ಕೊರೇಗಾಂವ್ ವಿಜಯೋತ್ಸವ ಆಚರಣೆ; ಮಾನ್ವಿ

0
715

ಮಾನ್ವಿ:ಜ.01.ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿ ಕೋರೆಗಾoವ್ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಿ.ಲಕ್ಷ್ಮಣ ಜಾನೇಕಲ್ ಜಿಲ್ಲಾಧ್ಯಕ್ಷರು ಭಾರತೀಯ ದಲಿತ ಪ್ಯಾಂಥರ್ ಅವರು ಮಾತನಾಡುತ್ತಾ
ಮೀಸಲಾತಿಯಿಂದ ಸ್ವಲ್ಪ ಮೇಲೆ ಬಂದಿರುವ ಶೂದ್ರಾತಿ ಶೂದ್ರರು ಮತ್ತೆ ಪುರೋಹಿತ ಶಾಹಿಗಳ ತೆಕ್ಕೆಗೆ ಜಾರುತ್ತಿರುವುದು ಮರ್ಯಾದಾ ಹೀನ ಹತ್ಯೆ, ಮಡೆ ಸ್ನಾನಗಳಿಂದ ತಿಳಿದು ಬರುತ್ತಿದೆ. ಅದೇನೆ ಇರಲಿ ಇಂದು ನಾನಿಲ್ಲಿ ಹೇಳಲು ಹೊರಟಿರುವ ಕೊರೆಗಾಂವ್ ಯುದ್ಧದ ಪೂರ್ತಿ ಸತ್ಯವನ್ನು ನಮ್ಮ ಇತಿಹಾಸದ ಪಠ್ಯಗಳು ಎಲ್ಲೂ ಹೇಳಲಾರವು, ಕಾರಣ ಇದು ಭಾರತದ ಮನುವಾದಿಗಳ ನಿಜ ಬಣ್ಣವನ್ನು ತಿಳಿಸುತ್ತದೆ. ತಲೆತಲಾಂತರದಿಂದ ಅಕ್ಷರವನ್ನು ಸಂಸ್ಕೃತ ಭಾಷೆಯಲ್ಲಿ ತಮಗೆ ಮಾತ್ರ ತಿಳಿಯುವಂತೆ ರಚಿಸಿಕೊಂಡು ಇತರರಿಗೆ ವೇದವನ್ನು ಓದಬಾರದು, ಕೇಳಬಾರದು, ಮನನ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿ ಅದನ್ನು ಮೀರಿದರೆ ಕೊಲ್ಲುತ್ತ ಸಾಗಿದ್ದ ಬ್ರಾಹ್ಮಣಶಾಹಿಗಳು ನಮ್ಮ ದೇಶದ ಇತಿಹಾಸವನ್ನು ಸಹ ಅವರಿಗೆ ಬೇಕಾದಂತೆ ಬರೆದುಕೊಂಡಿವೆ. ಇಂತಹವರಿಗೆ ರೇಖಾಗಣಿತ ಬೆಳೆದಿರುವುದೆ ಯಾಗ ಯಜ್ಞಗಳಿಂದ! (8ನೆ ತರಗತಿಯ ಪುಸ್ತಕದಲ್ಲಿದೆ) ಹೀಗೆ ಇತಿಹಾಸದಲ್ಲಿ ಹೂತುಹೋಗಿದ್ದ ಸ್ವಾಭಿಮಾನವನ್ನು ಸಾರುವ, ದಲಿತರ ಶೌರ್ಯವನ್ನು ತಿಳಿಸುವ, ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆಯ ಕರಾಳ ಮುಖವನ್ನು ಪರಿಚಯಿಸುವ, ಮನು ವಾದವನ್ನು ಇತರರ ಮೇಲೆ ಹೇರಿ, ಕ್ರೌರ್ಯ ಮೆರೆದಿದ್ದ ಬ್ರಾಹ್ಮಣಶಾಹಿಗಳ ಸೊಂಟ ಮುರಿದಿದ್ದ ಯುದ್ದವೇ ಕೊರೇಗಾವ್ ಯುದ್ದ.
