ಶಾಲಾ-ಕಾಲೇಜು, ಚಿತ್ರಮಂದಿರ ಆರಂಭಕ್ಕೆ ಪರ-ವಿರೋಧ

0
167

ಬೆಂಗಳೂರು. ಅ.4- ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿರುವ ನಡುವೆಯೇ ಚಿತ್ರಮಂದಿರಗಳ ಆರಂಭ ಮತ್ತು ಶಾಲಾ
ಕಾಲೇಜುಗಳಿಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬಹುತೇಕ ಮಂದಿ ಶಾಲಾ-ಕಾಲೇಜು ಚಿತ್ರಮಂದಿರ ಆರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸೋಂಕು ಹೆಚ್ಚಾಗುತ್ತಿರುವ ಸಮಯದಲ್ಲಿ ಅನುಮತಿ ನೀಡುವ ಅಗತ್ಯ ಇರಲಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ.
ದೇಶದಲ್ಲಿ ೬೫ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ರಾಜ್ಯದಲ್ಲಿ ಸರಿಸುಮಾರು ೬ ಲಕ್ಷಕ್ಕೂ ಅಧಿಕ ಸೋಂಕು ಕಾಣಿಸಿಕೊಂಡಿದೆ.ಇಂತಹ ಸಮಯದಲ್ಲಿ ಅನ್ ಲಾಕ್ -೫ ಮಾರ್ಗಸೂಚಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ ೧೫ ರಿಂದ ಶೇ ೫೦ ರಷ್ಟು ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ಆರಂಭ ಮತ್ತು ಶಾಲಾ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದೆ.
ಸರಿಸುಮಾರು ಏಳು ತಿಂಗಳ ಬಳಿಕ ಶಾಲಾ ಕಾಲೇಜುಗಳು ಮತ್ತು ಚಿತ್ರಮಂದಿರಗಳು ಆರಂಭವಾಗುತ್ತಿದ್ದರೆ ಜನರು ಚಿತ್ರ ಮಂದಿರಗಳಿಗೆ ತೆರಳಲು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ.
ಕೆಲವರು ಚಿತ್ರಮಂದಿರಕ್ಕೆ ತೆರಳುವುದಾಗಿ ಹೇಳಿದ್ದಾರೆ, ಬಹುತೇಕರು ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ಇಂತಹ ಸಮಯದಲ್ಲಿ ಅಪಾಯವನ್ನು ಎದುರುಹಾಕಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಬಹುತೇಕ ಪೋಷಕರು ಕೂಡ ತಾವು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಈಗ ಆನ್ಲೈನ್ನಲ್ಲಿ ತರಗತಿಗಳು ನಡೆಯುತ್ತಿವೆ ಅದನ್ನು ಇನ್ನೂ ಸ್ವಲ್ಪ ದಿನ ಮುಂದುವರೆಸಿ ಸೋಂಕು ಕಡಿಮೆಯಾದ ಬಳಿಕ ಶಾಲೆ ಆರಂಭಿಸಲು ಎಂದು ಒತ್ತಾಯಿಸಿದ್ದಾರೆ, ಇನ್ನು ಕೆಲವರು ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ ೯ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ೪೦೦೦ ಪ್ರತಿದಿನ ಸೋಂಕು ಕಾಣಿಸಿಕೊಳ್ಳುತ್ತಿದೆ ಅದರಲ್ಲೂ ರಾಜ್ಯದ ೯ ಜಿಲ್ಲೆಗಳಲ್ಲಿ ಪ್ರತಿನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಬಹಳ ದಿನಗಳ ನಂತರ ಚಿತ್ರಮಂದಿರಗಳು ತೆರೆಯುತ್ತಿದ್ದರು ಪ್ರೇಕ್ಷಕರು ಹಾಗೂ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಲು ಹಿಂದುಮುಂದು ನೋಡುವ ವಾತಾವರಣ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here