“ಪಂಕ್ಚರ್ ಹಾಕಿ ಬದುಕುವ ನಾವುಗಳು ಕೇಂದ್ರ ಸರಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಬೇಕಾಗಿದೆ”; ಪ್ರಗತಿಪರ ಹೋರಾಟಗಾರ ಶಿವಸುಂದರ್

0
371

ರಾಯಚೂರು.ಡಿ.೨೦- ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ನೇತೃತ್ವದಲ್ಲಿ 66 ವಿವಿಧ ಸಂಘಟನೆಗಳು ಜನಾಧಿವೇಶನ ಸಮಾವೇಶ ನಡೆಸಿದವು.

ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿದ್ದ ಈ ಸಮಾವೇಶದಲ್ಲಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಸಾಮಾಜಿಕ ಹೋರಾಟಗಾರರಾದ ಶಿವಸುಂದರ್, ಪ್ರೊ| ಹಮೀದ್ ಮೊಹಮ್ಮದ್ ಖಾನ್, ರಾಘವೇಂದ್ರ ಕುಷ್ಟಗಿ, ನಿವೃತ್ತ ಐಪಿಎಸ್ ಅದಿಕಾರಿ ನಿಸಾರ್ ಅಹ್ಮದ್ ಮೊದಲಾದ ಚಿಂತಕರು, ಹೋರಾಟಗಾರರು, ಮಾಜಿ ಅಧಿಕಾರಿಗಳು ಪಾಲ್ಗೊಂಡಿದ್ದರು.

“ಪಂಕ್ಚರ್ ಹಾಕಿ ಬದುಕುವ ನಾವುಗಳು ಸರಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಬೇಕಾಗಿದೆ”

ಪ್ರಗತಿಪರ ಹೋರಾಟಗಾರ ಶಿವಸುಂದರ್ ಅವರು ಈ ಸಮಾವೇಶದಲ್ಲಿ ಮಾತನಾಡಿ, ಸರ್ಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಲು ಇಲ್ಲಿ ಎಲ್ಲರೂ ಸೇರಿದ್ಧಾರೆಂದು ಹೇಳಿ ಸಂಸದ ತೇಜಸ್ವಿ ಸೂರ್ಯರಿಗೆ ಪರೋಕ್ಷ ತಿರುಗೇಟು ನೀಡಿದರು

ಸಂವಿಧಾನ ವಿರೋಧಿಯಾಗಿ ಜಾರಿಗೊಳಿಸಿರುವ ಪೌರತ್ವ ತಿದ್ದುಪಡೆ ಕಾಯ್ದೆಯಿಂದ ಅಲ್ಪಸಂಖ್ಯಾತ ಸಮುದಾಯದ ಎದೆಗೆ ನೇರವಾಗಿ ಚೂರಿ ಹಾಕಿದರೆ ಹಿಂದೂ ಸಮುದಾಯಕ್ಕೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ವಿಚಾರವಾದಿ ಶಿವಸುಂದರ ಆರೋಪಿಸಿ ಮಾತನಾಡಿದ ಅವರು, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದು,  ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು ಬೃಹತ್ ಉದ್ಯೋಗಗಳು ಸ್ಥಗಿತಗೊಂಡಿದ್ದು, ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ.

ದೇಶದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಸುಳ್ಳನ್ನು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದು ಸಂಘಟನಾತ್ಮಕ ಹೋರಾಟದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ಎನ್‌ಆರ್‌ಸಿ ಮತ್ತು ಸಿಎಎಯನ್ನು ಜಾರಿಗೊಳಿಸಲು ಬಿಡಬಾರದು. ಧಾರ್ಮಿಕ ಆಧಾರವಾಗಿ ಜಾರಿಗೆ ತಂದಿರುವ ಈ ಕಾಯ್ದೆಗಳು ಸಂವಿಧಾನಕ್ಕೆ ವಿರೋಧಿಯಾಗಿದ್ದು, ಇಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಕೇಂದ್ರೀಕೃತಗೊಳಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿಪೆಟ್ಟು ಕೊಡುತ್ತಿದ್ದು, ಇದನ್ನು ಧಿಕ್ಕರಿಸುವ ಕಾರ್ಯ ದೇಶದ ಜನತೆಯಿಂದಾಗಬೇಕು, ಅವರನ್ನು ವ್ಯವಸ್ಥಿತವಾಗಿ ಮನೆಗೆ ಕಳುಹಿಸಲು ಸಂಘಟಿತರಾಗಬೇಕು.

