ತಬ್ಲೀಗಿ ಜಮಾತ್ ನ ಕೇಂದ್ರ ಕಚೇರಿ ನಿಜಾಮುದ್ದೀನ್ ನಲ್ಲಿ ನಡೆದ ಘಟನೆಗಳ ನೈಜ ಸ್ಥಿತಿ ಇಲ್ಲಿದೆ ನೊಡಿ

0
304

ನವದೆಹಲಿ,ಏ,01-: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ 15 ದಿನಗಳಿಗೆ ಮುಂಚೆ ನಡೆದ ಸಭೆಯ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ತಿರುವು ಸಿಕ್ಕಿದ್ದು, ಸದರಿ ಸಭೆಯ ಸಂಘಟಕರು ಸರ್ಕಾರೀ ಅಧಿಕಾರಿಗಳಿಗೆ ಅಲ್ಲಿದ್ದ ಜನರನ್ನು ಹೊರಕಳಿಸಲು ಮೊದಲೇ ಮನವಿ ಮಾಡಿದ್ದುದರ ಕುರಿತು ವಿವರಗಳನ್ನು ಒದಗಿಸಿದ್ದಾರೆ.

ಸದರಿ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರೆನ್ನಲಾದ 10 ಜನರು ಇದೀಗ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 6 ಜನ ತೆಲಂಗಾಣದವರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 850ಕ್ಕೂ ಹೆಚ್ಚು ಜನರನ್ನು ಇದೀಗ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಪೈಕಿ 24 ಜನರಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾಗಿ ಈ ಸಭೆಯನ್ನು ಆಯೋಜಿಸಿದ್ದವರು ಲಾಕ್‌ಡೌನ್ ಘೋಷಣೆಯಾದ ನಂತರವೂ ಮುಂದುವರೆಸಿದ್ದರು ಎಂದು ಬೆಳಗ್ಗಿನಿಂದ ಸುದ್ದಿಯಾಗಿತ್ತು. ಆದರೆ ದೀರ್ಘ ಉತ್ತರ ನೀಡಿರುವ ಆಯೋಜಕರು, ಲಾಕ್‌ಡೌನ್‌ ಆದ ತಕ್ಷಣವೇ ಸಭೆಯನ್ನು ನಿಲ್ಲಿಸಿ 1500 ಜನರನ್ನು ಅಲ್ಲಿಂದ ಕಳಿಸಲಾಯಿತೆಂದು ಹೇಳಿದ್ದಾರೆ. ಉಳಿದವರನ್ನು ಕಳಿಸಲು ಅಧಿಕಾರಿಗಳ ನೆರವು ಕೇಳಿದರೂ ಸಿಕ್ಕಿಲ್ಲ ಎಂಬುದಾಗಿ ಹೇಳಿದ್ದಾರೆ.

ಅದರ ವಿವರಗಳಿಗೆ ಹೋಗುವ ಮುಂಚೆ ಕೆಲವು ಅಂಶಗಳನ್ನು ನೋಡೋಣ.

ಮಾರ್ಚ್‌ 13 ರಿಂದ 15ರ ವರೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಡೋನೇಷ್ಯಾ ಹಾಗೂ ಮಲೇಷ್ಯಾದಿಂದಲೂ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ಆದರೆ, ಇದೀಗ ಈ ಸಭೆಯಲ್ಲಿ ಪಾಲ್ಗೊಂಡಿದ್ದ 10 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಈ ಧಾರ್ಮಿಕ ಸಭೆಯನ್ನೂ ಆಯೋಜಿಸಿದ್ದ ಮೌಲಾನಾ ವಿರುದ್ಧ ದೆಹಲಿ ಸರ್ಕಾರ ಎಫ್‌ಐಆರ್ ದಾಖಲಿಸಿದೆ.

ಅಲ್ಲದೆ, ದೇಶದಾದ್ಯಂತ ಇದೀಗ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ಹರಡಿದವರು ಮುಸ್ಲಿಮರು ಎಂಬ ಹೊಸ ಆರೋಪವೊಂದು ಮುನ್ನೆಲೆಗೆ ಬರುತ್ತಿದೆ. ಈ ಮೂಲಕ ಮತ್ತೊಮ್ಮೆ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸಿ ನೋಡುವ ಕೆಲಸಕ್ಕೆ ಆಡಳಿತರೂಢ ಸರ್ಕಾರ ಮತ್ತು ಮಾಧ್ಯಮಗಳು ಮುಂದಾಗಿವೆ. ಆದರೆ, ಈ ಘಟನೆಯ ಹಿಂದಿನ ನೈಜ ಸಂಗತಿಗಳ ಕಡೆಗೆ ಒಮ್ಮೆ ಗಮನ ನೀಡಿದರೆ ಬೇರೆಯದೇ ವಿಚಾರ ಬಯಲಾಗುತ್ತಿದೆ.

