದಿನ ವೈಜ್ಞಾನಿಕ ಸತ್ಯವನ್ನು ತಿಳಿದುಕೊಳ್ಳಬೇಕಿದೆ. ಹೀಗಾಗಿ ಸಂಶೋಧನೆ ಮಾಡಿ, ಅದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವಂತೆ ಶ್ರೀಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯ ಕಾರಣದಿಂದ ನೀರು ಒಸರುತ್ತಿರಬಹುದೆಂದು ಮೊದಲು ಮಠದ ಸಿಬ್ಬಂದಿ ಮತ್ತು ಭಕ್ತರು ಎಂದುಕೊಂಡಿದ್ದಾರೆ. ಆದಾಗ್ಯೂ, ಅದು ಎಣ್ಣೆ ಮಾದರಿಯಲ್ಲಿ ಜಿಡ್ಡು ಜಿಡ್ಡಾಗಿರುವುದನ್ನು ಗಮನಿಸಿ ಕೊನೆಗೆ ಸುಲಫಲ ಶ್ರೀಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುಲಫಲ ಶ್ರೀಗಳು ಮಠಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ ನಂತರ ವಿಸ್ಮಯ ನೋಡಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಇದು ಮಠದ ಶ್ರೀಗಳ ಪವಾಡವೆಂದೇ ಭಕ್ತರು ನಂಬುತ್ತಿದ್ದಾರೆ. ಆದಾಗ್ಯೂ, ಶ್ರೀಗಳು ಮಾತ್ರ ಈ ರೀತಿಯ ದ್ರವ ಹೊರಬರಲು ವೈಜ್ಞಾನಿಕ ಕಾರಣಗಳಿರಬೇಕೆಂದು ಹೇಳುತ್ತಿದ್ದಾರೆ. ಪವಾಡವೋ, ವೈಜ್ಞಾನಿಕ ಕಾರಣವೋ ಎಂಬುದರ ಕುರಿತು ಸಂಶೋಧನೆ ಕೈಗೊಂಡಾಗಲೇ ಸತ್ಯ ಬಹಿರಂಗಗೊಳ್ಳಲಿದೆ.

LEAVE A REPLY

Please enter your comment!
Please enter your name here