ಮಹಾರ್ ರೆಜಿಮೆಂಟ್
ಶಿವಾಜಿ ಸೈನ್ಯದಲ್ಲಿ ಮಹಾರ, ಮಾಂಗ ಮತ್ತು ರಾಮೋಶಿ ಅಸ್ಪಶ್ಯ ಜನಾಂಗಗಳಿಗೆ ಸ್ಥಾನ ಕೊಡಲಾಗಿತ್ತು. ಕೇವಲ ಕಾಲ್ದಳದಲ್ಲಲ್ಲದೆ ಕುದುರೆ ದಳಗಳಲ್ಲೂ ಇವರ ಪಾಲಿತ್ತು. ಆದರೆ ಶಿವಾಜಿಯ ನಂತರ ಇವರನ್ನು ಪೇಶ್ವೆಗಳು ಹೀನಾಯವಾಗಿ ನೋಡಿಕೊಂಡು ಸೇನೆಯಿಂದ ಹೊರಗಟ್ಟಿದ್ದರು. ಮುಂದೆ ಇವರು ಸೈನ್ಯ ಸೇರಿದ್ದು ಬ್ರಿಟಿಷರ ಪರವಾಗಿ. ಈ ಮಹಾರ ರೆಜಿಮೆಂಟ್ ಈಗಲೂ ಸಹ ನಮ್ಮ ಸೈನ್ಯದಲ್ಲಿ ತನ್ನ ಕೊಡುಗೆಯನ್ನು ನೀಡುತ್ತಿದೆ. ಒಟ್ಟು 19 ಬೆಟಾಲಿಯನ್‌ಗಳಿವೆ, ಇವರ ಮೊಟೊ ‘‘ಯಶ ಸಿದ್ದಿ’’, ಯುದ್ಧ ಘೋಷಣೆ ‘‘ಬೋಲೋ ಹಿಂದೂಸ್ಥಾನ್ ಕಿ ಜೈ’’. ಪರಮ್ ವೀರ ಚಕ್ರ, ಮಹಾ ವೀರ್ ಚಕ್ರ, ವೀರ ಚಕ್ರ ಮುಂತಾದ ಗೌರವಗಳನ್ನು ಈ ರೆಜಿಮೆಂಟ್ ತನ್ನ ಮಡಿಲಿಗೆ ಹಾಕಿಕೊಂಡಿದೆ. 111 ಮಹಾರ ರೆಜಿಮೆಂಟ್ 1914ರ ಮೊದಲ ಪ್ರಪಂಚ ಯುದ್ಧದಲ್ಲೂ ಸಹ ಭಾಗಿಯಾಗಿದೆ. 1981ರಲ್ಲಿ ನಮ್ಮ ಭಾರತ ಸರಕಾರ ಮಹಾರ್ ರೆಜಿಮೆಂಟಿನ ಹೆಸರಿನಲ್ಲಿ 35 ಪೈಸೆಯ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದೆ. ಬ್ರಿಟಿಷ್ ಸರಕಾರ ಮುಂದೊಂದು ದಿನ ಈ ನೆಲದ ಅನಿಷ್ಟವಾದ ಜಾತಿವಾದಕ್ಕೆ ಬಲಿಯಾಗಿ ಈ ರೆಜಿಮೆಂಟನ್ನು ತೆರವುಗೊಳಿಸಿತಾದರೂ ಬಾಬಾಸಾಹೇಬ್ ಅಂಬೇಡ್ಕರರ ಶ್ರಮದಿಂದ ಮತ್ತೆ ಸೈನ್ಯಕ್ಕೆ ಮರಳಿತು. ಒಟ್ಟಿನಲ್ಲಿ ಮಹಾರ್ ರೆಜಿಮೆಂಟ್ ದಿಟ್ಟ ದಲಿತರ ರೆಜಿಮೆಂಟ್.