ಅಸಲಿಯತ್ತೇನು?:

ಅಸಲಿಗೆ ಈ ಧಾರ್ಮಿಕ ಕಾರ್ಯಕ್ರಮವನ್ನು ಮಾರ್ಚ್‌ 13ರಂದೇ ಆಯೋಜಿಸಲಾಗಿದೆ. ಹಾಗೂ ಆ ಹೊತ್ತಿಗಿನ್ನೂ ಕೊರೋನಾ ವಿರುದ್ಧ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರಲಿಲ್ಲ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ದೇಶದ ಮೇಲೆ ಜನತಾ ಕರ್ಫ್ಯೂ ಹೇರುವ ಮೂಲಕ ಸಮಾಜಿಕ ಅಂತರದ ಬಗ್ಗೆ ಮಾತನಾಡಿದ್ದೇ ಮಾರ್ಚ್‌ 21 ರಂದು. ಇನ್ನು ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದು ಮಾರ್ಚ್‌ 25 ರಂದು. ಆದರೆ, ಮಾರ್ಚ್‌ 13ರಂದೇ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಆಯೋಜಕರ ಮೇಲೆ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ ಎಂಬುದು ಮೊದಲ ಪ್ರಶ್ನೆ.

ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ ನಂತರ ಹಾಗೂ ಸಾಮಾಜಿಕ ಅಂತರದ ಕುರಿತು ಅರಿವು ಮೂಡಿಸಿದ ನಂತರ ಕಾರ್ಯಕ್ರಮ ಆಯೋಜಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಅವರವರ ರಾಜ್ಯಕ್ಕೆ ಸುರಕ್ಷಿತವಾಗಿ ತಲುಪಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಆಗ ಇವರ ಮನವಿಗೆ ಯಾವ ಸರ್ಕಾರವೂ ಸ್ಪಂದಿಸಿರಲಿಲ್ಲ.

ಆದರೆ ಈ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ 6 ಜನ ತೆಲಂಗಾಣ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಿದ್ದಂತೆ ಇಡೀ ದೇಶದ ಆಡಳಿತ ವರ್ಗ ಈ ಕಾರ್ಯಕ್ರಮ ಆಯೋಜಕರ ವಿರುದ್ಧ ತಿರುಗಿಬಿದ್ದಿದೆ. ಮಾಧ್ಯಮಗಳೂ ಸಹ ತಮ್ಮ ಎಂದಿನ ಯೋಜಿತ ಪ್ರಚಾರಕ್ಕೆ ಮೊರೆ ಹೋಗಿವೆ. ಆದರೆ ಆಡಳಿತ ವರ್ಗವೇ ಮಾಡಿರುವ ತಪ್ಪಿಗೆ ಒಂದು ಸಮುದಾಯವನ್ನು ಗುರಿ ಮಾಡುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತ ಸಮಾಜದ ಪ್ರಶ್ನೆ.

ಈ ಕುರಿತು ಸ್ವತಃ ಧಾರ್ಮಿಕ ಕಾರ್ಯಕ್ರಮ ಆಯೋಜಕರೂ ಸಹ ಸ್ಪಷ್ಟನೆ ನೀಡಿದ್ದಾರೆ. ಆ ಸ್ಪಷ್ಟನೆಯನ್ನು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಇದರ ಕನ್ನಡ ಅನುವಾದ ಇಲ್ಲಿದೆ.

“ದಿಲ್ಲಿಯ ತನ್ನ ಕೇಂದ್ರ ಕಚೇರಿಯಲ್ಲಿ ಸೇರಿರುವ ಜನಸಂದಣಿಯಿಂದ ಕೊರೋನ ಹರಡುತ್ತಿದೆ ಎಂಬ ವದಂತಿಗಳು ಹಾಗೂ ಕೆಲವು ಟಿವಿ ಚಾನಲ್ ಗಳ ವರದಿಗಳ ಬಗ್ಗೆ ತಬ್ಲೀಗಿ ಜಮಾಅತ್ ನ ಕೇಂದ್ರ ಕಚೇರಿ ಮರ್ಕಝ್ ನಿಝಾಮುದ್ದೀನ್ ಸ್ಪಷ್ಟನೆ ನೀಡಿದೆ.”

