ಶಿರಾ ಬೈಎಲೆಕ್ಷನ್ : ಜೆಡಿಎಸ್ ಅಭ್ಯರ್ಥಿಯಾಗಿ ದಿವಂಗತ ಸತ್ಯನಾರಾಯಣ ಅವರ ಪತ್ನಿ ಕಣಕ್ಕೆ

0
8

ಬೆಂಗಳೂರು,ಅ.6-ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಸಚಿವ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಜೆಪಿಭವನದಲ್ಲಿಂದು ನಡೆದ ವಿಧಾನಪರಿಷತ್‍ನ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾವಣಾ ಸಿದ್ದತೆಗೆ ಸಂಬಂಸಿದ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಘೋಷಣೆ ಮಾಡಿದ್ದಾರೆ.

ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸತ್ಯ ನಾರಾಯಣ ಅವರ ಪತ್ನಿಯೇ ಆಗಲಿದ್ದು, ಇದರಲ್ಲಿ ಎರಡು ಮಾತಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ. ಅಮ್ಮಾಜಮ್ಮ ಅವರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿಲ್ಲ ಎಂಬ ಗೊಂದಲ ಬೇಡ. ಸ್ಪರ್ಧೆಗೆ ಒಪ್ಪಿದ್ದಾರೆ.

ಸತ್ಯನಾರಾಯಣ ಅವರ ಪುತ್ರ ತುಂಬಾ ಆ್ಯಕ್ಟಿವ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದ ಮುಖಂಡರನ್ನು ಕಾಂಗ್ರೆಸ್-ಬಿಜೆಪಿಯವರು ಕರೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಜೆಡಿಎಸ್ ಬಗ್ಗೆ ಯಾರಿಗೂ ಅನುಕಂಪನ ಬೇಡ.

ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತಿವೆ. ನಾವು ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಗೌಡರು ತಿಳಿಸಿದರು.

ಆರ್‍ಆರ್‍ನಗರ ಕ್ಷೇತ್ರದ ಉಪಚುನಾವಣೆಗೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಈಗಾಗಲೇ 3 ಹೆಸರು ಅಂತಿಮವಾಗಿದೆ. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಅ.8ರಂದು ಅಭ್ಯರ್ಥಿ ಯಾರೆಂಬುದನ್ನು ನಿರ್ಣಯ ಮಾಡಲಾಗುವುದು ಎಂದರು. ಸೋಲುಗೆಲುವು ಬೇರೆ ವಿಚಾರ. ಅಭ್ಯರ್ಥಿಯನ್ನಂತೂ ಹಾಕೇ ಹಾಕುತ್ತೇವೆ ದೇವೇಗೌಡರು ತಿಳಿಸಿದರು.

LEAVE A REPLY

Please enter your comment!
Please enter your name here