ನ.17ಕ್ಕೆ ಕಾಲೇಜು ಆರಂಭ, ಹೇಗೆ- ಏನು ಮುಂಜಾಗ್ರತೆ ಕ್ರಮ: ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಏನಂತಾರೆ?

ಕೊರೋನಾ ಸೋಂಕಿತರು ಮತ್ತು ಸಾಯುವವರ ಸಂಖ್ಯೆ ಇಳಿಕೆಯಾಗುತ್ತಿರುವಾಗ ಮುಂದಿನ ತಿಂಗಳು ನವೆಂಬರ್ 17ರಂದು ಕಾಲೇಜು ಆರಂಭಿಸುವುದು ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.

0
200

ನ.17ಕ್ಕೆ ಕಾಲೇಜು ಆರಂಭ, ಹೇಗೆ- ಏನು ಮುಂಜಾಗ್ರತೆ ಕ್ರಮ: ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಏನಂತಾರೆ?

ಬೆಂಗಳೂರು: ಕೊರೋನಾ ಸೋಂಕಿತರು ಮತ್ತು ಸಾಯುವವರ ಸಂಖ್ಯೆ ಇಳಿಕೆಯಾಗುತ್ತಿರುವಾಗ ಮುಂದಿನ ತಿಂಗಳು ನವೆಂಬರ್ 17ರಂದು ಕಾಲೇಜು ಆರಂಭಿಸುವುದು ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.

ಈ ಸಂದರ್ಭದಲ್ಲಿ ಹೇಗೆ ಕಾಲೇಜು ತೆರೆಯಲಾಗುತ್ತದೆ, ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಮಾತನಾಡಿದ್ದಾರೆ. ಉನ್ನತ ಶಿಕ್ಷಣ ಸಚಿವವಾಗಿರುವ ಅವರು, ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಆಫ್ ಲೈನ್ ಮತ್ತು ಆನ್ ಲೈನ್ ಎರಡೂ ವಿಧಾನಗಳಲ್ಲಿ ಶಿಕ್ಷಣ ಮುಂದುವರಿಯಲಿದೆ ಎಂದಿದ್ದಾರೆ.ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಕಾಲೇಜಿಗೆ ಹೈಬ್ರಿಡ್ ತರಗತಿ ವ್ಯವಸ್ಥೆ ತರುತ್ತೇವೆ ಎನ್ನುತ್ತೀರಿ, ಅದು ಹೇಗೆ?
-ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೀಗೆ ಮಾಡುತ್ತಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರ ಇಷ್ಟದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಕೋವಿಡ್ ನಿಂದಾಗಿ ಹಲವರು ಆನ್ ಲೈನ್ ತರಗತಿಗಳನ್ನು ಕೇಳುತ್ತಾರೆ. ಇನ್ನು ಹಲವರು ಆನ್ ಲೈನ್ ನಲ್ಲಿ ತರಗತಿಗಳು ಸರಿಯಾಗುವುದಿಲ್ಲ, ಆಫ್ ಲೈನ್ ಉತ್ತಮ ಎನ್ನುತ್ತಾರೆ. ನಾವು ಎರಡೂ ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತೇವೆ. ಪ್ರಯೋಗ ತರಗತಿಗಳನ್ನು ಆನ್ ಲೈನ್ ನಲ್ಲಿ ಹೇಗೆ ನಡೆಸಬಹುದು, ಹೀಗಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಆಫ್ ಲೈನ್ ನಲ್ಲಿ ನಡೆಸುತ್ತೇವೆ. ಯುಜಿಸಿ ಇದಕ್ಕೆ ಸಾಧ್ಯತೆಗಳನ್ನು ನೀಡಿದ್ದು, ಕೇಂದ್ರ ಗೃಹ ಸಚಿವಾಲಯ ಕೂಡ ಕಾಲೇಜು ತರಗತಿಗಳನ್ನು ಆರಂಭಿಸಲು ಅನುಮತಿ ಕೊಟ್ಟಿದೆ. ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ.

ಮಕ್ಕಳ ಪೋಷಕರಿಗೆ ಇನ್ನೂ ಕೊರೋನಾ ಬಗ್ಗೆ ಆತಂಕವಿದೆಯಲ್ಲವೇ?
-ಪೋಷಕರು ಕಾಲೇಜಿಗೆ ಮಕ್ಕಳನ್ನು ಕಳುಹಿಸುವುದಾದರೆ ಒಪ್ಪಿಗೆ ಪತ್ರ ನೀಡಬೇಕು. ಅವರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಪ್ಪಿಗೆ ಇದ್ದರೆ ಮಾತ್ರ ಆಫ್ ಲೈನ್ ತರಗತಿಗಳು. ಪೋಷಕರ ತೀರ್ಮಾನಕ್ಕೆ ಬಿಟ್ಟ ವಿಚಾರ. ಕಾಲೇಜುಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಪತ್ತೆಯಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?
-ವಿದ್ಯಾರ್ಥಿಗಳಿಗೆ ಎಲ್ಲಿಂದ ಬೇಕಾದರೂ ಸೋಂಕು ಬರಬಹುದು. ಶಿಕ್ಷಣ ಸಂಸ್ಥೆಯಲ್ಲಿ ನಾವು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ಸೀಮಿತ ಸಂಖ್ಯೆ ಇತ್ಯಾದಿ. ಒಟ್ಟೊಟ್ಟಿಗೆ ಆನ್ ಲೈನ್ ಕ್ಲಾಸ್ ಗಳನ್ನು ಸಹ ಬಲವರ್ಧಿಸುತ್ತೇವೆ.

