ಬಹು ಮುಖ್ಯವಾದ ಯೋಜನೆ ಎಸ್‌ಸಿಪಿ – ಟಿಎಸ್‌ಪಿ : ರಾಜ್ಯ ಮಾರ್ಗಸೂಚಿ ಉಲ್ಲಂಘನೆ

0
179

ರಾಯಚೂರು.ಅ.05- ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಿಡುಗಡೆಗೊಂಡ ಅನುದಾನ ಬಳಕೆಗೆ ಸಂಬಂಧಿಸಿ ಸಮಾಜ ಕಲ್ಯಾಣ ಇಲಾಖೆಯ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯಾ ಹಂತದ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ನಿಯಂತ್ರಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ತಜ್ಞರೊಂದಿಗೆ ಚರ್ಚೆ ನಡೆದಿದ್ದು, ಶೀಘ್ರವೇ ಈ ಕುರಿತು ಕ್ರಮಕ್ಕೆ ಮುಂದಾಗಲಾಗುತ್ತದೆಂದು ಜಾದಳ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಾಸಕ ಡಾ.ಶಿವರಾಜ ಪಾಟೀಲ್ ಅವರು, ರಾಜಕೀಯ ಪ್ರಭಾವ ಮತ್ತು ಒತ್ತಡದಿಂದ ಎಸ್‌ಸಿ, ಎಸ್‌ಟಿ ವಸತಿ ಪ್ರದೇಶ ಅಭಿವೃದ್ಧಿ ಹಾಗೂ ದಲಿತ ಗುತ್ತೇದಾರರ ಹಕ್ಕುಗೆ ಚ್ಯುತಿ ತಂದಿದ್ದಲ್ಲದೇ, ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ ಮಾರ್ಗಸೂಚಿ ಉಲ್ಲಂಘಿಸಿ, ಹಣ ಲೂಟಿ ಮಾಡುವ ದುರುದ್ದೇಶ ಹಿನ್ನೆಲೆಯಲ್ಲಿ, ಅವರ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವುದಲ್ಲದೇ, ಸರ್ಕಾರದ ಅಧಿಕಾರಿಗಳಾಗಿ ಮಾರ್ಗಸೂಚಿ ಪಾಲಿಸದ ಕೆಬಿಜೆಎನ್ಎಲ್, ಕೆಎನ್ಎಲ್ ಕಾರ್ಯ ನಿರ್ವಾಹಕ ಅಭಿಯಂತರರು, ಜಿಲ್ಲಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇದಕ್ಕೆ ಹೊಣೆಯಾಗಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ.
ಸಣ್ಣ ನೀರಾವರಿ, ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ ಹೀಗೆ ಇತರೆ ಇಲಾಖೆಗಳ ಎಸ್‌ಸಿಪಿ, ಟಿಎಸ್‌ಪಿ ಹಣ ಯಾವ ರೀತಿ ಲೂಟಿಯಾಗುತ್ತಿದೆ ಎನ್ನುವ ಸಂಪೂರ್ಣ ದಾಖಲೆ ತಮ್ಮ ಬಳಿಯಿದೆ. ಸಮಾಜ ಕಲ್ಯಾಣ ಇಲಾಖೆಯ ಮಾರ್ಗಸೂಚಿ ಮತ್ತು ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅನುಷ್ಠಾನ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ ನಿಯಮಾವಳಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಪೂರ್ಣ ಉಲ್ಲಂಘಿಸಲಾಗುತ್ತಿದೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಎಲ್ಲಿ ಬಳಸಬೇಕು ಎನ್ನುವುದಕ್ಕೆ ಸಂಬಂಧಿಸಿ, ಸ್ಪಷ್ಟ ಸೂಚನೆಗಳಿವೆ.

