ಎಐಎಂಐಎಂ ಪಕ್ಷವು ಬಿಹಾರದಲ್ಲಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದ್ಭುತ ಸಾಧನೆ.

ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಬಿಹಾರದಲ್ಲಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದ್ಭುತ ಸಾಧನೆ ಪ್ರದರ್ಶಿಸಿದೆ. ಬೈಸಿ, ಅಮೌರ್, ಕೊಚಧಾಮನ್, ಬಹಾದೂರ್ ಗಂಜ್ ಮತ್ತು ಜೋಕಿಹತ್ ನಲ್ಲಿ ಎಐಎಂಐಎಂ ಅಭ್ಯರ್ಥಿಗಳು ವಿಜಯದ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.

0
126

ಪಾಟ್ನಾ : ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಬಿಹಾರದಲ್ಲಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದ್ಭುತ ಸಾಧನೆ ಪ್ರದರ್ಶಿಸಿದೆ. ಬೈಸಿ, ಅಮೌರ್, ಕೊಚಧಾಮನ್, ಬಹಾದೂರ್ ಗಂಜ್ ಮತ್ತು ಜೋಕಿಹತ್ ನಲ್ಲಿ ಎಐಎಂಐಎಂ ಅಭ್ಯರ್ಥಿಗಳು ವಿಜಯದ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.

ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆಯಾಗಿದ್ದರೆ, ಬಹುಷಃ ಎಐಎಂಐಎಂ ಮುಂಚೂಣಿಯಲ್ಲಿ ನಿಂತು ಸರಕಾರ ರಚನೆಗೆ ನೆರವಾಗುತಿತ್ತು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುವುದನ್ನು ತಡೆಯುತಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಫಲಿತಾಂಶ ಮ್ಯಾಜಿಕ್ ಸಂಖ್ಯೆಯ ಆಸುಪಾಸಿನಲ್ಲಿ ಎನ್ ಡಿಎ ಮತ್ತು ಮಹಾಮೈತ್ರಿ ನಡುವೆ ಜಿದ್ದಾಜಿದ್ದಿಯಲ್ಲಿದ್ದಾಗಲೇ, ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆಯಲು ಮಹಾಘಟಬಂಧನ್ ಗೆ ಬೆಂಬಲಿಸುವುದಾಗಿ ಒವೈಸಿ ಘೋಷಿಸಿದ್ದರು.

ಆದರೂ, ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ತನ್ನ ಸೋಲಿನ ಹೊಣೆಯನ್ನು ಒವೈಸಿ ಪಕ್ಷದ ಮೇಲೆ ಹೊರಿಸಲು ಮುಂದಾಗಿರುವುದು ವಿಷಾಧನೀಯ. ಈ ಹಿಂದಿನ ಚುನಾವಣೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೂಲದ ಬಿಎಸ್ ಪಿ, ಕರ್ನಾಟಕದಲ್ಲಿ ಎಸ್ ಡಿಪಿಐ ಮೇಲೆ ಕಾಂಗ್ರೆಸ್ ಇಂತಹುದೇ ಆರೋಪಗಳನ್ನು ಮಾಡಿತ್ತು.

ಎಐಎಂಐಎಂ 20 ಸ್ಪರ್ಧಿಸಿದ್ದ ಸ್ಥಾನಗಳಲ್ಲೂ ಒಂದು ಸ್ಥಾನವನ್ನು ಹೊರತುಪಡಿಸಿ, ಉಳಿದ ಎಲ್ಲಾ ಸ್ಥಾನಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲುವ ಸ್ಥಿತಿಯಲ್ಲಿರಲಿಲ್ಲ. ಈ ಕ್ಷೇತ್ರಗಳಲ್ಲಿ ಎಐಎಂಐಎಂ ಪಡೆದ ಮತಗಳು ಕಾಂಗ್ರೆಸ್ ಸೋಲಿನ ಅಂತರದ ಮತಗಳ ಪ್ರಮಾಣದಷ್ಟಿರಲಿಲ್ಲ.

ಇನ್ನೊಂದೆಡೆ, ಹಾಗೊಂದು ವೇಳೆ ಎಐಎಂಐಎಂ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ತೊಡಕಾಗಿತ್ತೆಂದು ಒಪ್ಪಿಕೊಂಡರೂ, 20 ಸ್ಥಾನಗಳಲ್ಲಿ ಮಾತ್ರ ಎಐಎಂಐಎಂ ಇತ್ತು, ಕಾಂಗ್ರೆಸ್ ಸ್ಪರ್ಧಿಸಿದ್ದ 70 ಕ್ಷೇತ್ರಗಳಲ್ಲಿ ಇನ್ನೂ 50 ಸ್ಥಾನಗಳಲ್ಲಿ ಯಾಕೆ ಗೆಲ್ಲಲಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇನ್ನೂ ಹೇಳಬೇಕೆಂದರೆ, ಎಐಎಂಐಎಂ ಸ್ಪರ್ಧಿಸಿದ್ದ 20 ಎಲ್ಲಾ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿರಲಿಲ್ಲ. ಕೆಲವೆಡೆ ಮಹಾಘಟಬಂಧನ್ ನ ಇತರ ಅಭ್ಯರ್ಥಿಗಳಿದ್ದರು. ಕೆಲವೆಡೆ ಮಹಾಘಟಬಂಧನ್ ಅಭ್ಯರ್ಥಿಗಳೇ ಗೆದ್ದಿದ್ದಾರೆ.

ಕಾಂಗ್ರೆಸ್ ತನ್ನ ಸೋಲಿಗೆ ನಿಜವಾದ ಕಾರಣವನ್ನು ಹುಡುಕದೆ, ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿರುವ ಪಕ್ಷದ ನಾಯಕ ಒವೈಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದು ತಮ್ಮ ಹಕ್ಕು, ಬಿಹಾರದಲ್ಲಿ ಕಾಂಗ್ರೆಸ್ ಗೆ 30 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಅದು ಯಾಕೆ ತನ್ನ ಗೆಲುವಿನ ಬಗ್ಗೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಒಂದು ಲೆಕ್ಕದಲ್ಲಿ 70 ಸ್ಥಾನಗಳನ್ನು ಪಟ್ಟು ಹಿಡಿದು ಪಡೆದು, ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ಸೇ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎನ್ನಬಹುದು. ಕಾಂಗ್ರೆಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಇನ್ನೂ 20-25 ಸೀಟು ಆರ್ ಜೆಡಿಗೆ ಬಿಟ್ಟುಕೊಟ್ಟಿದ್ದರೆ, ಅದು ಇನ್ನೂ ಕನಿಷ್ಠ 10 ಸ್ಥಾನಗಳಲ್ಲಿ ಗೆಲ್ಲುತ್ತಿದ್ದರೆ, ಫಲಿತಾಂಶ ದಿಕ್ಕೇ ಬದಲಾಗುತಿತ್ತು. ಎನ್ ಡಿಎ ಅಧಿಕಾರಕ್ಕೆ ಬರುವುದು ತಪ್ಪುತಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

LEAVE A REPLY

Please enter your comment!
Please enter your name here