ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲೂ ಎಐಎಂಐಎಂ ಪಕ್ಷ ಸ್ಪರ್ಧಿಸಲಿದೆ; ಒವೈಸಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಇತರ ರಾಜ್ಯಗಳ ಚುನಾವಣಾ ಅಖಾಡಕ್ಕಿಳಿಯಲು ತೀರ್ಮಾನಿಸಿದೆ.

0
167

ಹೈದರಾಬಾದ್, ನ.11- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಇತರ ರಾಜ್ಯಗಳ ಚುನಾವಣಾ ಅಖಾಡಕ್ಕಿಳಿಯಲು ತೀರ್ಮಾನಿಸಿದೆ. ಮುಂಬರುವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಆ ಎರಡು ರಾಜ್ಯಗಳ ಹಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ.

ಬಿಜೆಪಿ ವಿರೋಧಿ ಮತಗಳನ್ನು ತಮ್ಮ ಪಕ್ಷ ಪಡೆದುಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಒವೈಸಿ ನಾನು ರಾಜಕೀಯ ಪಕ್ಷ ನಡೆಸುತ್ತಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ನಮ್ಮ ಹಕ್ಕು. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನಾವು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬಾರದು? ನಮಗೆ ಆ ಹಕ್ಕಿಲ್ಲವೇ? ನೀವು (ಕಾಂಗ್ರೆಸಿಗರು) ಮಹಾರಾಷ್ಟ್ರದಲ್ಲಿ ಶಿವಸೇನೆ ತೊಡೆ ಮೇಲೆ ಕುಳಿತಿಲ್ಲವೇ? ನಮ್ಮ ಪಕ್ಷ ಅವಶ್ಯಕತೆ ಇದ್ದಲ್ಲಿ ಎಲ್ಲಾ ಕಡೆ ಸ್ಪರ್ಧಿಸಲಿದೆ. ಮುಂಬರುವ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲೂ ಎಐಎಂಐಎಂ ಪಕ್ಷ ಸ್ಪರ್ಧಿಸಲಿದೆ ಎಂದು ಒವೈಸಿ ತಿಳಿಸಿದ್ದಾರೆ.

ನಾವು ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇವೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಅಥವಾ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here