“ನಮ್ಮ ಎದೆಯಲ್ಲಿ ನಾಲ್ಕಕ್ಷರ ಇಲ್ಲವಾದರೂ ದೇಶದಲ್ಲಿರುವ ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿದ್ದೇವೆ. ಪಂಕ್ಚರ್ ಹಾಕಿ ಬದುಕುವ ನಾವು ಈಗ ದೇಶದ ಸರ್ಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಲು ಸೇರಿದ್ದೇವೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು

ಸಿಎಎ ಮತ್ತು ಎನ್​ಆರ್​ಸಿಯಿಂದ ಬಡವರಷ್ಟೇ ಅಲ್ಲ ಮಹಿಳೆಯರಿಗೂ ಸಮಸ್ಯೆಯಾಗುತ್ತದೆ. ಇದು ಮುಸ್ಲಿಮ್ ಮಹಿಳೆಯರು ಮಾತ್ರವಲ್ಲ ಹಿಂದೂ ಮಹಿಳೆಯರೂ ಕೂಡ ತೊಂದರೆ ಅನುಭವಿಸಬೇಕಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ 60 ವರ್ಷದ ವೃದ್ಧೆಯೊಬ್ಬರನ್ನು ಪೌರತ್ವ ದಾಖಲೆಗಳನ್ನು ನೀಡಿಲ್ಲವೆಂದು ಜೈಲಿಗೆ ಕಳುಹಿಸಲಾಗಿದೆ. ಆದರೆ, ಅವರ ಮಗನಿಗೆ ಪೌರತ್ವ ನೀಡಲಾಗಿದೆ. ನಮ್ಮ ಸಮಾಜದಲ್ಲಿ ಮಹಿಳೆಗೆ ತಾನು ಹುಟ್ಟಿದ ಮನೆಯಲ್ಲಿ ಒಂದು ಹೆಸರಿದ್ದರೆ, ಗಂಡನ ಮನೆಯಲ್ಲಿ ಬೇರೆ ಹೆಸರಿಡುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ತೊಂದರೆಯೇ ಜಾಸ್ತಿ. ಶ್ರೀರಾಮನ ಈ ನಾಡಿನಲ್ಲಿ ಸೀತೆಯನ್ನೇ ಕಾಡಿಗಟ್ಟಲಾಗಿತ್ತು. ಹಾಗಾಗಿ ಮಹಿಳೆಯರು ಈ ಕಾಯ್ದೆಯಿಂದ ಸಮಸ್ಯೆಯ ಸುಳಿಗೆ ಸಿಲುಕುತ್ತಾರೆ” ಎಂದವರು ವಿವರಿಸಿದರು.

“ಆರೆಸ್ಸೆಸ್ ನಿಂದ ದೇಶ ರಕ್ಷಣೆಯಾಗಬೇಕು”

ದೇಶದ ನಿವಾಸಿಗಳಿಗೆ ಸಂಪ್ರದಾಯವಾದಿ, ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಸ್ವಾತಂತ್ರ್ಯ ಬೇಕಿದೆ. ಹೋರಾಟ ಇದೇ ರೀತಿ ಮುಂದುವರಿದರೆ ಆ ದಿನಗಳು ಬರುವುದು ದೂರವಿಲ್ಲ. ಆರೆಸ್ಸೆಸ್, ಬಿಜೆಪಿಯ ಕಪಿಮುಷ್ಠಿಯಿಂದ ದೇಶವನ್ನು ಕಾಪಾಡಬೇಕು ಎಂದು ಹಮೀದ್ ಮೊಹಮ್ಮದ್ ಖಾನ್ ಕರೆ ನೀಡಿದರು.

