ನಿಮಗೆ ಗೊತ್ತೆ..? ಈ ಮರದಲ್ಲೇ ಕುರ್ಚಿ ಬೆಳೆಯುತ್ತೆ..!

0
188

ಬೆಂಗಳೂರು ಅ 25 : ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನಸೆಳೆದಿದೆ.

ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ ಕುರ್ಚಿ ಗಿಡಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಗಿಡಗಳ ಮೂಲಕ ಇಲ್ಲಿ 250 ಚೇರ್‍ಗಳು, 100 ಲ್ಯಾಂಪ್‍ಗಳು ಮತ್ತು 50 ಟೇಬಲ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಕುರ್ಚಿ ಗಿಡ ಬೆಳೆಯಲು ಗೋವಿನ್‍ಗೆ ಬಾಲ್ಯವೇ ಪ್ರೇರಣೆ. ಬೋನ್ಸಾಯಿ ಗಿಡಗಳು ಬೆಳೆದು ಕುರ್ಚಿಯಂತೆ ಕಾಣುತ್ತಿತ್ತು. ಅಲ್ಲದೇ ಗೋವಿನ್‍ಗೆ ಬೆನ್ನುಲುಬು ಸಮಸ್ಯೆ ಇತ್ತು. ಬಾಲ್ಯದಲ್ಲಿ ಅವರ ಬೆನ್ನು ಮೂಳೆ ಸೊಟ್ಟವಾಗಿತ್ತು. ಅದನ್ನು ಸರಿಪಡಿಸಲು ಹಲವು ವರ್ಷಗಳ ಕಾಲ ಮೆಟಲ್ ಫ್ರೇಮ್ ಧರಿಸಿದ್ದರು. ಕುರ್ಚಿ ಗಿಡ ಬೆಳೆಯಲು ಗೋವಿನ್ 2006ರಲ್ಲಿ ಯತ್ನಿಸಿದರು. ಇಂಗ್ಲೆಂಡ್‍ನ ಪೀಕ್ ಜಿಲ್ಲೆಯಲ್ಲಿ ಎರಡು ತುಂಡು ನೆಲದಲ್ಲಿ ಅವರು ಮರದ ಕುರ್ಚಿಗಳನ್ನು ಸ್ವಾಭಾವಿಕವಾಗಿ ಬೆಳೆಸಲು ಮುಂದಾದರು.

2012ರಲ್ಲಿ ತಮ್ಮ ಯೋಜನೆಯನ್ನು ವಿಸ್ತರಿಸಿದರು. ಅದೇ ವರ್ಷ ಅಲೈಸ್ ಜೊತೆ ಗೋವಿನ್ ವಿವಾಹವಾಯಿತು. ದೊಡ್ಡ ಮಟ್ಟದಲ್ಲಿ ಮರದ ಕುರ್ಚಿಗಳನ್ನು ಬೆಳೆಯಬೇಕೆಂಬ ಅಭಿಲಾಷೆ ದುರಂತದಲ್ಲಿ ಅಂತ್ಯವಾಯಿತು. ಈ ಗಿಡಗಳನ್ನು ಹಸುಗಳು ಮತ್ತು ಮೊಲಗಳು ತಿಂದು ಹಾಕಿದವು. ಇದರಿಂದ ದೃತಿಗಡೆದ ದಂಪತಿ ಬೆಳವಣಿಗೆಯನ್ನು ಕುಂಠಿತ ಗೊಳಿಸದೆ ಮರವನ್ನು ಕುರ್ಚಿ ಆಕಾರದಲ್ಲಿ ಬೆಳೆಸಲು ಪರಿಣಾಮಕಾರಿ ಮಾರ್ಗ ಕಂಡುಕೊಂಡರು.

ಬೆಳೆಯುತ್ತಿರುವ ಕಾಂಡಗಳನ್ನು ಸರಿಯಾದ ದಿಕ್ಕಿನಲ್ಲಿ ಹಬ್ಬಿ ಕುರ್ಚಿಯ ಆಕಾರ ಪಡೆಯುವಂತೆ ಮಾಡಿದರು. ರೆಂಬೆಗಳು ಒಂದಕ್ಕೊಂದು ಬೆಸೆದುಕೊಳ್ಳಲು ಕಸಿ ವಿಧಾನ ಅನುಸರಿಸಿದರು. ಇವರ ಶ್ರಮ ಫಲ ನೀಡಿತು. ಕುರ್ಚಿಗಳು 12,480 ಡಾಲರ್, ಲ್ಯಾಂಪ್‍ಗಳು 2,870 ಡಾಲರ್ ಹಾಗೂ ಮೇಜುಗಳು 15,600 ಡಾಲರ್ ಮೌಲ್ಯ ಹೊಂದಿವೆ.

ತೋಟದಲ್ಲೇ ಬೆಳೆಯುವ ಈ ಗಿಡ ಪೂರ್ಣಪ್ರಮಾಣದಲ್ಲಿ ಕುರ್ಚಿಯ ರೂಪ ಪಡೆಯಲು ಆರರಿಂದ ಒಂಭತ್ತು ವರ್ಷಗಳು ಬೇಕು. ಅಲ್ಲದೇ ಇದು ಸಂಪೂರ್ಣ ಒಣಗಲು ತೆಗೆದುಕೊಳ್ಳುವ ಅವಧಿ ಒಂದು ವರ್ಷ. 2030ರ ವೇಳೆಗೆ ಈ ಫರ್ನಿಚರ್ ಫಾರಂನನ್ನು ಮತ್ತಷ್ಟು ವಿಸ್ತರಿಸಲು ದಂಪತಿ ಬಯಸಿದ್ದಾರೆ. ಇದು ನಿವೃತ್ತರಾಗಿ ವಿಶ್ರಾಂತಿ ಪಡೆಯುವ ಮಂದಿಗೆ ಸೂಕ್ತವಾದ ಕುರ್ಚಿ ಎನಿಸಿದೆ.

LEAVE A REPLY

Please enter your comment!
Please enter your name here