ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಬೇರೆ ಯಾವುದೇ ಕಾಮಗಾರಿಗೆ ಅನುದಾನ ನೀಡುವುದಿಲ್ಲ ; ಸುಬೋದ್ ಯಾದವ್

0
173

ರಾಯಚೂರು.08:- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಬೇರೆ ಯಾವುದೇ ಕಾಮಗಾರಿಗೆ ಅನುದಾನ ನೀಡುವುದಿಲ್ಲ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದಿ ಮಂಡಳಿಯ ಅಧ್ಯಕ್ಷರೂ ಆಗಿರುವ ಸುಬೋದ್ ಯಾದವ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಜ.07ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಳ್ಳಲು ಬಿಡುಗಡೆಯಾದ ಅನುದಾನವನ್ನು ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು, ನಿಗಧಿತ ಅವಧಿಯೊಳಗೆ ಟೆಂಡರ್ ಕರೆಯಬೇಕು ಮತ್ತು ಟೆಂಡರ್ ತೆರೆದು ಗುತ್ತೆದಾರರಿಗೆ ಕಾಮಗಾರಿಯ ನಿರ್ವಹಿಸುವ ಜವಾಬ್ದಾರಿ ನೀಡಬೇಕು ಎಂದರು.
ಅಧಿಕಾರಿಗಳ ವ್ಯಾಪ್ತಿಯೊಳಗೆ ಬರುವ ಕಾಮಗಾರಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದ ಅವರು, ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಆಗಮಿಸಿದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ನಗರದ ವಾರ್ಡ ನಂ.11ರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಬೋರ್‌ವೇಲ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆದಿಲ್ಲ ಈ ರೀತಿ ನಿರ್ಲಕ್ಷ ವಹಿಸಿದರೇ ಹೇಗೆ, ಕೆಲಸ ಮಾಡುವ ಸಾಮಾರ್ಥ್ಯ ಹೊಂದಿಲ್ಲವೆಂದು ಅಧಿಕಾರಿಗಳ ಮೇಲೆ ಕೆಂಡ ಮಂಡಲವಾದರು.
2018-19ನೇ ಸಾಲಿನಲ್ಲಿ ಪಿಆರ್‌ಇಡಿ ಇಲಾಖೆ ವತಿಯಿಂದ 27 ಕಾಮಗಾರಿಗಳ ಪೈಕಿ ಕೇವಲ 8 ಕಾಮಗಾರಿ ಪೂರ್ಣಗೊಳಿಸಲಾಗಿದ್ದು, 19 ಕಾಮಗಾರಿಗಳಿಗೆ ಇದುವರೆಗೂ ಟೆಂಡರ್ ಕರೆಯುವಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಅಧಿಕಾರಿಗಳಾದ ಮಾರುತಿ, ಫಯಾಜ್‌ರನ್ನು ಆಯುಕ್ತರು ತರಾಟೆಗೆ ತೆಗೆದುಕೊಂಡರು.
2018-19ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 19 ಕಾಮಗಾರಿಗಳ ಪೈಕಿ ಕೇವಲ 2 ಕಾಮಗಾರಿ ಪೂರ್ಣಗೊಳಿಸಿ 12 ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ ಪಿಡಬ್ಲೂಡಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಇಇ) ಹನುಮಂತು ಅವರನ್ನು ಆಯುಕ್ತರು ತರಾಟೆಗೆ ತೆಗೆದುಕೊಂಡರು, ಸಿಂಧನೂರು ತಾಲೂಕಿನ ಪಶು ಆಸ್ಪತ್ರೆ ಕಟ್ಟಡ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಸಿಲ್ಲ ಎಂದು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಅವರು ಕಾಮಗಾರಿಗೆ ೩ಕೋಟಿ ರೂ. ಅನುದಾನದ ಅವಶ್ಯಕತೆ ಇದೆ ಎಂದು ಸಭೆಗೆ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜ.15 ರೊಳಗೆ ಟೆಂಡರ್ ಪ್ರಕ್ರಿಯೆ ನಡೆಸಿ ಕೆಲಸ ಪ್ರಾರಂಭಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷಿ ಕಾಂತ ರೆಡ್ಡಿ ಜಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here