ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುರ್ಲೆಯವರಿಗೆ ಆರಂಭದಲ್ಲೇ ದೊಡ್ಡ ಪೆಟ್ಟು.

0
189

ಕಲಬುರಗಿ:ಅ.4: ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ತಮಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡು ಮಾಜಿ ಸಚಿವ ಡಾ. ವೈಜನಾಥ್ ಪಾಟೀಲ್ ಅವರ ಕಟ್ಟಾ ಬೆಂಬಲಿಗ ಎಂ.ಬಿ. ಅಂಬಲಗಿ ಅವರು ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರಿಗೆ ಆರಂಭದಲ್ಲಿಯೇ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ.
ಎಂ.ಬಿ. ಅಂಬಲಗಿ ಅವರು ಭಾನುವಾರ ಸ್ವತ: ಸುದ್ದಿಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ಕುರಿತು ಘೋಷಿಸಿ, 10 ವರ್ಷ ಸೇವಾವಧಿಗೆ (ಉಪನ್ಯಾಸಕ ಹುದ್ದೆ) ರಾಜೀನಾಮೆ ನೀಡಿ 2014ರ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್ತಿಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಮಾಜಿ ಪ್ರಧಾನಿ ಹಾಗೂ ಪಕ್ಷದ ಪರಮೋಚ್ಛ ನಾಯಕ ಎಚ್.ಡಿ. ದೇವೆಗೌಡರಿಗೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲೆಯ ಚಿಂಚೊಳಿ ತಾಲ್ಲೂಕಿನ ನಿವಾಸಿಯಾಗಿ, 1983ರಿಂದ 1989ರವರೆಗೆ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡು 1988ರಿಂದ ಸಮಾಜವಾದಿ ಜನತಾ ಪಕ್ಷದ ಹೆಚ್.ಡಿ. ದೇವೆಗೌಡರೊಂದಿಗೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, 1994ರಲ್ಲಿ ರಾಜ್ಯದಲ್ಲಿ ಸರ್ಕಾರ ಬರುವಲ್ಲಿ ಅಳಿಲು ಸೇವೆ ಮಾಡಿರುವೆ. 1994ರಲ್ಲಿ ಸರ್ಕಾರಿ ಕಾಲೇಜಿಗೆ ಉಪನ್ಯಾಸಕನಾಗಿ ಸೇವೆಗೆ ಸೇರಿದ ನಂತರ ಅಪರೋಕ್ಷವಾಗಿ ದೇವೆಗೌಡರು ಮತ್ತು ಕುಮಾರಸ್ವಾಮಿಯವರು ಮಾಡಿರುವ ಜನಪರ ಕೆಲಸಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವುದರೊಂದಿಗೆ ಶಿಕ್ಷಕ-ಉಪನ್ಯಾಸಕರ ಸಂಘಟನೆಗಳು ಸ್ಥಾಪಿಸಿ, ಅದರ ಮುಖಾಂತರ ಹೈದ್ರಾಬಾದ್ ಕರ್ನಾಟಕದಲ್ಲಿ ವಿದ್ಯಾರ್ಥಿಗಳ ನಿರುದ್ಯೋಗಿ ಪದವಿದರರ ಮತ್ತು ಶಿಕ್ಷಕ-ಉಪನ್ಯಾಸಕರ ಸಮಸ್ಯೆಗಳ ಪೂರೈಕೆಗಾಗಿ ಸತತವಾಗಿ ವಿವಿಧ ಹೋರಾಟ ಮಾಡಿದೆ. ನನ್ನ ವ್ಯಕ್ತಿತ್ವವನ್ನು ಗುರುತಿಸಿ 2004 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸದಸ್ಯನಾಗಿ ಮಾಡುವ ಕುರಿತು ಭರವಸೆ ಸಿಕ್ಕರೂ ಸಹ ಅದಾಗಲಿಲ್ಲ. ನನ್ನ ಹೋರಾಟ ಹಾಗೆ ಮುಂದುವರೆಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಜನಪರ ಕೆಲಸಗಳ ಬಗ್ಗೆ ಈ ಭಾಗದ ಜನರಿಗೆ ಮುಟ್ಟಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಅವರು ವಿವರಿಸಿದರು.
2014ರಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ವಿಧಾನ ಪರಿಷತ್ ಮತಕ್ಷೇತ್ರಕ್ಕೆ ಅಭ್ಯರ್ಥಿ ಮಾಡಿದಾಗ 10 ವರ್ಷ ಸೇವಾವಧಿಗೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತು ಸೋತೆ. ಆದಾಗ್ಯೂ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡ ನನಗೆ ರಾಜ್ಯ ಜೆಡಿ(ಎಸ್) ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮಾಡಿದ ಜನಪರ ಕೆಲಸಗಳ ಬಗ್ಗೆ ಈ ಭಾಗದಲ್ಲಿ ಲಕ್ಷಾವಧಿ ಕರಪತ್ರ ಮುದ್ರಿಸಿ ಮನೆ ಮನೆಗೆ, ಶಾಲಾ-ಕಾಲೇಜುಗಳಿಗೆ ವಿಶೇಷವಾಗಿ ಶಿಕ್ಷಕ ಸಮುದಾಯಕ್ಕೆ ಭೆಟ್ಟಿಯಾಗಿ ತಿಳಿಸುವುದರ ಜೊತೆಗೆ 2018ರಲ್ಲಿ ಸರಕಾರ ಬಂದಾಗ ರೈತರ ಸಾಲ ಮನ್ನಾ ಮಾಡಿದ ಪ್ರಯುಕ್ತ 700 ಕಿ,ಮೀ ದೂರದಲ್ಲಿರುವ ನಮ್ಮೂರಿನ ಗಾರಂಪಳ್ಳಿಯಿಂದ 101 ಜನರನ್ನು ಬೆಂಗಳೂರಿಗೆ ಕರೆತಂದು ಕುಮಾರಸ್ವಾಮಿ ಮತ್ತು ದೇವೆಗೌಡರಿಗೆ ಸನ್ಮಾನಿಸುವ ಮೂಲಕ ಸರ್ಕಾರವನ್ನು ಅಭಿನಂದಿಸಿದೆ ಎಂದು ಅವರು ಹೇಳಿದರು.
ಸರ್ಕಾರ ಬಂದ ಮೇಲೆ ಯಾವದೇ ಸ್ಥಾನಮಾನ ಕೇಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಶಿಕ್ಷಕ-ಉಪನ್ಯಾಸಕ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿರುವೆ. 2020ರ ಜೂನ್‍ನಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸದೇ ಬೇರೆಯವರ ಹೆಸರನ್ನು ಪ್ರಕಟಿಸಿರುವುದು ತುಂಬಾ ನೋವು ತಂದಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2020ರ ಜೂನ್‍ನಲ್ಲಿ ವಿಧಾನಸಭೆಯಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ಮಾಡಬೇಕೆಂದು ಕೋರಿದರೂ ಸಹ ಅವಕಾಶ ಕೊಡಲಿಲ್ಲ. ಹೀಗಾಗಿ ಪಕ್ಷವನ್ನು ತೊರೆದಿರುವುದಾಗಿ ಹೇಳಿದ ಅವರು, ಮುಂದಿನ ರಾಜಕೀಯ ನಿರ್ಧಾರವನ್ನು ಎರಡ್ಮೂರು ದಿನಗಳಲ್ಲಿ ಬೆಂಬಲಿಗರೊಂದಿಗೆ ಚರ್ಚಿಸಿ ಕೈಗೊಳ್ಳುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here