ಹಠಾತ್ತನೆ ಘೋಷಿಸಲಾದ ಜನತಾ ಕರ್ಫ್ಯೂ ಮತ್ತು ಅದರ ಬೆನ್ನಿಗೆ ಪ್ರಕಟವಾದ ದಿಲ್ಲಿ ಸಿಎಂ ಅವರ ಲಾಕ್ ಡೌನ್ ಹಾಗೂ ಬಳಿಕ ಪ್ರಧಾನಿಯವರು ಘೋಷಿಸಿದ ಲಾಕ್ ಡೌನ್ ನಿಂದ ಮೊದಲೇ ಮರ್ಕಝ್ ನಲ್ಲಿದ್ದ ಜನರು ಅಲ್ಲಿಂದ ತಮ್ಮ ಸ್ಥಳಗಳಿಗೆ ವಾಪಸ್ ಹೋಗಲು ಸಾಧ್ಯವಾಗದೆ ಅನಿವಾರ್ಯವಾಗಿ ಉಳಿಯಬೇಕಾಯಿತು . ಆದರೂ ಸುಮಾರು 1500 ಜನರು ಸಾಧ್ಯವಿದ್ದ ವಾಹನಗಳಲ್ಲಿ ತಕ್ಷಣ ಕೇಂದ್ರ ಕಚೇರಿಯನ್ನು ಬಿಟ್ಟು ತೆರಳಿದ್ದಾರೆ. ಅನಿವಾರ್ಯವಾಗಿ ಹೋಗಲಾಗದೆ ಉಳಿದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಇಲ್ಲಿ ಉಳಿದಿದ್ದಾರೆ. ಅವರನ್ನೂ ಕಳಿಸಲು ಕೇಂದ್ರ ಕಚೇರಿಯೇ ವಾಹನ ವ್ಯವಸ್ಥೆ ಮಾಡಿ ಅದಕ್ಕೆ ಪಾಸ್ ನೀಡುವಂತೆ ವಿನಂತಿಸಿದರೂ ಈವರೆಗೆ ಅದು ಈವರೆಗೆ ಸಿಕ್ಕಿಲ್ಲ. ಸಿಕ್ಕಿದ್ದರೆ ಉಳಿದವರೂ ಇಲ್ಲಿಂದ ವಾಪಸ್ ಹೋಗಬಹುದಿತ್ತು. ಇಲ್ಲಿ ಉಳಿದವರು ವಾಪಸ್ ಹೋಗಲು ನಗರದ  ಅಲ್ಲಲ್ಲಿ ಬಸ್ ಸ್ಟಾಂಡ್ ಇತ್ಯಾದಿಗಳಲ್ಲಿ ಗುಂಪು ಸೇರದಂತೆ ಖಾತರಿಪಡಿಸಲು ಅವರನ್ನು ಇಲ್ಲೇ ಎಲ್ಲ ವೈದ್ಯಕೀಯ ನಿರ್ದೇಶನಗಳನ್ನು ಪಾಲಿಸುತ್ತಾ ಉಳಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮರ್ಕಝ್ ನಿಝಾಮುದ್ದೀನ್ ಸುಮಾರು 100 ವರ್ಷಗಳಿಂದ  ತಬ್ಲೀಗಿ ಜಮಾತ್ ನ ಅಂತರ್ ರಾಷ್ಟ್ರೀಯ ಕೇಂದ್ರ ಕಚೇರಿಯಾಗಿದೆ. ಇಲ್ಲಿ ವಿಶ್ವದೆಲ್ಲೆಡೆಯಿಂದ ಸಂದರ್ಶಕರು, ಅತಿಥಿಗಳು ಮುಂತಾದವರು ಪೂರ್ವ ನಿಗದಿತ ಗರಿಷ್ಠ ಐದು ದಿನಗಳ ಕಾರ್ಯಕ್ರಮಕ್ಕಾಗಿ ಬರುತ್ತಾರೆ. ಈ ಕಾರ್ಯಕ್ರಮಗಳು ಒಂದು ವರ್ಷ ಮೊದಲೇ ನಿಗದಿಯಾಗಿರುತ್ತವೆ. ಪ್ರಧಾನ ಮಂತ್ರಿಯವರು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದಾಗ ಮರ್ಕಝ್ ನಲ್ಲಿ ಚಾಲ್ತಿಯಲ್ಲಿದ್ದ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಲಾಗಿದೆ. ಆದರೆ ಮಾರ್ಚ್ 21ರಂದು ಹಠಾತ್ತನೆ ರೈಲ್ವೆ ಸೇವೆ ಸ್ಥಗಿತಗೊಂಡಾಗ ದೊಡ್ಡ ಸಂಖ್ಯೆಯ ಸಂದರ್ಶಕರು ಅನಿವಾರ್ಯವಾಗಿ ಇಲ್ಲೇ ಉಳಿಯಬೇಕಾಯಿತು. ಮರ್ಕಝ್‌ನಲ್ಲಿ ಪ್ರಧಾನಿ ಮನವಿಯಂತೆ ಜನತಾ ಕರ್ಫ್ಯೂವನ್ನು ಪಾಲಿಸಲಾಗಿದೆ. ಆದರೆ ಅದು ಮುಗಿಯುವ ಮೊದಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 23ರ ಬೆಳಗ್ಗೆ 6ರಿಂದ ಮಾರ್ಚ್ 31ರವರೆಗೆ ದಿಲ್ಲಿ ಲಾಕ್ ಡೌನ್‌ಗೆ ಆದೇಶಿಸಿದರು. ಇದರಿಂದ ಮರ್ಕಝ್‌ನಲ್ಲಿದ್ದ ಸಂದರ್ಶಕರಿಗೆ ತಮ್ಮ ಊರುಗಳಿಗೆ ಮರಳುವುದು ಅಸಾಧ್ಯವಾಯಿತು. ಆದರೂ ಸುಮಾರು 1500 ಮಂದಿ ಇದ್ದ ವ್ಯವಸ್ಥೆಯಲ್ಲಿ ಅಲ್ಲಿಂದ ಹೊರಟು ಹೋಗಿದ್ದಾರೆ. ಮಾರ್ಚ್ 23ರಂದು ಪ್ರಧಾನಿಯಿಂದ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಯಿತು. ಯಾರು ಎಲ್ಲಿದ್ದಾರೆ ಅಲ್ಲೇ ಇರಬೇಕು ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಅನಿವಾರ್ಯವಾಗಿ ಮರ್ಕಝ್‌ನಲ್ಲಿದ್ದವರನ್ನು ಪ್ರಯಾಣಕ್ಕೆ ಅನುಮತಿ ಸಿಗುವವರೆಗೆ ಸೂಕ್ತ ವೈದ್ಯಕೀಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಅಲ್ಲೇ ಉಳಿಸಿಕೊಳ್ಳಬೇಕಾಯಿತು.

