ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡರೂ ಮೇಲ್ಮನೆಯಲ್ಲಿ ತಡೆ

0
53

ಬೆಂಗಳೂರು, ಸೆ.27- ರೈತರ ವಿರೋಧಕ್ಕೆ ಕಾರಣವಾಗಿದ್ದ ಭೂ ಸುಧಾರಣೆ, ಎಪಿಎಂಸಿ ಮತ್ತು ಕೈಗಾರಿಕಾ ತಿದ್ದುಪಡಿ ಮಸೂದೆಗಳನ್ನು ವಿಧಾನ ಪರಿಷತ್‍ನಲ್ಲಿ ಅಂಗೀಕಾರಗೊಳ್ಳದಂತೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಜೊತೆಗೆ ಭೂ ಸುಧಾರಣೆ ಹಾಗೂ ಕೈಗಾರಿಕಾ ತಿದ್ದುಪಡಿ ಮಸೂದೆಗಳಿಗೆ ತಿದ್ದುಪಡಿ ತರಲಾಗಿತ್ತು. ಈ ಕಾಯ್ದೆಗಳನ್ನು ವಿರೋಧಿಸಿ  ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ.

ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಕಳೆದ ಆರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ಆನಂದರಾವ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಹೋರಾಟ ನಡೆಸುತ್ತಿವೆ. ಶುಕ್ರವಾರ ರಾಜ್ಯದ್ಯಂತ ಹೆದ್ದಾರಿ ತಡೆ ಬೃಹತ್ ಪ್ರತಿಭಟನೆ ನಡೆಸಿದ್ದವು. ಸೋಮವಾರ ಕರ್ನಾಟಕ ಬಂದ್‍ಗೂ ಕರೆ ನೀಡಲಾಗಿದೆ.

ಈ ಮೂರು ಮಸೂದೆಗಳು ಭಾರೀ ವಿರೋಧಕ್ಕೆ ಗುರಿಯಾಗಿದ್ದವು. ವಿಧಾನಸಭೆಯಲ್ಲಿ ಸಂಖ್ಯಾಬಲ ಹೊಂದಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಸೂದೆಗಳಿಗೆ ಧ್ವನಿಮತದ ಅಂಗೀಕಾರ ಪಡೆದುಕೊಂಡಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಮೇಲ್ನೋಟಕ್ಕೆ ವಿರೋಧ ಮಾಡಿದವಾದರೂ ಅಂಗೀಕಾರದ ವೇಳೆ ತಡೆಯುವ ಪ್ರಾಮಾಣಿಕ ಪ್ರಯತ್ನವೇನು ಮಾಡಲಿಲ್ಲ.

ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು, ಎಂಬ ನಾಟಕೀಯ ಪರಿಸ್ಥಿತ್ನಿ ನಿರ್ಮಿಸಿದ್ದವು. ವಿಧೇಯಕಗಳನ್ನು ವಿರೋಸಿ ಚರ್ಚೆ ಮಾಡುವಾಗಲೂ ಅಡ್ಡ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ನಿರೀಕ್ಷೆಯಂತೆ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದುಕೊಂಡ ಸರ್ಕಾರ ಮೂರು ಮಸೂದೆಗಳನ್ನು ವಿಧಾನ ಪರಿಷತ್‍ಗೆ ತೆಗೆದುಕೊಂಡು ಹೋಗಿತ್ತು.