ಶೇ.50 ರಿಂದ 75 ಅನುಪಾತದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನ ವಾಸವಾಗಿರುವ ಬಡಾವಣೆಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿ ಕೈಗೊಳ್ಳಬೇಕೆಂದು ಸ್ಪಷ್ಟವಾಗಿದೆ. ಆದರೆ, ಶಾಸಕ ಡಾ.ಶಿವರಾಜ ಪಾಟೀಲ್ ಅವರು, ಅನುದಾನ ಲೂಟಿ ಮಾಡುವ ಉದ್ದೇಶದಿಂದ ಪರಿಶಿಷ್ಟ ಜನಾಂಗವಿಲ್ಲದಿರುವ ಬಡಾವಣೆಗಳಲ್ಲೂ ಕಾಮಗಾರಿ ಕ್ರಿಯಾಯೋಜನೆ ರೂಪಿಸಲಾಗಿದೆ. ಇದು ಸರಾಸರಿ ನಿಯಮ ಉಲ್ಲಂಘನೆ ಮಾತ್ರವಲ್ಲ. ಶಾಸಕರು ಮತ್ತು ಅಧಿಕಾರಿಗಳು ಈ ಹಣ ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಿಡುಗಡೆಗೊಂಡ ಅನುದಾನ ಕಾಮಗಾರಿಯಲ್ಲಿ ದಲಿತ ಗುತ್ತೇದಾರರು ಪಾಲ್ಗೊಳ್ಳುವಂತೆ ಮತ್ತು ಅವರಿಗೆ ಕಾಮಗಾರಿ ಒದಗಿಸುವ ಉದ್ದೇಶ ಒಳಗೊಂಡಿರುತ್ತದೆ. ಆದರೆ, ಶಾಸಕರು ಅಧಿಕಾರಿಗಳ ಮೇಲೆ ಒತ್ತಡವೇರಿ, ವಿವಿಧ ಬಗೆಗಳ ಕಾಮಗಾರಿ ಪ್ಯಾಕೇಜ್ ಟೆಂಡರ್ ಮಾಡುವ ಮೂಲಕ ತಮಗೆ ಅನುಕೂಲವಾದ ಗುತ್ತೇದಾರರಿಗೆ ದೊರೆಯುವಂತೆ ಮಾಡುವುದು, ನಂತರ ಅದನ್ನು ಸಹೋದರರು ಮತ್ತು ಗುತ್ತೇದಾರರಾದ ಹಂಪನಗೌಡ, ಚನನ್ನಗೌಡ ಹಾಗೂ ಇತರರಿಗೆ ಉಪ ಗುತ್ತಿಗೆ ಪಡೆದು ತದನಂತರ ಶೇ.30 ರಷ್ಟು ಕಮಿಷನ್ ಆಧಾರದಲ್ಲಿ ಮತ್ತೇ ಉಪ ಗುತ್ತಿಗೆ ಮೂಲಕ ಸ್ಥಳೀಯ ತಮ್ಮ ಬೆಂಬಲಿಗರಿಗೆ ನೀಡುವ ಪರಂಪರೆ ಪರಿಪಾಠ ನಗರದಲ್ಲಿ ನಡೆದಿದೆ.
ಇದರಿಂದಾಗಿ ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕರ್ನಾಟಕ ನೀರಾವರಿ ನಿಗಮ ಯರಮರಸ್ ವಿಭಾಗದಲ್ಲಿ ಎಸ್‌ಸಿಪಿ ಯೋಜನೆಯಡಿ ಬಿಡುಗಡೆಗೊಂಡ 5 ಕೋಟಿ ಕಾಮಗಾರಿಗೆ ಪ್ಯಾಕೇಜ್ ಟೆಂ‌ಡ‌ರ್ ಮಾಡಿ, ಸೈಯದ್ ಅಕ್ಬರ್ ಪಾಷಾ ಮಾನ್ವಿ ಇವರಿಗೆ ಟೆಂಡರ್ ಮೂಲಕ ನೀ‌ಡಲಾಗಿದೆ. ಅದೇ ರೀತಿ ಮತ್ತೊಂದು 5 ಕೋಟಿ ಕಾಮಗಾರಿ ಟಿಎಸ್‌ಪಿ ಯೋಜನೆಯಡಿ ಸದರಿ ಗುತ್ತೇದಾರರಿಗೆ ಟೆಂಡರ್ ಮೂಲಕ ನೀಡಲಾಗಿದೆ. ಜೂನ್ 30 ಕ್ಕೆ ಕಾಮಗಾರಿ ಆರಂಭ ಆದೇಶ ಪತ್ರವೂ ನೀಡಿದೆ.