ಮಾರ್ಚ್ 24ರಂದು ಮರ್ಕಝ್ ಅನ್ನು ಬಂದ್ ಮಾಡುವಂತೆ ಹಠಾತ್ತನೆ ಹಜ್ರತ್ ನಿಝಾಮುದ್ದೀನ್ ಪೊಲೀಸ್ ಠಾಣೆಯಿಂದ ನೋಟಿಸ್ ಬಂತು. ಅದಕ್ಕೆ ಅದೇ ದಿನ ಪ್ರತಿಕ್ರಿಯೆ ನೀಡಿ ಈಗಾಗಲೇ 1500 ಮಂದಿ ಹೊರಟು ಹೋಗಿರುವ ಮಾಹಿತಿ ನೀಡಿ, ಉಳಿದವರು ಹೋಗಲು 17 ವಾಹನಗಳ ಪಟ್ಟಿ ನೀಡಿ ಪಾಸ್ ನೀಡುವಂತೆ ಕೇಳಿಕೊಂಡೆವು. ಆದರೆ ಈವರೆಗೆ ಪಾಸ್‌ಗಳು ಸಿಕ್ಕಿಲ್ಲ. ಮಾರ್ಚ್ 25ರಂದು ಮರ್ಕಝ್‌ಗೆ ಭೇಟಿ ನೀಡಿದ ತಹಸೀಲ್ದಾರ್ ಹಾಗು ವೈದ್ಯಕೀಯ ತಂಡಕ್ಕೆ ಪೂರ್ಣ ಸಹಕಾರ ನೀಡಲಾಗಿದೆ. ಮಾರ್ಚ್ 26ರಂದು ಮರ್ಕಝ್‌ಗೆ ಭೇಟಿ ನೀಡಿದ ಎಸ್ ಡಿ ಎಂ ಅವರು ನಮ್ಮನ್ನು ಕರೆದಾಗ ಅವರನ್ನು ಹೋಗಿ ಮಾತನಾಡಿ ವಾಹನಗಳಿಗೆ ಪಾಸ್ ಕೊಡಿಸುವಂತೆ ಮತ್ತೆ ಕೇಳಿಕೊಂಡೆವು. ಮಾರ್ಚ್ 27ರಂದು ಮರ್ಕಝ್‌ನಿಂದ 6 ಮಂದಿಯನ್ನು ಅರೋಗ್ಯ ತಪಾಸಣೆಗಾಗಿ ಕರೆದೊಯ್ಯಲಾಯಿತು. ಮಾರ್ಚ್ 28ರಂದು ಎಸ್ ಡಿ ಎಂ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಬಂದು 33 ಮಂದಿಯನ್ನು ಅರೋಗ್ಯ ತಪಾಸಣೆಗೆಂದು ಕರೆದುಕೊಂಡು ಹೋಯಿತು. ಮರ್ಕಝ್ ತನ್ನಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ  ಅದೇ ದಿನ ಇದ್ದಕ್ಕಿದ್ದಂತೆ  ಲಜಪತ್ ನಗರ ಎಸಿಪಿ ಕಚೇರಿಯಿಂದ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು.