ದೇಶದಲ್ಲಿಆಡಳಿತ ನಡೆಸುವವರು ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುವಂತಿಲ್ಲ. ಸಂವಿಧಾನ ವಿರೋಧಿಗಳಿಗೆ ಅಧಿಕಾರದಲ್ಲಿರಲು ಅವಕಾಶ ನೀಡಬಾರದು. ಈ ಹೋರಾಟವು ದೇಶದ ಅಧಿಕಾರಶಾಹಿ ಹಾಗೂ ಜನಬೆಂಬಲಿತ ಹೋರಾಟಗಾರರ ಮಧ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಗೂಂಡಾ ರಾಜಕೀಯ ಮಾಡುತ್ತಿದೆ. ಈ ಗೂಂಡಾ ರಾಜಕೀಯಕ್ಕೆ ಧಿಕ್ಕಾರ ಇರಲಿ ಎಂದು ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಮತ್ತು ಅಮಿತ್ ಶಾ ಅವರೇ ನೀವು 15 ಲಕ್ಷ ಜನರಿಗೆ ಪೌರತ್ವ ನೀಡಿದರೆ ನಿಮಗೆ ವೋಟು ನೀಡುತ್ತಾರೆ. ಆದರೆ ದೇಶದ ಜನರಿಗೆ ಪೀಪಲ್ಸ್ ಪೊಲಿಟಿಕ್ಸ್ ಗೊತ್ತಿದೆ. 2019ರಲ್ಲಿ ಪೀಪಲ್ಸ್ ಪೊಲಿಟಿಕ್ಸ್ ಮತ್ತು ಪವರ್ ಪೊಲಿಟಿಕ್ಸ್ ಮಧ್ಯೆ ಹೋರಾಟ ನಡೆಯಲಿದೆ ಎಂದ ಹಮೀದ್ ಮಹಮ್ಮದ್ ಖಾನ್, ನೀವು ಎಷ್ಟು ಸುಳ್ಳು ಹೇಳುತ್ತೀರಿ, ನಿಮ್ಮ ಜನನ ಪತ್ರ ಬೇಡ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಇದ್ದರೆ ತೋರಿಸಿ ಎಂದು ಮೋದಿ ಮತ್ತು ಅಮಿತ್ ಶಾ ಅವರಿಗೆ ಸವಾಲು ಹಾಕಿದರು.

ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಗೊತ್ತುವಳಿ ಮಂಡಣೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರಕಾರ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಸಂವಿಧಾನದ ಮೂಲ ಅಡಿಪಾಯಕ್ಕೆ ಕೊಡಲಿಪೆಟ್ಟು ಕೊಟ್ಟಿದ್ದು, ಮುಸ್ಲಿಂ ವಿರೋಧಿ ದ್ವೇಷದ ಕಾನೂನನ್ನು ಜಾರಿಗೆ ತಂದಿದ್ದು, ೨೦೧೪ಕ್ಕಿಂತ ಮುಂಚೆ ದೇಶದಲ್ಲಿ ವಾಸವಾಗಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್, ಪಾರ್ಸಿ ಧರ್ಮದವರಿಗೆ ಪೌರತ್ವ ನೀಡಲು ಅವಕಾಶ ಮಾಡಿಕೊಟ್ಟಿದ್ದು, ಆದರೆ ಮುಸ್ಲಿಂರಿಗೆ ಮಾತ್ರ ಪೌರತ್ವ ನೀಡುವುದಿಲ್ಲ ಎಂದು ಈ ಕಾಯ್ದೆ ಹೇಳುತ್ತಿದ್ದು, ಶ್ರೀಲಂಕಾ, ನೇಪಾಳ ನಿರಾಶ್ರಿತರ ಬಗ್ಗೆ ಯಾವುದೇ ಮಾತನಾಡದೇ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಧಾರ್ಮಿಕ ನಿರಾಶ್ರಿತರಿಗೆ ಅದರಲ್ಲೂ ಮುಸ್ಲಿಂರನ್ನು ಹೊರತು ಪಡಿಸಿ ಉಳಿದವರಿಗೆ ಪೌರತ್ವ ದ ಅವಕಾಶ ಎನ್ನುವ ಮೂಲಕ ತಾರತಮ್ಯವೆಸಗಿದೆ.