ಪೇಶ್ವೆಗಳ ಕ್ರೌರ್ಯ
ಪೇಶ್ವೆಗಳು 1680ರ ನಂತರ ಅಂದರೆ ಶಿವಾಜಿಯ ನಂತರ ಬಂದ ಬ್ರಾಹ್ಮಣ ರಾಜರುಗಳು. ಇವರ ಕಾಲದಲ್ಲಿ ಅಲ್ಲಿನ ದಲಿತರು ಪಡಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದಾರೆ. ಮನುವಾದವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಮತ್ತು ಪಾಲಿಸುವಂತೆ ಜನತೆಯ ಮೇಲೆ ಹೇರುತ್ತಿದ್ದ ಇವರು ದಲಿತರು ಊರ ಒಳಗೆ ಮಧ್ಯಾಹ್ನ 12 ಗಂಟೆಗೆ ಬರಬೇಕೆಂದು ಕಾನೂನು ಹೊರಡಿಸಿದ್ದರು. ಏಕೆಂದರೆ ದಲಿತರ ನೆರಳು ಇತರರನ್ನು ಮೈಲಿಗೆ ಮಾಡುತ್ತದೆ ಎಂಬ ನೀಚ ಪದ್ಧತಿ. ಇಷ್ಟೇ ಅಲ್ಲದೆ ಊರೊಳಗೆ ಬರುವಾಗ ಕುಂಡೆಗೆ ಪೊರಕೆಯನ್ನು, ಕತ್ತಿಗೆ ಮಡಿಕೆಯನ್ನು ಕಟ್ಟಿಕೊಂಡು ಬರಬೇಕಿತ್ತು. ಪೊರಕೆ ಅಸ್ಪಶ್ಯರ ಹೆಜ್ಜೆಗಳನ್ನು ಅಳಿಸಿಕೊಂಡು ಬರಲು ಮತ್ತು ಎಂಜಲು ಉಗುಳಲು ಮಡಿಕೆ. ದಲಿತರ ಎಂಜಲು ಮತ್ತು ಹೆಜ್ಜೆ ಗುರುತುಗಳು ಸಹ ಮೈಲಿಗೆ ತರುತ್ತವೆ ಎಂಬ ನೀಚ ಶಾಸ್ತ್ರ, ಸಂಪ್ರದಾಯ. ದಲಿತರು ಕೇವಲ ನಾಯಿ, ಕತ್ತೆಗಳನ್ನು ಮಾತ್ರ ಸಾಕಬೇಕಿತ್ತು. ಆಸ್ತಿ ಹೊಂದುವ, ಸ್ವತಂತ್ರವಿರುವ, ಊರೊಳಗೆ ವಾಸಿಸುವ ಹಕ್ಕುಗಳೇ ಇರಲಿಲ್ಲ. ಮಡಕೆ ಚೂರುಗಳನ್ನೆ ಬಳಸಬೇಕಿತ್ತು. ದಲಿತರು ಮುಂಗೈ ಅಥವಾ ಕೊರಳಿಗೆ ಕಪ್ಪುದಾರ ಕಟ್ಟಿಕೊಳ್ಳಬೇಕಿತ್ತು (ಇದು ಇಂದಿಗೂ ಜೀವಂತವಿದೆ). ದಲಿತರೆಂದರೆ ಪ್ರಾಣಿಗಳಿಗೆೆ ಸಮಾನ. ಅವರ ನೆನಪಾಗುತ್ತಿದ್ದುದೇ ಯಾವುದಾದರೂ ಪ್ರಾಣಿ ಸತ್ತಾಗ ಇಲ್ಲವೆ ಹೊಲಸು ತುಂಬಿ ನಾರುತ್ತಿರುವಾಗ. ಒಟ್ಟಿನಲ್ಲಿ ಪೇಶ್ವೆಗಳ ಕಾಲದಲ್ಲಿ ದಲಿತರು ಪ್ರತಿಫಲ ಬಯಸದ ಗುಲಾಮರಾಗಿದ್ದರು.
ಕೊರೆಗಾಂವ್ ಯುದ್ಧ
ಈ ಯುದ್ಧವನ್ನು ಸಮಾಧಿಯಾಗಿಸಲಾಗಿದ್ದ ಇತಿಹಾಸದ ಪುಟಗಳಿಂದ ಹೆಕ್ಕಿ ಹೊರತೆಗೆದ ವರು ಬಾಬಾಸಾಹೇಬ್ ಅಂಬೇಡ್ಕರ್‌ರವರು. ಅವರು 1927ರ ಜನವರಿ 1ರಂದು ಕೊರೆಗಾಂವ್‌ನಲ್ಲೊಂದು ಸಮಾವೇಶ ಮಾಡಿಸಿ ದಲಿತರ ಸ್ವಾಭಿಮಾನ ಸೂಚಿಸುವ, ಅವರ ಕೆಚ್ಚೆದೆಯನ್ನು ತಿಳಿಸುವ ಯುದ್ಧವನ್ನು ನಮಗೆಲ್ಲ ಪರಿಚಯಿಸದೇ ಇದ್ದಿದ್ದರೆ ಇಂದು ನಮಗೆ ಇತಿಹಾಸದಲ್ಲಿನ ಒಂದು ದಿಗ್ವಿಜಯವನ್ನೇ ಮರೆತಂತಾಗುತ್ತಿತ್ತು.