ಮಾರ್ಚ್ 30ರಂದು ಮರ್ಕಝ್‌ನಲ್ಲಿ ಕೊರೋನ ಸೋಂಕಿತರು ಇದ್ದಾರೆ ಮತ್ತು ಇದರಿಂದ ಕೆಲವು ಮೃತಪಟ್ಟಿದ್ದಾರೆ ಎಂದು ವದಂತಿಗಳು ಹರಡಲು ಪ್ರಾರಂಭವಾದವು. ಮರ್ಕಝ್ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಹೇಳಿದ ವರದಿ ಪ್ರಕಟವಾಯಿತು. ಲಾಕ್‌ಡೌನ್ ಘೋಷಣೆಯಾದ ದಿನದಿಂದ ಮರ್ಕಝ್ ಕೈಗೊಂಡ ಕ್ರಮಗಳು ಹಾಗು ನಂತರದ ಬೆಳವಣಿಗೆಗಳನ್ನು ಸಿಎಂ ಅವರ ಕಚೇರಿ ಕೇಳಿ ತಿಳಿದುಕೊಂಡಿದ್ದರೆ ಹಾಗೆ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ.

ಮರ್ಕಝ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಸದಾ ದೇಶದ ಕಾನೂನನ್ನು ಪಾಲಿಸುತ್ತಾ ಬಂದಿದೆ. ಈಗಲೂ ಕೊರೋನ ನಿಯಂತ್ರಣಕ್ಕೆ ಸರಕಾರದ ಎಲ್ಲ ಕ್ರಮಗಳನ್ನು ಅದು ಸಂಪೂರ್ಣ ಬೆಂಬಲಿಸುತ್ತದೆ. ಮರ್ಕಝ್ ಕೇಂದ್ರ ಕಚೇರಿಯನ್ನು ಕೊರೋನ ನಿಯಂತ್ರಣಕ್ಕೆ ಬೇಕಾದ ಐಸೋಲೇಷನ್ ಕೇಂದ್ರವಾಗಿ ಬೇಕಾದರೂ ಸರಕಾರ ಬಳಸಬಹುದು ಎಂದು ಮರ್ಕಝ್ ಪ್ರಕಟಣೆಯಲ್ಲಿ ಹೇಳಿದೆ.

ಇದು ನಡೆದ ಘಟನಾವಳಿ. ಈ ಪ್ರಕರಣ ಯಾವ ತಿರುವು ತೆಗೆದುಕೊಳ್ಳುವುದೋ ಎನ್ನುವುದನ್ನು ಕಾದು ನೋಡಬೇಕಿದೆ.

ಕೃಪೆ : ನಾನು ಗೌರಿ

LEAVE A REPLY

Please enter your comment!
Please enter your name here