ಆದರೆ, ಈ 10 ಕೋಟಿ ಕಾಮಗಾರಿ ಇಂದಿನವರೆಗೂ ನಡೆಯದಿರುವುದು ಇದರ ಹಿಂದಿನ ದುರುದ್ದೇಶ ಸ್ಪಷ್ಟಗೊಳ್ಳುತ್ತದೆ. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಂಡಿದ್ದರೇ, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಎರಡು ಮಳೆಗೆ ಕೊಳಚೆ ಪ್ರದೇಶದ ಜನ ಮತ್ತು ದಲಿತ ಬಡಾವಣೆಯ ಜನ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡು ಭಾರೀ ಆರ್ಥಿಕ ನಷ್ಟಕ್ಕೆ ಗುರಿಯಾಗುವುದು ತಪ್ಪಿಸಬಹುದಾಗಿತ್ತು. ಜನವರಿ ತಿಂಗಳಲ್ಲಿ ಕಾಮಗಾರಿ ಆದೇಶ ಪತ್ರ ನೀಡಿದ್ದರೂ, ಕಳೆದ 10 ತಿಂಗಳಿಂದ ಈ ಕಾಮಗಾರಿ ನಡೆಯದಿರಲು ಕಾರಣವೇನು ಎನ್ನುವುದು ಈ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ದಲಿತ ಜಾನಂಗಕ್ಕೆ ಉತ್ತರಿಸಬೇಕಾಗಿದೆ.
ಈ ಹಣ ಲೂಟಿ ಮಾಡುವ ಉದ್ದೇಶ ಇಲ್ಲದಿದ್ದರೇ, ತಮ್ಮದೇ ಕ್ಷೇತ್ರದಲ್ಲಿ ಕಾಮಗಾರಿ ನಿರ್ವಹಿಸಲು ಒತ್ತಡವೇರಲಿಲ್ಲವೇಕೆ? ಕರ್ನಾಟಕ ಪಾರದರ್ಶಕ ಕಾಯ್ದೆಯನ್ವಯ ಯಾವುದೇ ಕಾಮಗಾರಿ ಆರಂಭಿಸುವ ಪೂರ್ವ ಆ ಕಾಮಗಾರಿ ಯಾವ ಯೋಜನೆಯಡಿ ಕೈಗೊಳ್ಳಲಾಗಿದೆ. ಎಷ್ಟು ಅನುದಾನದಲ್ಲಿ ನಿರ್ವಹಿಸಲಾಗುತ್ತಿದೆ ಎನ್ನುವ ನಾಮಫಲಕ ಅಳವಡಿಸಬೇಕು. ಆದರೆ, ನಗರದಲ್ಲಿ ಯಾವುದೇ ಕಾಮಗಾರಿಗೂ ಈ ರೀತಿಯ ಪಾರದರ್ಶಕತೆ ನಿರ್ವಹಿಸದಿರುವುದು ಅನುದಾನ ದುರ್ಬಳಕೆಯ ದುರುದ್ದೇಶಕ್ಕೆ ನಿದರ್ಶನವಾಗಿದೆ.
ಕೆಬಿಜೆಎನ್‌ಎಲ್ 18.50 ಕೋಟಿ ಕಾಮಗಾರಿ ಸುರುಪುರದಿಂದ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಯಡಿ ಶೇ.100 ಕ್ಕೆ 100 ರಷ್ಟು ಹಣ ಲೂಟಿ ಮಾಡುವ ಉದ್ದೇಶ ಹೊಂದಲಾಗಿದೆ. ಯಾವುದೇ ಕಾಮಗಾರಿಯೂ ಅಂದಾಜು ಪಟ್ಟಿ ಸಿದ್ದಪಡಿಸದೇ, ಟೆಂಡರ್ ಕರೆಯಲಾಗಿದೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ದೊರೆಯಬೇಕಾದ ಭಾರೀ ಮೊತ್ತದ ಅನುದಾನ ಸೌಲಭ್ಯ ವಂಚಿಸುತ್ತಿದ್ದರೂ, ದಲಿತ ಗುತ್ತೇದಾರರು ಮತ್ತು ದಲಿತ ನಗರಸಭೆ ಸದಸ್ಯರು ಈ ಬಗ್ಗೆ ಜಾಗೃತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು.

