ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ

0
80

ಮೈಸೂರು,ಅ.7- ನಾಡ ದೇವತೆ ಚಾಮುಂಡೇಶ್ವರಿಯ ಸನ್ನಿದಾನದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮುತ್ಸದ್ಧಿ ಎಸ್.ಎಂ ಕೃಷ್ಣ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ಇಂದು ಬೆಳಿಗ್ಗೆ ೮.೧೫ ರಿಂದ ೮.೪೫ರ ಒಳಗಿನ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸಿ ಪುಷ್ಫಾರ್ಚನೆ ಮಾಡಿ ದಸರಾ ಉತ್ಸವದ ಆರಂಭಕ್ಕೆ ನಾಂದಿ ಹಾಡಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆಯೇ ಆಗಮಿಸಿದ ಎಸ್.ಎಂ. ಕೃಷ್ಣ ಅವರು ಮೊದಲಿಗೆ ದೇವಸ್ಥಾನಕ್ಕೆ ತೆರಳಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಪಕ್ಕದಲ್ಲೇ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಬೆಳ್ಳಿರಥದಲ್ಲಿ ವಿಶೇಷವಾಗಿ ಅಲಂಕರಿಸಿದ್ದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯ್ದು ೮ ದಿನಗಳ ಸರಳ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಎಸ್.ಎಂ. ಕೃಷ್ಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಗಣ್ಯರು ಸಾಂಪ್ರದಾಯಿಕ ರೇಷ್ಮೆ, ಪಂಚೆ, ಶಲ್ಯ ಉಡುಗೆ ತೊಟ್ಟು ದಸರಾ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಉದ್ಘಾಟನಾ ಕಾರ್ಯಕ್ರಮವನ್ನು ೧೦೦ ಜನರಿಗೆ ಮಿತಿಗೊಳಿಸಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಕೋವಿಡ್ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಇರುವ ವ್ಯಕ್ತಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಸ್ಮರಣಿಕೆ ನೀಡಿ ಗೌರವ ಸಮರ್ಪಿಸಲಾಯಿತು. ನಾಡಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ಪತ್ನಿ ಚನ್ನಮ್ಮ ಅವರಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಚಿವರಾದ ಆರ್ ಅಶೋಕ್, ಬೈರತಿ ಬಸವರಾಜು, ಡಾ.ಕೆ.ಸಿ.ನಾರಾಯಣಗೌಡ, ಡಾ.ಕೆ ಸುಧಾಕರ್, ಶಿವರಾಮ್ ಹೆಬ್ಬಾರ್, ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ, ಶಾಸಕರುಗಳಾದ ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಹರ್ಷವರ್ಧನ್, ಎಂ.ಎಲ್.ಸಿ.ಎಚ್.ವಿಶ್ವನಾಥ್, ಜಿಲ್ಲಾಧಿಕಾರಿಯಾದ ಬಗಾದಿ ಗೌತಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ ದೇವೇಗೌಡ, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here