ರಾಷ್ಟ್ರ ಕಟ್ಟುವ ಮತ್ತು ಒಗ್ಗೂಡಿಸುವ ಜವಾಬ್ದಾರಿ ಯುವಕರ ಮೇಲಿದೆ : ಶ್ರೀಶ್ರೀ ರವಿಶಂಕರ್ ಗುರೂಜಿ

0
86

ಬೆಂಗಳೂರು, ಫೆ.27- ಪ್ರತಿಯೊಬ್ಬ ಯುವಕರೂ ರಾಷ್ಟ್ರವನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ತೆಗೆದು ಕೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‍ನ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ತಿಳಿಸಿದರು. ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಏಳು ದಿನಗಳ ರಾಷ್ಟ್ರೀಯ ಏಕತಾ ದಿನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರುತಿನ ಬಗ್ಗೆ ಹೆಮ್ಮೆ ಪಡಬೇಕು. ಮೊದಲು ರಾಷ್ಟ್ರೀಯ ಗುರುತನ್ನು ಪರಿಗಣಿಸಬೇಕು, ನಂತರ ಧಾರ್ಮಿಕ ಗುರುತನ್ನು ತದನಂತರ ವೈಯಕ್ತಿಕ ಗುರುತನ್ನು ಪರಿಗಣಿಸಬೇಕು ಎಂದು ಹೇಳಿದರು.

ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ, ಭಾರತ ಸರಕಾರದ ಎನ್‍ಎಸ್‍ಎಸ್ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ, ನೆಹರೂ ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ ಜೆ.ನಿಕಮ, ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಎಸ್‍ಎಸ್‍ಸಿಎಎಸ್‍ಆರ್ ನಿರ್ದೇಶಕ ಎಚ್.ಜಿ.ಹರ್ಷ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪ್ರತಿವರ್ಷ ಭಾರತದ ಎಲ್ಲಾ ಭಾಷೆ, ಎಲ್ಲಾ ಭಾಗದ ಯುವಕರನ್ನು ಒಳಗೊಂಡಿರುವ ರಾಷ್ಟ್ರೀಯ ಏಕತಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ವಿಷಯವನ್ನು ಆಧರಿಸಿದ ಶಿಬಿರವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.  ಈ ಶಿಬಿರದ ಮುಖ್ಯ ಗುರಿ ಸಮುದಾಯ ಜೀವನವನ್ನು ಅಭಿವೃದ್ಧಿಪಡಿಸುವುದು. ಏಳು ದಿನಗಳ ಶಿಬಿರದಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಬೆಂಗಳೂರಿನ ಶ್ರೀ ಆಯುರ್ವೇದ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಎನ್‍ಎಸ್‍ಎಸ್ ಪ್ರಾದೇಶಿಕ ನಿರ್ದೇಶನಾಲಯ ಈ ಶಿಬಿರವನ್ನು ಆಯೋಜಿಸಿದೆ.

LEAVE A REPLY

Please enter your comment!
Please enter your name here