ಸ್ಲಂಬೋರ್ಡ್ ಅಭಿವೃದ್ಧಿಯಲ್ಲಿ ಶಾಸಕರ ನಿರ್ಲಕ್ಷ್ಯ : ಸ್ಲಂ ಜನರ ಕ್ರಿಯಾವೇದಿಕೆ ಜಿಲ್ಲಾದ್ಯಕ್ಷ ನೀಲಕಂಠ ಆರೋಪ

ಮಂಜೂರಾಗಿದ್ದ ಸ್ಲಂಬೋರ್ಡ್ ಮನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲರಾಗಿರುವ ಶಾಸಕರಿಗೆ ನಮ್ಮ ಧಿಕ್ಕಾರ; ಅಂತರಾಷ್ಟ್ರೀಯ ಮಾನವ ಹಕ್ಕುಗಳ ಜಿಲ್ಲಾದ್ಯಕ್ಷ ಜಾಫರ್‌ಹುಸೇನ್ ಪೂಲವಾಲೆ,

0
74

ಲಿಂಗಸುಗೂರು.ನ.01- ಪುರಸಭೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿ ಮೂಲ ಸೌಲಭ್ಯಗಳೇ ಮಾಯವಾಗಿವೆ. ಶಾಸಕರು ಕೇವಲ ಹೇಳಿಕೆ ನೀಡಲಿಕ್ಕೆ ಮಾತ್ರ ಸೀಮಿತವಾಗಿದ್ದು, ಅವರಿಗೆ ಬಡವರ ಗೋಳು ಕೇಳದಾಗಿದೆ ಎಂದು ಸ್ಲಂ ಜನರ ಕ್ರಿಯಾವೇದಿಕೆ ಜಿಲ್ಲಾದ್ಯಕ್ಷ ನೀಲಕಂಠ ಆರೋಪಿಸಿದರು.

ಲಿಂಗಸುಗೂರು ಶಾಸಕರ ನಿರ್ಲಕ್ಷ್ಯಕ್ಕೆ ದೇವದುರ್ಗ ಪಾಲಾದ ಸ್ಲಂಬೋರ್ಡ್ ಮನೆಗಳು ಶೀರ್ಷಿಕೆಯಡಿ ಪತ್ರಿಕೆ ಪ್ರಕಟಿಸಿದ್ದ ವರದಿಗೆ ಸ್ಪಂಧಿಸಿ ಕೊಳಗೆರಿಗಳಿಗೆ ಭೀಟಿ ನೀಡಿ ಅಲ್ಲಿನ ಜನರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ಲಂಬೋರ್ಡ್ ಕಾಮಗಾರಿಗಳು ಸಾಕಷ್ಟು ಮಂಜೂರಾಗಿದ್ದರು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಗೌಣವಾಗಿವೆ. ಲಿಂಗಸುಗೂರು ಶಾಸಕರು ಸ್ಲಂಬೋರ್ಡ್ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವ ಫಲಾನುಭವಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ.
ಕೇವಲ ರಾಜಕೀಯ, ಉಳ್ಳವರಿಗೆ ಮಣೆ ಹಾಕುವ ಕಾಯಕದಲ್ಲೇ ಮಗ್ನರಾಗಿರುವ ಪ್ರತಿನಿಧಿಗಳಿಗೆ ಬಡವರ ಶಾಪ ತಟ್ಟದೇ ಇರದು. ಕೂಡಲೇ ಶಾಸಕರು ಸ್ಲಂಬೋರ್ಡ್‌ನಿಂದ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಬೇಕು. ಸಧ್ಯ ಪುರಸಭೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಜನರು ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಜರೂರತ್ತು ಇದೆ. ಶಾಸಕರು ನಿರ್ಲಕ್ಷ್ಯ ಮಾಡದೇ ಜನಪರ ಕಾರ್ಯಕ್ಕೆ ಮುಂದಾಗದೇ ಇದ್ದಲ್ಲಿ ಹೋರಾಟಕ್ಕೆ ಅಣಿಯಾಗುತ್ತೇವೆಂದು ನೀಲಕಂಠ ಹೇಳಿದರು.

ಬಳಿಕ ಮಾತನಾಡಿದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಜಿಲ್ಲಾದ್ಯಕ್ಷ ಜಾಫರ್‌ಹುಸೇನ್ ಪೂಲವಾಲೆ, ಲಿಂಗಸುಗೂರಿಗೆ ಮಂಜೂರಾಗಿದ್ದ ಸ್ಲಂಬೋರ್ಡ್ ಮನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲರಾಗಿರುವ ಶಾಸಕರಿಗೆ ನಮ್ಮ ಧಿಕ್ಕಾರ. ಕನಿಷ್ಠ ಸೌಲಭ್ಯಗಳಿಲ್ಲದೇ ಬಡ ಜನರು ಟೀನ್‌ಶೆಡ್, ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಕನಸು ಹೊತ್ತಿರುವ ಸರಕಾರದ ಯೋಜನೆಗಳು ಪ್ರತಿನಿಧಿಗಳ ಅಸಡ್ಡೆತನಕ್ಕೆ ಹಳ್ಳ ಹಿಡಿದಿವೆ ಎಂದು ಆರೋಪಿಸಿದರು. ಕೂಡಲೇ ಶಾಸಕರು ಹಾಗೂ ಸಂಸದರು ನಮ್ಮ ತಾಲೂಕಿನಲ್ಲಿರುವ ಸ್ಲಂಬೋರ್ಡ್ ಪ್ರದೇಶಗಳಿಗೆ ಬೇಕಾದ ಮನೆಗಳು ಸೇರಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಸರಿಯಾಗಿ ರಸ್ತೆ ಸೌಕರ್ಯ ಇಲ್ಲದ ಪರಿಣಾಮ ಕೊಳಚೆ ಪ್ರದೇಶದಲ್ಲಿ ವೃದ್ಧರು ನಡೆಯಲಿಕ್ಕಾಗದೇ ಕತ್ತಲಲ್ಲಿ ಬಿದ್ದು ಕೈ ಮುರಿದುಕೊಂಡ ಪ್ರಸಂಗಗಳೂ ಇಲ್ಲಿ ಜರುಗಿವೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಇಲ್ಲಿ ವಾಸವಿರುವ ಜನರು ನಿತ್ಯ ಜೀವ ಭಯದಲ್ಲಿ ಓಡಾಡುವಂಥಹ ಪರಿಸ್ಥಿತಿ ಇದೆ. ಮಹಿಳೆಯರಿಗೆ ಶೌಚಾಲಯಗಳಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗೆ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ಏರಿಯಾದಲ್ಲಿ ರೋಗಗ್ರಸ್ಥ ವಾತಾವರಣ ಮನೆ ಮಾಡಿದೆ.

ಬಡಜನರ ಅಭಿವೃದ್ಧಿಯಲ್ಲಿ ಶಾಸಕರು ರಾಜಕಾರಣ ಮಾಡದೇ, ಅರ್ಹ ಫಲಾನುಭವಿಗಳಿಗೆ ಅಗತ್ಯ ಸವಲತ್ತುಗಳನ್ನು ನೀಡುವ ನಿಟ್ಟಿನತ್ತ ಮುಂದಾಗಬೇಕು ಎನ್ನುವ ಒತ್ತಾಯಗಳು ಸಂಘಟನಾಕಾರರದ್ದಾಗಿದೆ.

LEAVE A REPLY

Please enter your comment!
Please enter your name here