ಆದಿವಾಸಿ ಬುಡಕಟ್ಟು ನಿಗಮ ಸ್ಥಾಪನೆಗೆ ಚಿಂತನೆ – ಮುಖ್ಯಮಂತ್ರಿ ಯಡಿಯೂರಪ್ಪ

0
278

ರಾಯಚೂರು,ಜ13 – ಆದಿವಾಸಿಗಳ ಕ್ಷೇಮಾಭಿವೃದ್ಧಿ ಕಾಪಾಡಲು ರಾಜ್ಯದಲ್ಲಿ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟದ ಸಹುದ್ಯೋಗಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾನ್ಯ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಇರುವ ಕಾಗಿನಲೆ ಮಹಾಸಂಸ್ಥಾನ ಕನಕಗುರು ಪೀಠದಲ್ಲಿ ಆಯೋಜಿಸಲಾಗಿದ್ದ ಹಾಲುಮತ ಸಂಸ್ಕೃತಿ ವೈಭವ – 2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾಕಷ್ಟು ಬುಡಕಟ್ಟು ಜನಾಂಗಗಳಿದ್ದು ಅವರನ್ನು ಗುರುತಿಸಿ ಅಭಿವೃದ್ಧಿಪಡಿಸಲು ಬುಡಕಟ್ಟು ಅಭಿವೃದ್ಧಿ ನಿಗಮ ಆರಂಭಿಸಲು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು, ಹಾಲುಮತ ಸಂಸ್ಕೃತಿ ವೈಭವವು ಉತ್ತಮ ಕಾರ್ಯಕ್ರಮವಾಗಿದ್ದು, ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮ ಉದ್ಘಾಟಿಸಲು ಬಂದಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಕೃಷಿ ಹಾಗೂ ಕೃಷಿ ಅವಲಂಭಿತ ಜನಾಂಗವಾದ ಹಾಲುಮತದವರು ವಿಶಿಷ್ಟ ಹಾಗೂ ಸಂಪತ್ಬರಿತ ಸಂಪ್ರಾದಾಯವನ್ನು ಹೊಂದಿದ್ದಾರೆ, ಕನಕದಾಸರು ಸೇರಿದಂತೆ ಸಾಕಷ್ಟು ಮಹಾನುಭಾವರು ಈ ಸಮುದಾಯದಿಂದ ಬಂದಿದ್ದಾರೆ ಎಂದವರು ಹೇಳಿದರು. ದೀನ, ದಲಿತರನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಕನಕಗುರು ಪೀಠದ ಶ್ರೀ ಶಿವನಾಂದ ಪುರಿ ಮಹಾಸ್ವಾಮಿಗಳ ಪಾತ್ರಬಹು ಮುಖ್ಯವಾಗಿದೆ ಎಂದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಸಂದರ್ಭದಲ್ಲಿ ಎರಡೂವರೆ ಲಕ್ಷದಿಂದ 3 ಲಕ್ಷ ಮನೆಗಳು ನೆಲಸಮವಾಗಿವೆ, 5 ಲಕ್ಷ ಎಕರೆ ನೀರಾವರಿ ಜಮೀನಿನ ಜೊತೆಗೆ ಸಾಕಷ್ಟು ಬೆಳೆನಷ್ಟ ಆಗಿದೆ. ಅವರಿಗೆ ಪುರ್ನವಸತಿ ಕಲ್ಪಿಸಲಾಗಿದೆ, ಮುಂಬರುವ ಮಾರ್ಚ ನಂತರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು ಈ ಭಾಗ ಸೇರಿದಂತೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಎಚ್. ವಿಶ್ವನಾಥ್ ಅವರು ಮಾತನಾಡಿ, ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಉತ್ತಮ ನಾಯಕ, ಅವರು ಮುಖ್ಯಮಂತ್ರಿಯಾಗಲು ಹಾಲುಮತ ಸಂಸ್ಕೃತಿಯ ಕೊಡುಗೆಯೂ ಬಹಳಷ್ಟಿದೆ. ಸಮಾಜದ ಅಭಿವೃದ್ಧಿಗಾಗಿ ಎಲ್ಲ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರು ಅತಿಹೆಚ್ಚು ಅನುದಾನ ಒದಗಿಸಿದ್ದಾರೆ. ಕಾಗಿನೆಲೆ ಗುರುಪೀಠಕ್ಕೆ ೩೫ ಕೋಟಿ ಅನುದಾನ ನೀಡಿದ್ದಾರೆ ಎಂದವರು ಹೇಳಿದರು. ತಿಂಥಣಿ ಬ್ರಿಡ್ಜ್ ಕನಕಗುರು ಪೀಠದಿಂದ ಮಹತ್ವದ ಬೇಡಿಕೆ ಆದಿವಾಸಿ ಅಭಿವೃದ್ಧಿ ನಿಗಮ ಆರಂಭಿಸಬೇಕೆನ್ನುವುದು, ಅಲೆಮಾರಿ, ಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ, ಸಂಸ್ಕೃತಿ ಆಧಾರದಲ್ಲಿ ತಿಂಥಣಿ ಬ್ರಿಡ್ಜ್ ಮಠದಿಂದ ಕೆಲಸ ಮಾಡಲಾಗುತ್ತಿದೆ, ವ್ಯಕ್ತಿಯನ್ನು ಮೆರೆಸುವ, ವಿಜೃಂಭಿಸುವ ಕೆಲಸವನ್ನು ಮಠ ಮಾಡುತ್ತಿಲ್ಲ. ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕೆಲಸ ಮಾಡಲಾಗಿದೆ, ಕನಕಗುರು ಪೀಠಕ್ಕೆ ಪ್ರಥಮವಾಗಿ ಸರ್ಕಾರದಿಂದ ಒಂದು ಕೋಟಿ ರೂ.ಗಳ ಅನುದಾನವನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದಾರೆ. ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಸಾದ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪುನಃ ಅನುದಾನ ಒದಗಿಸಲಿದ್ದಾರೆ ಎನ್ನುವ ಆಶಯವಿದೆ. ಅತಿಸೂಕ್ಷ್ಮ ಸಮುದಾಯಗಳ ಪರವಾಗಿ ಆದಿವಾಸಿ ಬುಡಕಟ್ಟು ಅಭಿವೃದ್ಧಿ ನಿಗಮ ಆಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕೆಲಸವನ್ನು ಕನಕಗುರು ಮಾಡುತ್ತಿದೆ. ಸರ್ಕಾರದಿಂದ ಪೀಠದ ಬೇಡಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಇದೇ ಸಮಾರಂಭದಲ್ಲಿ ಗದಗದ ವಿದ್ಯಾನಿದಿ ಪ್ರಕಾಶನದ ಜಯದೇವ ಮೆಣಸಿಗಿ ಅವರಿಗೆ ಹಾಲುಮತ ಭಾಸ್ಕರ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ಎಂ. ಮೈತ್ರಿ ಅವರಿಗೆ ಕನಕರತ್ನ, ಕೊಡಗಿನ ಆದಿವಾಸಿ ಹೋರಾಟಗಾರ್ತಿ ಮುತ್ತಮ್ಮ ಅವರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಕೇಂದ್ರದ ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಮೀ, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ಎನ್.ಶಂಕ್ರಪ್ಪ, ಶರಣಪ್ಪಗೌಡ ಜಾಡಲದಿನ್ನಿ, ಸೇರಿದಂತೆ ವಿವಿಧ ಜನಪತ್ರಿನಿಧಿಗಳು ಹಾಗೂ ಗಣ್ಯರು ವೇದಿಕೆಯಲ್ಲಿದ್ದರು. ಮಾಜಿ ಸಂಸದ ಕೆ.ವಿರುಪಾಕ್ಷಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here