ಯಾವುದೇ ತಿದ್ದುಪಡಿ ಮಸೂದೆಗಳು ವಿಧಾನಸಭೆ ಮತ್ತು ಪರಿಷತ್ ಎರಡೂ ಕಡೆ ಅಂಗೀಕಾರಗೊಂಡರೆ ಮಾತ್ರ ಕಾಯ್ದೆಗಳಾಗಿ ಚಾಲ್ತಿಗೆ ಬರುತ್ತವೆ. ಈ ಮೊದಲು ರಾಜ್ಯ ಸರ್ಕಾರ ಮೂರು ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತಂದಿತ್ತು. ಸುಗ್ರೀವಾಜ್ಞೆ ಜಾರಿಯಾದ ಬಳಿಕ ಆರು ತಿಂಗಳಲ್ಲಿ ಶಾಸನ ಸಭೆಗಳಲ್ಲಿ ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಬೇಕಿದೆ.
ಹಾಗಾಗಿ ಯಥಾವತ್ತು ಮಸೂದೆಗಳನ್ನು ವಿಧಾನ ಪರಿಷತ್‍ನಲ್ಲೂ ಅಂಗೀಕಾರ ಪಡೆದುಕೊಳ್ಳಲು ಪ್ರಯತ್ನಿಸಿತ್ತು.

ಕೈಗಾರಿಕಾ ವಿವಾದಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಇನ್ನೇನು ವಿಧಾನ ಪರಿಷತ್‍ನಲ್ಲೂ ಅಂಗೀಕಾರಗೊಂಡೆ ಬಿಡುತ್ತೆ. ತೀವ್ರ ವಿರೋಧದ ನಡುವೆಯೂ ಮಸೂದೆಗಳಿಗೆ ಅಂಗೀಕಾರ ಪಡೆದು ನಾವು ಗೆದ್ದೇ ಬಿಡುತ್ತೇವೆ ಎಂದು ಬೀಗುವ ಹಂತದಲ್ಲಿ ಸರ್ಕಾರದ ಸಚಿವರಿದ್ದರು.

ಇತತಿ ವಿಧಾನಸಭೆಯಲ್ಲಿ ರಾತ್ರಿ 11 ಗಂಟೆಯವರೆಗೂ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆದಿತ್ತು. ಧ್ವನಿಮತದ ಮೂಲಕ ಅವಿಶ್ವಾಸ ನಿರ್ಣಯ ತಿರಸ್ಕಾರವಾಗಿತ್ತು. ಆ ಗೆಲುವಿನ ಖುಷಿಯಲ್ಲಿ ಮೈಮರೆತಿದ್ದ ಸಚಿವರು ಅದೇ ಹುಮ್ಮಸ್ಸಿನಲ್ಲಿ ವಿಧಾನ ಪರಿಷತ್‍ನಲ್ಲಿ ಹೆಜ್ಜೆ ಹಾಕಿದ್ದರು.

ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸಂಖ್ಯಾಬಲ ಸಭಾಪತಿ ಸೇರಿ 29, ಬಿಜೆಪಿ 27, ಜೆಡಿಎಸ್ 14, ಒಂದು ಪಕ್ಷೇತರರು, ನಾಲ್ಕು ಸ್ಥಾನ ಖಾಲಿ ಇವೆ. ವಿಧಾನ ಪರಿಷತ್‍ನಲ್ಲಿ ಬೇರೆ ಬೇರೆ ಚರ್ಚೆಗಳಾಗಿ ಮಸೂದೆಗಳನ್ನು ಕೈಗೆತ್ತಿಕೊಳ್ಳುವಾಗ ರಾತ್ರಿ ಊಟದ ಸಮಯ ಮೀರಿತ್ತು. ಕಾಂಗ್ರೆಸ್‍ನ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಸಿ.ಎಂ.ನಿಂಗಪ್ಪ, ಬಸವರಾಜ ಪಾಟೀಲ್ ಇಟಗಿ ಸೇರಿ ನಾಲ್ವರು ಮನೆಗೆ ಹೋಗಿದ್ದರು. ಕಲಾಪದ ಒಳಗೆ ಕುಳಿತಿದ್ದವರ ಸಂಖ್ಯೆ ಕೂಡ ಬೆರಳೆಣಿಕೆ ಯಷ್ಟಿತ್ತು.