ಮಹಾರಾಷ್ಟ್ರದ ವಡಗಾವ್‌ನಲ್ಲಿ ಬ್ರಿಟಿಶರು ಪೇಶ್ವೆಗಳಿಂದ ಸೋತಿದ್ದರು. ಪೇಶ್ವೆಗಳ 25,000 ಸೈನಿಕರ ವಿವಿಧ ದಳಗಳ ಮುಂದೆ ಬ್ರಿಟಿಶರ ಅಲ್ಪ ದಳ ಮಂಡಿಯೂರಲೇಬೇಕಾಗಿತ್ತು. ಆದ್ದರಿಂದ ಬ್ರಿಟಿಶರಿಗೆ ಅಲ್ಲೊಂದು ಗೆಲುವು ಬೇಕಿತ್ತು. ಆ ಗೆಲುವು ತಂದುಕೊಟ್ಟದ್ದೆ 1818, ಜನವರಿ 1ರ ಕೊರೆಂಗಾವ್ ಯುದ್ಧ. ಪೇಶ್ವೆಗಳು ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ್ದುದನ್ನು ನೀವಾಗಲೇ ತಿಳಿದಿರುವಿರಿ. ಈ ರೀತಿಯ ಅಮಾನ ವೀಯತೆಯ ವಿರುದ್ಧ ಸಿಡಿದು ನಿಂತ ಮಹಾರ್ ರೆಜಿಮೆಂಟಿನ ಸೈನಿಕರು ಪೇಶ್ವೆ ಗಳ ವಿರುದ್ಧವಾಗಿ ಬ್ರಿಟಿಶರ ಸೈನ್ಯದಲ್ಲಿ ಸೇರಿಕೊಂಡರು. ಇದಕ್ಕೆ ಪ್ರಬಲ ಕಾರಣ ಪೇಶ್ವೆಗಳ ಅಮಾನವೀಯತೆಯ ಜೊತೆಗೆ, ಅವರು ದಲಿತರನ್ನು ಅಸ್ಪಶ್ಯರಂತೆ ಕಂಡು ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳದಿದ್ದುದ್ದು. ಹೀಗೆ ದಲಿತ ಸೈನಿಕರು ಬ್ರಿಟಿಶರ ಸೈನ್ಯದಲ್ಲಿ ಸೇರಿಕೊಂಡರೂ ಸಹ ಪೇಶ್ವೆಗಳಿಗೆ ಚಿಂತೆಯಿರಲಿಲ್ಲ. ಏಕೆಂದರೆ ದಲಿತರ ಶೌರ್ಯ ಅವರಿಗೆ ತಿಳಿದಿರಲಿಲ್ಲ. ಅದಾಗಲೇ ಬ್ರಿಟಿಶ್ ಸೈನ್ಯ ಹಲವು ಪ್ರಾಂತಗಳಲ್ಲಿ ಭಾರತೀಯರನ್ನು ಒಳಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕೊರೆಗಾಂವ್ ಯುದ್ಧವು ಪುಣೆಯ ಬಳಿಯ ಭೀಮಾ ತೀರದಲ್ಲಿ ನಡೆಯಿತು. ಇದನ್ನು ಎರಡನೇ ಆಂಗ್ಲೊ-ಮರಾಠ ಯುದ್ಧ ಎನ್ನುತ್ತಾರೆ. ಬ್ರಿಟಿಶರ ಪರ ನಾಯಕ ಕ್ಯಾಪ್ಟನ್ ಸ್ಟಂಡನ್. ಮರಾಠರ ಪರ ರಾಜ ಬಾಜಿರಾವ್. ಬ್ರಿಟಿಶರ ಪರ ಸಿಧನಾಕನ ಮುಂದಾಳತ್ವದಲ್ಲಿ ಮಹಾರ್ ರೆಜಿಮೆಂಟಿನ 500 ಸೈನಿಕರು ಮತ್ತು 250 ಕುದುರೆ ದಳದ ಸೈನಿಕರು, 24 ಬಂದೂಕು ಉಳ್ಳ ಸೈನಿಕರಿರುತ್ತಾರೆ. ಆದರೆ ಇದರ ವಿರುದ್ಧ ಬಾಜಿರಾವನ ಸೈನ್ಯದಲ್ಲಿ ಬರೋಬ್ಬರಿ 20,000 ಕುದುರೆ ದಳದ ಸೈನಿಕರು, 8,000 ಕಾಲ್ದಳದ ಸೈನಿಕರು ಇರುತ್ತಾರೆ. ಮುಖಾಮುಖಿಯಾದ ಎರಡು ಬಣದ ಸೈನಿಕರು ಕಾದಾಡುತ್ತಾರೆ. ಮಹಾರ್ ರೆಜಿಮೆಂಟಿನ ಸೈನಿಕರು ಶಿರೂರಿನಿಂದ ಕೊರೆಗಾಂವ್‌ವರೆಗೆ 27 ಮೈಲುಗಳನ್ನು ನಡೆದು, ಅನ್ನ, ನೀರು, ವಿಶ್ರಾಂತಿಯಿಲ್ಲದೆ 12 ಗಂಟೆಗಳ ಕಾಲ ಯುದ್ಧ ಮಾಡುತ್ತಾರೆ. ಕೊನೆಗೆ ಮಹಾರ್ ರೆಜಿಮೆಂಟಿನ ಧಾಳಿ ತಾಳಲಾರದೆ ಬೃಹತ್ ಸೈನ್ಯ ಹೊಂದಿದ್ದ ಬಾಜಿರಾವ್ ಪೇಶ್ವೆ ಸೇನೆ ಶರಣಾಗುತ್ತದೆ. ಮಹಾರ್ ರೆಜಿಮೆಂಟಿನ ಸೈನಿಕರು ದಿಗ್ವಿಜಯವನ್ನು ಸಾಧಿಸುತ್ತಾರೆ. ಆದರೆ ಮಹಾರ್ ರೆಜಿಮೆಂಟಿನ 22 ಸೈನಿಕರು ವೀರ ಮರಣವನ್ನಪ್ಪಿರುತ್ತಾರೆ. ಇಡೀ ಪ್ರಪಂಚದಲ್ಲೆ ಇದಕ್ಕೆ ಸರಿ ಸಮನಾದ ಮತ್ತೊಂದು ಯುದ್ಧವಿಲ್ಲ ಎಂದು ಆಂಗ್ಲ ಇತಿಹಾಸಕಾರನೊಬ್ಬ ಹೇಳುತ್ತಾನೆ. (774 ಜನ ಸೈನಿಕರು 28 ಸಾವಿರ ಸೈನಿಕರನ್ನು ಮಣಿಸುವುದು ಸಾಮಾನ್ಯದ ಮಾತೆ?)
ಈ ಯುದ್ಧದ ಗೆಲುವು ಇತಿಹಾಸದಲ್ಲಿ ಬ್ರಾಹ್ಮಣಶಾಹಿಗಳು ದಲಿತರನ್ನು ನಡೆಸಿಕೊಂಡ ಪರಿಗೆ ಸರಿಯಾದ ಉತ್ತರವಾಗಿರುತ್ತದೆ. ಅದಲ್ಲದೆ ಭಾರತೀಯರನ್ನು ಹಾಳು ಮಾಡಿರುವುದು ನಮ್ಮ ದೇಶದ ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಶೋಷಣೆಯನ್ನು ಪೋಷಿಸುತ್ತಿರುವ ಮೂಲಗಳಾಗಿವೆ ಎಂಬುದನ್ನು ದೃಢಪಡಿಸುತ್ತದೆ. ಭಾರತೀಯ ಜನಾಂಗವನ್ನು ಒಡೆದು ಆಳಿದ ಮನುಸ್ಮತಿಯನ್ನು ಅಪ್ಪಿಕೊಂಡಿರುವ ಮನಸುಗಳಿಗೆ ತಕ್ಕ ಪಾಠವನ್ನು ಕಲಿಸುತ್ತದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾದಂತೆ ಅವರ ಸಹನೆಯ ಕಟ್ಟೆಯೊಡೆದು ನಿಂತರೆ ಅವರನ್ನು ತಡೆಯುವುದು ಬಲು ಕಷ್ಟವೆಂಬ ಸತ್ಯಸಂಗತಿಯನ್ನು ಈ ಕೊರೆಗಾಂವ್ ಯುದ್ಧದಲ್ಲಿ ಕೇವಲ 500 ದಲಿತರು 28,000 ಬ್ರಾಹ್ಮಣ ರಾಜನ ಸೈನ್ಯವನ್ನು ನುಚ್ಚು ನೂರು ಮಾಡಿದ್ದು ಸ್ಪಷ್ಟಪಡಿಸುತ್ತದೆ. ಈಗ ಭಾರತೀಯರ ಕರ್ತವ್ಯ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಿ ಇತಿಹಾಸವನ್ನು ಮರುಕಳಿಸದಂತೆ ಮಾಡುವುದಾಗಿದೆ.
