ಬದಲಾಗುತ್ತಿರುವ ಭಾರತ, ಬದಲಾಗುತ್ತಿರುವ ಮುಸ್ಲಿಮರು: ದಿನೇಶ್ ಅಮೀನ್

0
304

ಹದಿನೇಳು ವರ್ಷಗಳ ಹಿಂದೆ ದೇಶ-ವಿದೇಶದ ಪತ್ರಿಕೆ-ಚಾನೆಲ್ ಗಳಲ್ಲಿ ಗುಜರಾತ್ ಹಿಂಸಾಚಾರದ ಮುಖವೆಂಬಂತೆ ಒಂದು ಪೋಟೊ ಕಾಣಿಸಿಕೊಳ್ಳುತ್ತಲೇ ಇತ್ತು. ಅದು ಅಹ್ಮದಾಬಾದ್ ಸೋನೆ ಕೀ ಚಾಲ್ ನಲ್ಲಿ ಪೊಲೀಸರಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದ ಕುತ್ಪುದ್ಧೀನ್ ಅನ್ಸಾರಿಯ ಚಿತ್ರ. ಇಡೀ ಗುಜರಾತ್ ನ ಮುಸ್ಲಿಮರ ಭೀತಿ,ಅಸಹಾಯಕತೆ, ಸಂಕಟ ಈ ಯುವಕನ ಮುಖದಲ್ಲಿ ಮುದುಡಿ ಕೂತಿತ್ತು.

ಅದೇ ಪತ್ರಿಕೆ-ಚಾನೆಲ್-ವೆಬ್ ಗಳಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಲದೀದಾ ಫರ್ಜಾನ ಮತ್ತು ಆಯೇಷಾ ರೆನ್ನಾ ಎಂಬ ಇಬ್ಬರು ಧೀರ ಮುಸ್ಲಿಮ್ ವಿದ್ಯಾರ್ಥಿನಿಯರು ( ಇವರಿಬ್ಬರೂ ಕೇರಳದ ವಿವಾಹಿತ ಹೆಣ್ಣು ಮಕ್ಕಳಂತೆ) ತಮ್ಮ ಸ್ನೇಹಿತೆಯರ ಜೊತೆ ಸೇರಿ ಇನ್ನೊಬ್ಬ ಸ್ನೇಹಿತನನ್ನು ಪೊಲೀಸರಿಂದ ರಕ್ಷಿಸಲು ಹೋರಾಡುತ್ತಿದ್ದ ಚಿತ್ರ ವೈರಲ್ ಆಗುತ್ತಿದೆ. ಬೆಂಕಿ ಉಂಡೆಗಳಂತೆ ಉರಿಯುತ್ತಿದ್ದ ಆ ವಿದ್ಯಾರ್ಥಿನಿಯರ ಕೋಪದ ತಾಪಕ್ಕೆ ಪೊಲೀಸರೇ ಹಿಂದಡಿಯಿಟ್ಟು ಓಡಿದರು. ಅದನ್ನು ನೋಡಿದಾಗ ಊರಲ್ಲಿ ಗಿಡುಗ ದಾಳಿ ಇಟ್ಟಾಗ ತಾಯಿ ಕೋಳಿ ತನ್ನ ಪುಟ್ಟ ಮರಿಗಳನ್ನು ರಕ್ಷಿಸಲು ಕಾದಾಡುತ್ತಿರುವ ದೃಶ್ಯ ನನಗೆ ನೆನಪಾಯಿತು.