ಹಾಗಾಗಿ ಸಚಿವರು ಗೆದ್ದೆ ಬಿಡುವ ಹುಮ್ಮಸ್ಸಿನಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ಕೈಗಾರಿಕಾ ವಿವಾದಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಈ ಮೊದಲು 100ಕ್ಕಿಂತ ಹೆಚ್ಚಿನ ನೌಕರರಿರುವ ಕಾರ್ಖಾನೆ ಅಥವಾ ಉದ್ಯಮಗಳನ್ನು ಮುಚ್ಚಬೇಕಾದರೆ ಸರ್ಕಾರದ ಅನುಮತಿ ಬೇಕಿತ್ತು.

ಹೊಸ ತಿದ್ದುಪಡಿಯಲ್ಲಿ 100 ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗಿತ್ತು. ಈ ಮಸೂದೆ ಕಾರ್ಮಿಕ ವಿರೋಯಾಗಿದೆ ಎಂಬ ಚರ್ಚೆಗಳು ನಡೆದಿವೆ. ವಿಧಾನ ಪರಿಷತ್‍ನಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಮಸೂದೆಯನ್ನು ಅಂಗೀಕರಿಸುವ ವೇಳೆಗೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಧ್ವನಿಮತದ ಬದಲಾಗಿ ಮತಕ್ಕೆ ಹಾಕುವಂತೆ ಬೇಡಿಕೆ ಮುಂದಿಟ್ಟರು.

ಆ ವೇಳೆಗೆ ವಿಧಾನ ಪರಿಷತ್‍ನ ಸಚೇತಕರಾಗಿದ್ದ ಎಂ.ನಾರಾಯಣಸ್ವಾಮಿ ಅವರು ಸದನದಿಂದ ಹೊರಗಿದ್ದ ಸದಸ್ಯರನ್ನು ಮತ್ತು ಮನೆಗೆ ಹೋಗಿದ್ದವರನ್ನು ವಾಪಾಸ್ ಕರೆಸಿದ್ದರು. ಸಭಾಪತಿ ಪ್ರತಿಪಕ್ಷದ ಬೇಡಿಕೆಯಂತೆ ಮಸೂದೆಯನ್ನು ಮತಕ್ಕೆ ಹಾಕಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್‍ನ 22 ಸದಸ್ಯರು ಕಲಾಪಕ್ಕೆ ಹಾಜರಾದರು. ಬಿಜೆಪಿಯ 18, ಜೆಡಿಎಸ್‍ನ 6 ಸದಸ್ಯರ ಹಾಜರಾತಿ ಇತುತಿ. ಕೈಗಾರಿಕಾ ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆಯ ಪರವಾಗಿ 14, ವಿರುದ್ಧವಾಗಿ 28 ಮತಗಳು ಚಲಾವಣೆಗೊಂಡವು. ಜೆಡಿಎಸ್ ಕಾಂಗ್ರೆಸ್ ಸದಸ್ಯರು ಒಂದಾಗಿದ್ದರಿಂದ ಮಸೂದೆ ಬಿದ್ದು ಹೋಯಿತು.

ಆಗ ಎಚ್ಚೇತ್ತುಕೊಂಡ ಸಚಿವ ಆರ್.ಅಶೋಕ್ ಭೂ ಸುಧಾರಣಾ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಸ್ ಆರಂಭಿಸಿದರು. ಪ್ರತಿಪಕ್ಷದ ಸಾಲಿನಲ್ಲಿ ಬಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸದಸ್ಯರೊಂದಿಗೆ ಮಾತುಕತೆ ನಡೆಸಲಾರಂಭಿಸಿದರು.
ಜೆಡಿಎಸ್‍ನ ಕೆಲ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸುವ ಮಾತನಾಡಿದರು. ಜೆಡಿಎಸ್, ಬಿಜೆಪಿ ಒಟ್ಟಾದರೆ 24 ಮತಗಳು ಒಟ್ಟುಗೂಡುವ ಸಾಧ್ಯತೆ ಇತ್ತು. ಮರಿತಿಬ್ಬೆಗೌಡ ಹಾಗೂ ಒಂದಿಬ್ಬರು ಮಸೂದೆಗಳಿಗೆ ನಮ್ಮ ಆತ್ಮಸಾಕ್ಷಿ ಒಪ್ಪುವುದಿಲ್ಲ. ನಾವು ವಿರೋಧವಾಗಿಯೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದರು.