ಕೊರೆಗಾಂವ್ ಸ್ತಂಭ
ಕೊರೆಗಾವ್ ಯುದ್ಧದ ನೆನಪಿಗೆ ಬ್ರಿಟಿಶ್ ಸರಕಾರ ಕೊರೆಗಾಂವ್ ಬಳಿ ಒಂದು ಬೃಹತ್ ಸ್ತಂಭವನ್ನು 1821ರಲ್ಲಿ ನಿರ್ಮಿಸಿದೆ. ಅದನ್ನು ಇಂದು ರಣ ಸ್ತಂಭ, ವಿಜಯ ಸ್ತಂಭ, ಭೀಮ ಕೊರೆಗಾಂವ್ ಸ್ತಂಭ ಎಂದೆಲ್ಲ ಕರೆಯಲಾಗುತ್ತದೆ. ಅದರ ಮೇಲೆ ಯುದ್ಧದಲ್ಲಿ ಮಡಿದ 22 ಮಹಾರ್ ರೆಜಿಮೆಂಟಿನ ದಲಿತ ವೀರರ ಹೆಸರನ್ನು ಕೆತ್ತಿಸಲಾಗಿದೆ. ಬ್ರಿಟಿಶರ ಸರಕಾರಿ ಕಡತಗಳಲ್ಲಿ ಕೊರೆಗಾಂವ್ ಯುದ್ಧದಲ್ಲಿನ ಮಹಾರ್ ರೆಜಿಮೆಂಟಿನ ಸೈನಿಕರ ಶೌರ್ಯ, ಬದ್ಧತೆ ಬಗ್ಗೆ ಕೊಂಡಾಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಅದರ ಛಾಯೆಗಳನ್ನೇ ಮರೆಮಾಚುವ ಕಾರ್ಯವಾಗಿದೆ. ಇತಿಹಾಸದಲ್ಲಿ ಅದನ್ನು ಸಮಾಧಿಯಾಗಿಸಲಾಗಿತ್ತು. ಅದರ ಕಾರಣವನ್ನು ತಿಳಿಯುವುದು ಬಹಳ ಕಷ್ಟವೇನಲ್ಲ. ಆದರೂ ಈ ಕೊರೆಗಾಂವ್ ಯುದ್ಧವನ್ನು ಕೇವಲ ಆಂಗ್ಲೊ-ಮರಾಠ ಯುದ್ಧವೆಂದು ಪರಿಗಣಿಸುವುದರಲ್ಲಿ ಸತ್ಯವಿಲ್ಲ. ಇದನ್ನು ಭಾರತದ ಅಸ್ಪಶ್ಯರು ಮತ್ತು ಭಾರತದ ಬ್ರಾಹ್ಮಣಶಾಹಿಗಳ ನಡುವಿನ ಯುದ್ಧವೆಂದರೆ ಸತ್ಯಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತದೆ. ಅದಲ್ಲದೆ ದಲಿತರ ಇಂದಿನ ಹೋರಾಟಕ್ಕೆ ಒಂದು ಒಳ್ಳೆ ಇತಿಹಾಸ ಸಿಕ್ಕದಂತಾಗುತ್ತದೆ.
ಹೊಸ ವರ್ಷವೋ? ದಲಿತರ ಶೌರ್ಯ ದಿನವೋ?
