ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಸರಳ ಆಚರಣೆ

ಯಾವುದೇ ಭಾಷೆಯಾಗಲೀ ಅದಕ್ಕೆ ಅದರದ್ದೇ ಆದ ಸೌಂದರ್ಯವಿದೆ. ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮದು. ನಮ್ಮ ನಡೆ, ನುಡಿ ಕನ್ನಡವಿರಲಿ. ; ಸಿಎಂ

0
174

ಬೆಂಗಳೂರು,ನ.01: ರಾಜ್ಯದೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು. ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಇದರಂತೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ಮಾಡಿದ್ದು, ಕನ್ನಡ ಉಳಿವಿಗಾಗಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸಬೇಕು. ತಂತ್ರಜ್ಞಾನ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸೋಣ ಎಂದು ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು, ನಂತರ ಸಚಿವ ಎಸ್.ಸುರೇಶ್ ಕುಮಾರ್ ಅವರು ನಾಡಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿರುವ ಯಡಿಯೂರಪ್ಪ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಇಂದು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಕರ್ನಾಟಕದ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಇಂದು ನಾವು 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಮುಂದಿನ ಒಂದು ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಕಾರ್ಯಕ್ರಮ ರೂಪಿಸಲಾಗುತ್ತದೆ. ಇದಕ್ಕಾಗಿ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಕೊರೋನಾ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಿದೆ. ಆದರೆ, ನಮ್ಮ ಸರ್ಕಾರ ಅದನ್ನು ದಿಟ್ಟವಾದಿ ನಿರ್ವಹಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದರ ಮೂಲಕ ಮಹಾಮಾರಿ ವೈರಸ್’ನ್ನು ಓಡಿಸಬೇಕು. ರಾಜ್ಯದಲ್ಲಿ ನೆರೆ ಉಂಟಾಗಿ ರೈತರು, ಕೃಷಿ ವಲಯ, ಆರ್ಥಿಕ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ.

ಕನ್ನಡದ ಉಳಿವಿಗಾಗಿ ಹೆಚ್ಚು ಕನ್ನಡ ಭಾಷೆಯನ್ನು ಬಳಸಬೇಕು. ದೈನಂದಿನ ಜೀವನದಲ್ಲಿ ಕನ್ನಡ ಮಾತಾಡಬೇಕು, ಬರೆಯಬೇಕು. ಮನೆಗಳಲ್ಲಿ ಮಕ್ಕಳ ಜತೆ ಕನ್ನಡದಲ್ಲಿಯೇ ಮಾತನಾಡುವುದರಿಂದ, ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಕೆ ಮಾಡುವುದರಿಂದ ನಮ್ಮ ಭಾಷೆ ಜೀವಂತವಾಗಿರುತ್ತದೆ. ಬಳಸಿದ ಹಾಗೆಯೇ ಭಾಷೆ ಬೆಳೆಯುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here