ಸಂಪುಟ ರಚನೆ ಬಿಎಲ್ ಸಂತೋಷ್, ಜಾರಕಿಹೊಳಿ ಭೇಟಿ

ಸರ್ಕಾರ ರಚನೆಗೆ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿ ಬಂದವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಸಂತೋಷ್ ರವರಿಗೆ ಜಾರಕಿಹೊಳಿ ಮನವಿ

0
214

ಬೆಂಗಳೂರು,ನ.20- ಸಚಿವ ಸಂಪುಟ ವಿಸ್ತರಣೆ ಆಗಲಿದೆಯೋ ಎಂಬ ಇಲ್ಲವೋ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.  ಕೋಲ್ಕತ್ತಾ ಪ್ರವಾಸದಲ್ಲಿದ್ದ ಸಂತೋಷ್ ಅವರು ಇಂದು ನವದೆಹಲಿಗೆ ಬರುತ್ತಿದ್ದಂತೆ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ, ಸುಮಾರು 20 ನಿಮಿಷಕ್ಕೂ ಹೆಚ್ಚುಕಾಲ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಮೇಶ್ ಜಾರಕಿಹೊಳಿ ಪಕ್ಷದ ರಾಷ್ಟ್ರೀಯ ನಾಯಕರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.  ಸಾಮಾನ್ಯವಾಗಿ ಕರ್ನಾಟಕದಿಂದ ಯಾರೇ ಬಂದರೂ ಸಂತೋಷ್ ಅವರನ್ನು ಭೇಟಿಯಾಗುವುದಾಗಲೀ ಇಲ್ಲವೇ ಮಾತುಕತೆ ನಡೆಸದೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದರು.

ಇದೀಗ ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯಾಗಲಿದೆಯೋ ಎಂಬ ವದಂತಿಗಳು ಕೇಳಿಬರುತ್ತಿರುವಾಗಲೇ ಈ ಇಬ್ಬರು ಪ್ರಮುಖರ ಭೇಟಿ ನಾನಾ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಉಭಯ ನಾಯಕರು ಭೇಟಿ ಸಂದರ್ಭದಲ್ಲಿ ಸರ್ಕಾರ ರಚನೆಗೆ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿ ಬಂದವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಕೊಟ್ಟ ಮಾತಿನಂತೆ ಹಲವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಉಪಚುನಾವಣೆಯಲ್ಲಿ ಪರಾಭವಗೊಂಡರೂ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡದ ಆರ್.ಶಂಕರ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿದ್ದಾರೆ.

ಇದೀಗ ಉಪಚುನಾವಣೆಯಲ್ಲಿ ಗೆದ್ದಿರುವ ಮುನಿರತ್ನ ಸೇರಿದಂತೆ ಸರ್ಕಾರ ರಚನೆಗೆ ಕಾರಣೀಭೂತರಾದ ಎಲ್ಲರಿಗೂ ಮಂತ್ರಿಸ್ಥಾನ ನೀಡಲು ವರಿಷ್ಠರ ಬಳಿ ಚರ್ಚೆ ಮಾಡುವಂತೆ ರಮೇಶ್ ಜಾರಕಿಹೊಳಿಯವರು ಸಂತೋಷ್ ಅವರಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೂ ಮಂತ್ರಿ ಸ್ಥಾನ ಕೊಡಬೇಕು. ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ವರಿಷ್ಠರಿಗೆ ಮನವಿ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ ಬೆನ್ನಲ್ಲೇ ಸಂತೋಷ್ ಮತ್ತು ರಮೇಶ್ ಜಾರಕಿಹೊಳಿ ಭೇಟಿ ಮಹತ್ವದ್ದಾಗಿದೆ.

 

LEAVE A REPLY

Please enter your comment!
Please enter your name here