ದೇಶದಲ್ಲಿ ಕಾಲಕಾಲಕ್ಕೆ ಜನಗಣತಿ ಮಾಡಲಾಗುತ್ತದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇದರ ಬದಲು ಇನ್ನೊಂದು ರೀತಿಯ ಗಣತಿಗೆ ಮುಂದಾಗಿದ್ದು, ಆಸ್ಸಾಂನಲ್ಲಿ ೧೯.೪೨ ಲಕ್ಷ ಅಕ್ರಮ ವಲಸಿಗರೆಂದು ಗುರುತಿಸಿದ್ದು, ಇದರಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನ ಹಿಂದೂಗಳಿದ್ದು, ೫ ಲಕ್ಷಕ್ಕೂ ಹೆಚ್ಚು ಜನ ಮುಸ್ಲಿಂರು ಇದ್ದಾರೆ. ಆಶ್ಚರ್ಯದ ಸಂಗತಿಯAದರೆ ಗಂಡನ ಪೌರತ್ವ ಸಾಬೀತಾದರೆ ಹೆಂಡತಿಯ ಪೌರತ್ವ ಸಾಬೀತಾಗಿಲ್ಲ. ಇದರಿಂದ ಹೊರಬಿದ್ದ ಜನರನ್ನು ನಿರಾಶ್ರಿತರ ತಾಣದಲ್ಲಿ ಇಡಲಾಗಿದ್ದು, ಇದೇ ಎನ್‌ಆರ್‌ಸಿ ನ್ನು ಕೇಂದ್ರ ಸರಕಾರ ದೇಶದಲ್ಲಿ ಜಾರಿಗೆ ತರಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಫ್ಯಾಸಿಸ್ಟ್ ದಾಳಿಯ ಅಸ್ತ್ರಗಳಾದ ಸಿಎಎ, ಎನ್‌ಪಿಆರ್, ಎನ್‌ಆರ್‌ಸಿಯನ್ನು ದೇಶದ ಎಲ್ಲಾ ಜನರು ದಿಕ್ಕರಿಸಿ ಹೋರಾಟದ ರಂಗಕ್ಕಿಳಿದಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್‌ನಿಂದ ಬಂಗಾಳಕೊಲ್ಲಿಯವರೆಗೆ ಪ್ರಜಾಪ್ರಭುತ್ವಕ್ಕಾಗಿ ಸಂವಿಧಾನ ಉಳಿವಿಗಾಗಿ ಜನಸಂಗ್ರಾಮ ಆರಂಭವಾಗಿದ್ದು, ಈ ಜನಾಂದೋಲನವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ನೂರಕ್ಕೂ ಹೆಚ್ಚು ರಾಷ್ಟ್ರಿಯ ಹೋರಾಟಗಾರರನ್ನು ಕೊಲೆಗೈದಿದ್ದು, ರಾಜ್ಯದ ಮಂಗಳೂರು ಸೇರಿದಂತೆ ದೇಶ ವ್ಯಾಪಿ ನಡೆದ ಹೋರಾಟದಲ್ಲಿ ಮೃತಪಟ್ಟವರಿಗೆ ಪರಿಹಾರ ನಿಧಿಯ ಮೂಲಕ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು,.

