ಇಎಂಐ ಕಟ್ಟಿದವರಿಗೆ ಕ್ಯಾಷ್​ಬ್ಯಾಕ್? : ಮಾರಟೋರಿಯಂ ಪಡೆಯದವರಿಗೂ ಸಿಗಲಿದೆ ಕೇಂದ್ರದ ಸವಲತ್ತು

0
170

ನವದೆಹಲಿ/ಮುಂಬೈ: ಲಾಕ್​ಡೌನ್ ಅವಧಿಯಲ್ಲಿ ಸಾಲದ ಕಂತು (ಇಎಂಐ) ಪಾವತಿ ಮಾಡದವರ ಜತೆಗೆ ಇಎಂಐ ಪಾವತಿಸಿರುವವರಿಗೂ ಮಾರಟೋರಿಯಂ (ಸಾಲದ ಕಂತು ಪಾವತಿ ಮುಂದೂಡಿಕೆ) ಅವಧಿಯ ಚಕ್ರಬಡ್ಡಿ ಮನ್ನಾ ಲಾಭ ದೊರೆಯಲಿದೆ. ಶನಿವಾರ ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್​ನಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಆದರೆ ಯಾವ ಮಾನದಂಡ, ಚಕ್ರಬಡ್ಡಿ ಮನ್ನಾ ವಿಧಾನ ಹೇಗೆಂಬುದರ ಬಗ್ಗೆ ಕೇಂದ್ರ ವಿವರಣೆ ನೀಡಿಲ್ಲ.

ಮೂಲಗಳ ಪ್ರಕಾರ, ಇಎಂಐ ಪಾವತಿಸಿರುವವರಿಗೆ ಕ್ಯಾಷ್​ಬ್ಯಾಕ್ ಮೂಲಕ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಪರಿಹಾರ ಜಾರಿ ಹೇಗೆ ಮತ್ತು ಮಾರಟೋರಿಯಂ ಪಡೆಯದವರ ಸಂಖ್ಯೆ ಎಷ್ಟೆಂಬುದರ ಬಗ್ಗೆ ಪರಿಶೀಲನಾ ಕಾರ್ಯ ಆಗಬೇಕಿದೆ. ಇದಕ್ಕೂ ಮೊದಲು, -ಠಿ; 2 ಕೋಟಿವರೆಗಿನ ಸಾಲಕ್ಕೆ ಕಳೆದ ಮಾರ್ಚ್​ನಿಂದ ಆಗಸ್ಟ್​ವರೆಗಿನ ಆರು ತಿಂಗಳ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರ ಸರ್ಕಾರದ ಅಫಿಡವಿಟ್ ಬಗ್ಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಏನೆಂಬುದು ಸ್ಪಷ್ಟವಾಗಬೇಕಿದೆ. ಕೆಲವು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದಾಗ ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿದ ಕೃಷಿಕರನ್ನು ಕಡೆಗಣಿಸಲಾಗುತ್ತಿದೆ, ಸಾಲ ಮರುಪಾವತಿಸುವುದೇ ಅಪರಾಧ ಎಂಬಂತಹ ಮನೋಭಾವ ಬಲಗೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ಕೇಂದ್ರ ಮತ್ತು ಆರ್​ಬಿಐ ವ್ಯಕ್ತಪಡಿಸಿದ್ದವು.

ಬ್ಯಾಂಕ್ ಮತ್ತು ಎನ್​ಬಿಎಫ್​ಸಿ (ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ)ಗಳಿಂದ ಸಾಲ ಪಡೆದು ಮಾರಟೋರಿಯಂ ಅವಕಾಶ ಆಯ್ಕೆ ಮಾಡಿಕೊಳ್ಳದವರ ಸಂಖ್ಯೆ ಶೇ 30ರಿಂದ 40ರಷ್ಟಿದೆ ಎಂದುಕೊಂಡರೂ ಇವರಿಗೆ ಪರಿಹಾರ ಒದಗಿಸಲು 5 ರಿಂದ 7 ಸಾವಿರ ಕೋಟಿ ರೂಪಾಯಿ ಸಾಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಇಂದು ವಿಚಾರಣೆ
ಮಾರಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾ ಮಾಡುವ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಕುರಿತಂತೆ ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಕೇಂದ್ರದ ಪ್ರಸ್ತಾವನೆ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

 

LEAVE A REPLY

Please enter your comment!
Please enter your name here