ಭೀಮಾ ಪ್ರವಾಹ ಇಳಿಮುಖ: ಮತ್ತೆ ಮಳೆ ಭೀತಿಯಲ್ಲಿ ಮನೆಗೆ ತೆರಳಿದ ಸಂತ್ರಸ್ತರು

0
181

ಕಲಬುರಗಿ. ಅ.24: ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಭೀಮಾ ನದಿಯ ಪ್ರವಾಹದಲ್ಲಿ ಇಳಿಮುಖವಾಗಿದೆ. ಆದಾಗ್ಯೂ, ಹವಾಮಾನ ಇಲಾಖೆಯು ಮತ್ತೆ ಮೂರು ದಿನಗಳವರೆಗೆ ಮಳೆ ಬೀಳುವ ಕುರಿತು ಎಚ್ಚರಿಕೆ ನೀಡಿದೆ. ಇಂತಹ ಭೀತಿಯ ಮಧ್ಯೆಯೂ ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರು ತಮ್ಮ, ತಮ್ಮ ಮನೆಗಳಿಗೆ ತೆರಳಿದ್ದು, ಸಾಮಾನು, ಸರಂಜಾಮುಗಳನ್ನು ಜೋಡಿಸಿಕೊಳ್ಳುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೋನಾ ಭೀತಿಯ ನಡುವೆಯೇ ಎರಡ್ಮೂರು ಬಾರಿ ಬಂದ ಪ್ರವಾಹದ ಹೊಡೆತಕ್ಕೆ ಸಿಕ್ಕವರ ಬದುಕು ಸುಧಾರಿಸಲು ಹಲವು ತಿಂಗಳುಗಳೇ ಬೇಕಿದೆ. ಪ್ರವಾಹ ಇಳಿಯುತ್ತಿದ್ದಂತೆಯೇ ಜನಗಳು ಮನೆಗಳತ್ತ ಮುಖ ಮಾಡಿದ್ದಾರೆ. ಮನೆ ಸ್ವಚ್ಛಗೊಳಿಸಿ, ಸಾಮಾನು ಸರಂಜಾಮುಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿದ್ದ ಧವಸ, ಧಾನ್ಯ ನೀರು ಪಾಲಾಗಿದೆ. ಉಟ್ಟ ಬಟ್ಟೆಯಲ್ಲಿಯೇ ಹೋದವರು ಈಗ ಬದುಕು ಕಟ್ಟಿಕೊಳ್ಳಲು ಹರಸಾಹಸ ನಡೆಸಬೇಕಾಗಿದೆ. ಕೊಚ್ಚಿ ಹೋಗಿರುವ ಬದುಕನ್ನು ಸರಿಪಡಿಸಿಕೊಳ್ಳಲು ಎಷ್ಟು ವರ್ಷ ಬೇಕಾಘುವುದೋ ಎಂಬುದು ಇಲ್ಲಿನ ಸಂತ್ರಸ್ತರ ಅಳಲು.
ಜಿಲ್ಲೆಯ ಜೀವ ನದಿಯಾಗಿರುವ ಭೀಮೆ ಇಲ್ಲಿನ ಜನರಿಗೆ ಖುಷಿಗಿಂತ ದು:ಖವನ್ನು ಕೊಟ್ಟಿದ್ದೇ ಹೆಚ್ಚು. ಎಷ್ಟೋ ಬಾರಿ ಕುಡಿಯಲು ನೀರಿಲ್ಲದೇ ನದಿ ಪಾತ್ರದ ಜನ ತತ್ತರಿಸುತ್ತಿದ್ದಾಗ ಮಾಹಾರಷ್ಟ್ರದ ನಿರ್ದಯಿಯಾಗಿ ವರ್ತಿಸಿದ್ದಿದೆ. ಸಾಕಷ್ಟು ಬಾರಿ ಭೀಮಾ ನದಿ ನೀರಿಗಾಗಿ ಕಾದು ಕುಳಿತ ಜನರಿಗೆ ಈ ಭಾರೀ ಪ್ರವಾಹವೇ ಎದುರಾಗಿ ತಲ್ಲಣಿಸಿ ಹೋಗಿದ್ದಾರೆ. ಈಗ ಭಾರೀ ಮಳೆಯಾಗಿದೆ ಎಂದು ಏಕಾಏಕಿ ನೆರೆಯ ಮಹಾರಾಷ್ಟ್ರ ನೀರು ಬಿಟ್ಟಿದ್ದರ ಪರಿಣಾಮ ಜಿಲ್ಲೆಯ ನದಿ ಪಾತ್ರದ ಜನರ ಬದುಕೇ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.