ಸಂವಿಧಾನ ವಿರೋಧಿಯಾದ ಉತ್ತರಪ್ರದೇಶದ ಯೋಗಿ ಸರಕಾರವನ್ನು ಕೂಡಲೇ ವಜಾ ಮಾಡಬೇಕು, ೪೪ ಕೇಂದ್ರ ಕಾರ್ಮಿಕ ಕಾಯ್ದೆಗಳ ಬದಲಾವಣೆಯನ್ನು ಖಂಡಿಸುತ್ತಿದ್ದು, ಕಾರ್ಮಿಕ ಕಾಯ್ದೆಗಳ ಸ್ಥಳದಲ್ಲಿ ಕಾರ್ಪೋರೇಟರ್ ಕಾರ್ಮಿಕ ಕಾಯ್ದೆಗಳು ಜಾರಿಗೆ ಮುಂದಾಗಿರುವ ಕೇಂದ್ರದ ವಿರುದ್ಧ ಜ.೮ ರಂದು ಬೃಹತ್ ಹೋರಾಟ ನಡೆಸಲಾಗುವುದು ಎಂದರು.

ಎ.ಮಾರೆಪ್ಪ ವಕೀಲರು ಮಾತನಾಡಿ, ಸಂವಿಧಾನ ವಿರೋಧಿಯಾದ ಎನ್‌ಆರ್‌ಸಿ, ಸಿಎಎ ಕಾಯ್ದೆಗಳನ್ನು ದೇಶದ ಜನರು ಧಿಕ್ಕರಿಸುತ್ತಿದ್ದು, ಕೇಂದ್ರದ ಬಿಜೆಪಿ ಸರಕಾರದಲ್ಲಿ ಮುತ್ಸದ್ದಿಗಳ ಕೊರತೆಯಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದೇ ಪೌರತ್ವ ತಿದ್ದುಪಡೆ ಕಾಯ್ದೆ ತಂದಿದ್ದು, ಧರ್ಮದ ಆಧಾರವಾಗಿ ವಿಂಗಡಣೆ ಮಾಡಿರುವುದು ಸಂವಿಧಾನ ವಿರೋಧಿಯಾಗಿದ್ದು, ದೇಶದ ಸಂವಿಧಾನ ಎಲ್ಲೂ ಧರ್ಮದ ಆಧಾರಿತವಾಗಿ ವಿಂಗಡಣೆಯನ್ನು ಒಪ್ಪಿಕೊಂಡಿಲ್ಲ. ಸಾಮಾಜಿಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ನೀಡಿದ್ದಾರೆಯೇ ಹೊರತು ಧಾರ್ಮಿಕವಾಗಿ ಅಲ್ಲ ಮನಗಾಣುವುದು ಅತ್ಯವಶ್ಯಕವಾಗಿದೆ.

ಸಮಾವೇಶ ಆರಂಭಕ್ಕೂ ಮುನ್ನ ಹೋರಾಟದಲ್ಲಿ ಮಡಿದವರ ಸ್ಮರಣಾರ್ಥವಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ರಾಘವೇಂದ್ರ ಕುಷ್ಟಗಿ, ನಿಸಾರ ಅಹ್ಮದ್, ಶಿವಸುಂದರ, ರಜಾಕ್ ಉಸ್ತಾದ್, ಚಾಮರಸ ಮಾಲಿಪಾಟೀಲ್, ಖಾಜಾ ಅಸ್ಲಂ, ಅಭಯ, ಮೊಹಮ್ಮದ್ ಇಕ್ಬಾಲ್, ಅಕ್ಬರ್ ಪಾಶ, ಎಂ.ಆರ್.ಬೇರಿ, ಜೆ.ಬಿ.ರಾಜು, ಶಿವುಕುಮಾರ ಯಾದವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here