1927ರಿಂದ ತಮ್ಮ ಕೊನೆಯ ವರ್ಷಗಳವರೆಗೆ ಸ್ಫೂರ್ತಿ ಪಡೆದು ಕೊಳ್ಳಲು ಬಾಬಾಸಾಹೇಬ ಅಂಬೇಡ್ಕರ್‌ರವರು ಪ್ರತಿ ವರ್ಷ ಜನವರಿ 1 ನೆ ದಿನದಂದು ಕೊರೆಗಾಂವ್‌ಗೆ ಭೇಟಿ ನೀಡುತ್ತಿದ್ದರು. ಏಕೆಂದರೆ ಅದು ದಲಿತರ ವೀರಗಾಥೆಯನ್ನು ತಿಳಿಸುವ, ಸ್ವಾಭಿಮಾನವನ್ನು ತಿಳಿಸುವ ಸ್ತಂಭವಾಗಿತ್ತು. ಇಂದಿಗೂ ಸಹ ಬೇರೆ ಬೇರೆ ಕಡೆಯಿಂದ ದಲಿತರು ಕೊರೆಗಾಂವ್ ಸ್ತಂಭವನ್ನು ನೋಡಲು ಬರುತ್ತಾರೆ. ಸ್ವಾಭಿಮಾನವನ್ನು ಇಮ್ಮಡಿಗೊಳಿಸಿಕೊಂಡು ಹೋಗುತ್ತಾರೆ. ಇಂದಿನ ದಲಿತರು ಹೊಸ ವರ್ಷದ ಗುಂಗಿನಲ್ಲಿ ಕುಡಿದು ತೂರಾಡುತ್ತ ಮಜಾ ಮಾಡುವ ಬದಲು ಹೊಸ ವರ್ಷದಂದು ಸಂಸಾರ ಸಮೇತ ಕೊರೆಗಾಂವ್‌ಗೆ ಭೇಟಿ ನೀಡಿ ತಂತಮ್ಮ ಕರ್ತವ್ಯವನ್ನು ನೆನಪು ಮಾಡಿಕೊಳ್ಳಬಹುದಾಗಿದೆ. ಸ್ವಾಭಿಮಾನಕ್ಕೆ ಹೋರಾಡಿದ ಆ 500 ದಲಿತರ ಮತ್ತು ವೀರ ಮರಣವನ್ನಪ್ಪಿದ 22 ದಲಿತರ ಹೆಸರನ್ನು ಹೃದಯದಲ್ಲಿರಿಸಿಕೊಂಡು ಬರಬಹುದಾಗಿದೆ. ಭಾರತದ ದಲಿತ ಲೋಕ ಹೊಸ ವರ್ಷವನ್ನು ಕೊರೆಗಾಂವ್ ದಿಗ್ವಿಜಯದ ನೆನಪಿನಲ್ಲಿ ದಲಿತರ ಶೌರ್ಯದ ದಿನವಾಗಿ ಆಚರಿಸಬಹುದಾಗಿದೆ. ಪರ್ಯಾಯ ಸಂಸ್ಕೃತಿಗೆ ತಡಕಾಡುತ್ತಿರುವವರೆಲ್ಲರೂ ಜನವರಿ 1ರಂದು ತಮ್ಮ ತಮ್ಮ ಮನೆಗಳಲ್ಲಿ ವೀರರ ಹಬ್ಬವೆಂದು ಆಚರಿಸಬಹುದಲ್ಲವೆ? ಆಚರಿಸಿ ಬಿಡಿ. ನಮ್ಮ ಮಕ್ಕಳೂ ವೀರರಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ನರಸಪ್ಪ ಜೂಕೂರು,ಮಲೇಶ ಸೀಕಲ್, ಹನುಮಂತ ಸೀಕಲ್, ಗುರುರಾಜ ನಾಗಲಾಪುರ,ಶಿವರಾಜ ಉಮಳಿಹೊಸುರು,ಅಮರೇಶ ನಂದಿಹಾಳ್, ಅಮರೇಶ ಬಾದರದಿನ್ನಿ,ಗಂಗಾಧರ ಹಿಂದಿನಮನಿ,ಆರ್.ಚನ್ನಬಸವ ಬಾಗಲವಾಡ,ಕಾಮೇಶ ಮಾನವಿ, ರಮೇಶ ಜಂಬಲದಿನ್ನಿ,ಕಾಶಿನಾಥ ಕುರಡಿ, ಈರಣ್ಣ ನಂದಿಹಾಳ್, ಬಸವರಾಜ ಮಂದಕಲ್, ನರಸಿಂಹ ಸೀಕಲ್,ಶ್ರೀನಿವಾಸ ನಂದಿಹಾಳ್, ಭೀಮಣ್ಣ ಕೆ.ಗುಡದಿನ್ನಿ ಸೇರಿದಂತೆ ಹಲವಾರು ಪಧಾದಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here