ಸಿಲೆಬಸ್ ಅಥವಾ ರಜೆ ಕಡಿತವಾಗುತ್ತದೆಯೇ?
ಇದುವರೆಗೆ ಸಾಕಷ್ಟು ರಜೆ ಸಿಕ್ಕಿದೆ. ಇನ್ನು ಮುಂದೆ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳಿಗೆ ರಜೆ ಕಡಿತ ಮಾಡಲಾಗುವುದು. ರಜೆ ಇರುವುದಿಲ್ಲ. ತರಗತಿಗಳನ್ನು ನಡೆಸಬೇಕು. ಸಿಲೆಬಸ್ ಪ್ರಕಾರ, ತರಗತಿಗಳು ಶಾಲಾ ಕ್ಯಾಲೆಂಡರ್ ನಂತೆ ನಡೆಯಲಿದೆ. ತರಗತಿಗಳು, ಪರೀಕ್ಷೆಗಳು ನಡೆಯುತ್ತವೆ. ಮೌಲ್ಯಮಾಪನ ಸರಳೀಕರಣಗೊಳಿಸುತ್ತೇವೆ, ಆದರೆ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣ ಪಡೆಯಬೇಕು. ಯುಜಿಸಿ ಮಾರ್ಗದರ್ಶನದಂತೆ ವಿಶ್ವವಿದ್ಯಾಲಯಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ.

ಆಫ್ ಲೈನ್, ಆನ್ ಲೈನ್ ವ್ಯವಸ್ಥೆಯನ್ನು ಉಪನ್ಯಾಸಕರು ಒಪ್ಪುತ್ತಾರೆಯೇ?
ತಿಂಗಳುಗಳಿಂದ ಕಾಲೇಜುಗಳಿಗೆ ಬಾರದಿದ್ದ ಉಪನ್ಯಾಸಕರಿಗೆ ಖುಷಿಯಾಗಿದೆ. ಈಗಾಗಲೇ ಆನ್ ಲೈನ್ ನಲ್ಲಿ ಉಪನ್ಯಾಸ ಮಾಡುತ್ತಿದ್ದ ಉಪನ್ಯಾಸಕರು ಇನ್ನು ಕಾಲೇಜಿಗೆ ಬರುತ್ತಾರೆ. ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ತೆರೆಯುತ್ತಿವೆ.

ಕಾಲೇಜು ತೆರೆಯುವ ಸಂದರ್ಭದಲ್ಲಿ ಎಸ್ ಒಪಿಗಳೇನು?
ಮೊದಲಿಗೆ ಡಿಗ್ರಿ ಕಾಲೇಜುಗಳನ್ನು ಆರಂಭಿಸುತ್ತೇವೆ, ನಂತರ ನಿಧಾನವಾಗಿ ಪಿಯುಸಿ, ನಂತರ ಎಸ್ ಎಸ್ ಎಲ್ ಸಿ ನಂತರ ಉಳಿದ ತರಗತಿಗಳನ್ನು ಆರಂಭಿಸುತ್ತೇವೆ. ಇತ್ತೀಚೆಗೆ ಮುಗಿದ ಪರೀಕ್ಷೆಗಳಿಗೆ ಅನುಸರಿಸಿದ ನಿಯಮಗಳನ್ನೇ ಇನ್ನು ಮುಂದೆಯೂ ಪಾಲಿಸುತ್ತೇವೆ. ಆಫ್ ಲೈನ್ ತರಗತಿಗಳಿಗೆ ಶಾರೀರಿಕ ಅಂತರ ಕಾಪಾಡುತ್ತೇವೆ.

ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳನ್ನು ಹೇಗೆ ಕೂರಿಸುತ್ತೀರಿ?
ಅಲ್ಲಿ ಎಷ್ಟು ಸಂಖ್ಯೆಯಷ್ಟು ವಿದ್ಯಾರ್ಥಿಗಳು ಇರುತ್ತಾರೆ, ಎಷ್ಟು ಮಂದಿ ದಾಖಲಾಗುತ್ತಾರೆ, ಎಷ್ಟು ಮಂದಿ ಮತ್ತೆ ಬರುತ್ತಾರೆ ಎಂದು ನೋಡುತ್ತೇವೆ. ಅದರ ಆಧಾರದ ಮೇಲೆ ತೀರ್ಮಾನ ಮಾಡುತ್ತೇವೆ. ಇದುವರೆಗೆ ಹಾಸ್ಟೆಲ್ ಗಳು ಕ್ವಾರಂಟೈನ್ ಮತ್ತು ಕೋವಿಡ್ ಕೇಂದ್ರಗಳಾಗಿದ್ದವು. ಕಾಲೇಜು ಮುಖ್ಯಸ್ಥರಿಗೆ ಹಾಸ್ಟೆಲ್ ಗಳನ್ನು ಹೇಗೆ ನಿರ್ವಹಿಸಬೇಕು ಎಂದು ಗೊತ್ತಿರುತ್ತದೆ ಅದರಂತೆ ಆಫ್ ಲೈನ್ ತರಗತಿಗಳಿಗೆ ವಿಧಾನ ಅಳವಡಿಸಿಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here