18 ಕೋಟಿ ಅನುದಾನದಡಿ ಆಯಾ ವಾರ್ಡಗಳಲ್ಲಿ ಕಾಮಗಾರಿ ನಡೆದರೇ, ಅಲ್ಲಿಯ ದಲಿತ ಜನ ಆರೋಗ್ಯ ಮತ್ತು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆಂಬ ಪ್ರಜ್ಞೆ ನಮ್ಮವರಲ್ಲಿ ಮೂಡದಿದ್ದರೇ, ನಮ್ಮ ಜನಾಂಗದ ಅನುದಾನ ಸಂಪೂರ್ಣ ದುರ್ಬಳಕೆಯಾಗಿ ಒಂದೇ ಕುಟುಂಬ ಅನುಕೂಲಕ್ಕೆ ದಲಿತರು ಬಲಿಯಾಗುವಂತಾಗುತ್ತದೆ. 18.5 ಕೋಟಿ ಅಲ್ಲದೇ, ಕೆಬಿಜೆಎನ್ಎಲ್‌ನಿಂದ 12 ಕೋಟಿ ಕಾಮಗಾರಿಗೂ ನಡೆಯದೇ, ನೆನೆಗುದಿಗೆ ಬಿದ್ದಿದೆ. ನೂರಾರು ಕೋಟಿ ಅನುದಾನ ತಂದಿರುವುದಾಗಿ ಹೇಳುವ ಶಾಸಕರು ಶ್ವೇತ ಪತ್ರ ಬಿಡುಗಡೆ ಮಾಡಿ, ಯಾವ ಕಾಮಗಾರಿ ಎಲ್ಲಿ ಎಷ್ಟು ನಡೆದಿವೆ ಎನ್ನುವುದನ್ನು ಜನರಿಗೆ ಸ್ಪಷ್ಟಪಡಿಸಲಿ ಎಂದು ಸವಾಲ್ ಹಾಕಿದರು.
ಆಶಾಪೂರು ರಸ್ತೆಯ ರಮೇಶ ಕಾಲೋನಿಯಲ್ಲಿ ಕೇವಲ ಎರಡು ಪರಿಶಿಷ್ಟ ಜಾತಿ ನಿವಾಸಿಗಳವೆ. ಇಲ್ಲಿ 50 ಲಕ್ಷ ಎಸ್‌ಸಿಪಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಥಳೀಯ ಲೇಔಟ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಲೇಔಟ್ ರಸ್ತೆ, ಚರಂಡಿ ಅಭಿವೃದ್ಧಿಗೆ ಈ ಅನುದಾನವನ್ನು ಬಳಸುವಂತಹ ಕುತಂತ್ರವೂ ನಡೆದಿದೆಂದು ಗಂಭೀರವಾಗಿ ಆರೋಪ ಮಾಡಿದರು. ಈ ಎಲ್ಲಾ ಪ್ರಕರಣ ಹಿನ್ನೆಲೆ, ಇನ್ನೂ ಮುಂದೆ ಪರಿಶಿಷ್ಟ ಜಾತಿ, ಪಂಗಡ ಅನುದಾನ ದುರ್ಬಳಕೆಯಾಗದಂತೆ ಜಾದಳ ಪಕ್ಷದಿಂದ ಕಾವಲು ಕಾಯುವುದು ಮಾತ್ರವಲ್ಲ, ಪ್ರತಿ ಅನುದಾನದ ಬಳಕೆಗೆ ಸಂಬಂಧಿಸಿ, ಮಾಹಿತಿಯನ್ನೂ ಪಡೆಯಲಾಗುತ್ತದೆಂದು ಎಚ್ಚರಿಸಿದ ಅವರು, ಅನುದಾನ ದುರ್ಬಳಕೆ ಮಾಡಿದವರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಾಸಕರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಪವನಕುಮಾರ, ರಾಮಕೃಷ್ಣ, ವಿಶ್ವನಾಥ ಪಟ್ಟಿ, ಅಕ್ಬರ್ ನಾಗುಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here