ಇದು ಬದಲಾಗುತ್ತಿರುವ ಭಾರತ, ಬದಲಾಗುತ್ತಿರುವ ಮುಸ್ಲಿಮರು. ಇದು ಕತ್ತಲೆಯ ಸುರಂಗದ ಕೊನೆಯಲ್ಲಿ ನಾವು ಕಾಣಬಯಸುವ ಬೆಳಕು. ದೆಹಲಿ ಗಲಭೆಯ ಚಿತ್ರಗಳನ್ನು ಟಿವಿಯಲ್ಲಿ ನೋಡುತ್ತಿರುವಾಗಲೆಲ್ಲ ನನ್ನನ್ನು ರೋಮಾಂಚನ ಗೊಳಿಸಿದ್ದು ಅಲ್ಲಿನ ಮುಸ್ಲಿಮ್ ವಿದ್ಯಾರ್ಥಿನಿಯರ ಧೈರ್ಯ, ಆಕ್ರೋಶ,ಆವೇಶಗಳು. ಬಹಳ ದಿನಗಳಿಂದ ನನ್ನೂರಿನ ಅನುಭವದ ಹಿನ್ನೆಲೆಯಲ್ಲಿ ನಾನು ಮುಸ್ಲಿಮ್ ಸಮಾಜದೊಳಗೆ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಕುಟುಂಬಗಳಲ್ಲಿ ಗಂಡುಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣುಮಕ್ಕಳು ಓದುಬರಹ ಮಾತ್ರ ಕಲಿಯುವುದಲ್ಲ, ಎಂಜನಿಯರಿಂಗ್, ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದಾರೆ. ಹಲವು ಮುಸ್ಲಿಮ್ ಸ್ನೇಹಿತರ ಕುಟುಂಬಗಳ ಉದಾಹರಣೆಯನ್ನು ನಾನು ಕೊಡಬಲ್ಲೆ. ನಾವು ಗಮನಿಸಬೇಕಾಗಿರುವುದು ತಂದೆ-ತಾಯಿಯ ಬೆಂಬಲ ಇಲ್ಲದೆ ಯಾವ ಧರ್ಮದ ಕುಟುಂಬದಲ್ಲಿಯೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಸಾಧ್ಯ ಇಲ್ಲ ಎನ್ನುವುದನ್ನು. ಎಲ್ಲ ಧರ್ಮಗಳ ಹೆಣ್ಣು ಮಕ್ಕಳು ಎರಡು ಬಗೆಯ ಯುದ್ಧಗಳನ್ನು ಗೆಲ್ಲಬೇಕಾಗಿದೆ, ಒಂದು ಮನೆಯೊಳಗೆ,ಇನ್ನೊಂದು ಹೊರಗೆ. ಮುಸ್ಲಿಮ್ ಹೆಣ್ಣು ಮಕ್ಕಳು ನಿಧಾನವಾಗಿ ಮನೆಯೊಳಗಿನ ಯುದ್ಧವನ್ನು ಗೆಲ್ಲುತ್ತಿದ್ದಾರೆ. ಮುಸ್ಲಿಮ್ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆಂದರೆ,ಅವರ ತಂದೆ-ತಾಯಿಗಳು ಕೂಡಾ ಹೆಣ್ಣುಮಕ್ಕಳ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸಿಕೊಂಡಿದ್ದಾರೆ, ಅಷ್ಟರ ಮಟ್ಟಿನ ಜಾಗೃತಿ ಆಗಿದೆ ಎಂದು ಅರ್ಥವಲ್ಲವೇ?

ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಯೊಬ್ಬಳು ‘’ ಇದು ನನ್ನ ಭಾರತ, ಅವರ ಅಪ್ಪನದ್ದಲ್ಲ, ನಾವು ಇಲ್ಲಿಯವರಲ್ಲ ಎಂದು ಹೇಳಲು ಆ ಮೋದಿ-ಶಹಾ ಯಾರು? ಎಂದು ಕಿರುಚಾಡುತ್ತಿದ್ದಳು. ಅಬ್ಬಬ್ಬಾ… ಒಂದು ಕ್ಷಣ ಆ ಹುಡುಗಿ ನನ್ನ ಮಗಳಾಗಬಾರದಿತ್ತೇ ಎಂದು ಅನಿಸಿತ್ತು ನನಗೆ.

ಭಾರತಕ್ಕೆ ಭವಿಷ್ಯ ಇಲ್ಲ ಎಂದು ಹೇಳಿದವರು ಯಾರು? ಈಗಿನ ಕತ್ತಲು ಸರಿದುಹೋಗಲಿದೆ, ಬೆಳಕನ್ನು ತಡೆಯಲಾಗದು.

LEAVE A REPLY

Please enter your comment!
Please enter your name here