ಹಲವು ದಶಕಗಳ ನಂತರ ಭೀಮಾ ನದಿಯಲ್ಲಿ ಉಂಟಾದ ಭಾರೀ ಪ್ರವಾಹಕ್ಕೆ ಜನತೆ ನಲುಗಿ ಹೋಗಿದೆ. ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ ಊರು ಸೇರಿ ಮನೆಗಳಲ್ಲಿ ತಮ್ಮ ಎಂದಿನ ಜೀವನ ನಡೆಸಲು ದಸರಾ ಹಬ್ಬದ ಸಮಯದಲ್ಲಿಯೇ ತೆರಳಿದ್ದು, ಇಂತಹ ಸಂದರ್ಭದಲ್ಲಿ ದುರ್ನಾತವೇ ಅವರಿಗೆ ಸ್ವಾಗತಿಸುತ್ತಿದೆ. ಎಲ್ಲಿ ನೋಡಿದರೂ ರಾಡಿ. ಮನೆಯಲ್ಲಿ ಕಾಲಿಟ್ಟರೆ ಕೆಸರಿನ ಜೊತೆ ಧಾನ್ಯ ಕೊಳೆತು ಹೋದ ದುರ್ವಾಸನೆ. ನೀರು ಏಕಾಏಕಿ ಬಂದಿದ್ದರಿಂದ ಉಟ್ಟ ಬಟ್ಟೆಯಲ್ಲಿಯೇ ಮನೆ ತೊರೆದು ಹೋಗಿದ್ದೇವೆ. ಈಗ ಬಂದು ನೋಡಿದರೆ ಧವಸ- ಧಾನ್ಯ, ಬಟ್ಟೆ, ಬರೆ ನೀರಲ್ಲಿ ಮುಳುಗಿ ಹೋಗಿವೆ. ಧವಸ- ಧಾನ್ಯ ಕೊಳೆತು ಹೋಗಿದೆ. ಅದನ್ನು ತಿನ್ನಲು ಬರೋದಿಲ್ಲ. ಒಣಗಿಸಿ ದನಗಳಿಗೆ ಹಾಕಿದರೂ ಅವು ತಿನ್ನುವುದಿಲ್ಲ ಎನ್ನುತ್ತಾರೆ ತಾಲ್ಲೂಕಿನ ಕೋನಹಿಪ್ಪರಗಾ ಗ್ರಾಮದ ನಿವಾಸಿ ಮಹಾದೇವಿ.
ಅಳಿದುಳಿದ ಧಾನ್ಯವನ್ನು ಮನೆಗಳ ಮುಂದೆ ಸಂತ್ರಸ್ತರು ಒಣಗಿಸುತ್ತಿದ್ದಾರೆ. ಆದಾಗ್ಯೂ, ಅದು ಮುಗ್ಗು ವಾಸನೆ ಹಿಡಿದಿರೋದರಿಂದ ತಿನ್ನಲು ಬರುವುದಿಲ್ಲ. ಬಟ್ಟೆಗಳೂ ಸಹ ಕೊಳೆತು ನಾರುತ್ತಿವೆ. ಹೊಸ ಬದುಕನ್ನೇ ದಸರಾ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದಾಗ್ಯೂ, ಸಂತ್ರಸ್ತರ ಕೈಯಲ್ಲಿ ದುಡ್ಡಿಲ್ಲದಿರುವಾಗ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ನೀಡುವಂತೆ ಕೋನಹಿಪ್ಪರಗಾ ಸಂತ್ರಸ್ತ ಹುಸೇನಸಾಬ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ನಡುವೆ ಪ್ರವಾಹದ ನೀರಿನಿಂದ ಜಲಚರಗಳು ಸತ್ತಿದ್ದು, ಅದರ ಪರಿಣಾಮ ಸಾಂಕ್ರಮಿಕ ರೋಗದ ಭೀತಿ ಕೂಡ ಎದುರಾಗಿದೆ. ರಸ್ತೆಗಳು ಕೆಸರುಗದ್ದೆಯಾಗಿದ್ದು, ಹೊಲ, ಜಮೀನುಗಳು ಕೂಡ ಇದೇ ರೀತಿಯಾಗಿದೆ. ಭೀಮಾ ನದಿ ಅಬ್ಬರ ಇಳಿಮುಖಗೊಂಡಿದ್ದರೂ ಸಂತ್ರಸ್ತರ ಗೋಳಿಗೆ ಕೊನೆಯಿಲ್ಲದಂತಾಗಿದೆ. ಭೀಮೆಯ ಪ್ರವಾಹಕ್ಕೆ ನಮ್ಮ ಬದುಕೇ ಕೊಚ್ಚಿ ಹೋಗಿದ್ದು, ಅದನ್ನು ಮತ್ತೆ ಕಟ್ಟಿಕೊಳ್ಳಬೇಕೆಂದರೆ ಹಲವು ತಿಂಗಳುಗಳ ಸಮಯವೇ ಹಿಡಿಯುತ್ತದೆ ಎಂದು ಸಂತ್ರಸ್ತರು ಅವಲತ್ತುಕೊಂಡಿದ್ದಾರೆ.

LEAVE A REPLY

Please enter your comment!
Please enter your name here