ಈಗಾಗಲೇ ಕೈಗಾರಿಕಾ ಮಸೂದೆ ಸೋತಿದ್ದರಿಂದ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಕೈನಲ್ಲಿದ್ದ ಕಡತವನ್ನು ನೆಲಕ್ಕೆ ಬಡಿದ್ದು ಸಿಟ್ಟಿನಿಂದ ದುಮುಗುಡುತ್ತಿದ್ದರು. ಬಿಜೆಪಿ ಸದಸ್ಯರು ಮತ್ತು ಸಚಿವರಲ್ಲಿ ಅನಿರೀಕ್ಷಿತ ಸೋಲಿನಿಂದ ಸಿಟ್ಟು ಕುದಿಯುತ್ತಿತ್ತು. ಮಧ್ಯರಾತ್ರಿ ಒಂದು ಗಂಟೆಯಾದರೂ ಚರ್ಚೆ ಮಾಡುತತಿಲೇ ಇದ್ದೀರಾ ಎಂದು ಸಿಟ್ಟಾಗಿ ಪ್ರತಿಪಕ್ಷಗಳ ಮೇಲೆ ಹರಿಹಾಯುತಿತಿದ್ದರು. ವಾದ ವಿವಾದಗಳು ನಡೆದೇ ಇತುತಿ.

ಕೋವಿಡ್ ಸಂಕಷ್ಟ ಚರ್ಚೆಗೆ ಅವೇಶನ ಕರೆದು, ಆ ವಿಷಯವನ್ನು ಬದಿಗಿರಿಸಿ 36 ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಈ ಮೂರು ಮಸೂದೆಗಳು ಜನ ವಿರೋಯಾಗಿವೆ. ಇವನ್ನು ಚರ್ಚಿಸದೆ ಅಂಗೀಕರಿಸಲು ನಾವು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಈ ಕುರಿತಂತೆ ಚರ್ಚೆ, ಗಲಾಟೆ ಜೋರಾದಾಗ ಸದನ ಅಸ್ತ್ಯವ್ಯಸ್ಥವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಠಾವಗೆ ಮುಂದೂಡಿದರು. ಉಪಾವೇಶನದ ಸಲುವಾಗಿ ರಾಷ್ಟ್ರಗೀತೆ ಹಾಕಲಾಯಿತು.

ಎಲ್ಲಾ ಮಸೂದೆಗಳು ಅಂಗೀಕರಿಸಿಗೊಂಡೆ ಬಿಡುವ ಹುಮ್ಮಸ್ಸಿನಲ್ಲಿದ್ದ ಸರ್ಕಾರಕ್ಕೆ ಈ ಅನಿರೀಕ್ಷಿತ ಬೆಳವಣಿಗೆ ಮರ್ಮಾಘಾತ ನೀಡಿದೆ. ಮೂರು ಮಸೂದೆಗಳು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದವು. ಅವನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿತ್ತು. ಆದರೆ ಬಿಜೆಪಿ ಸಂಖ್ಯಾಬಲ ವಿಧಾನ ಪರಿಷತ್‍ನಲ್ಲಿ ಕಡಿಮೆ ಇದೆ. ಅಲ್ಲಿ ಮಸೂದೆ ಅಂಗೀಕಾರಗೊಳ್ಳಲು ಬಿಡಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಐಕ್ಯ ಹೋರಾಟ ಸಮಿತಿಯವರಿಗೆ ಭರವಸೆ ನೀಡಿದ್ದರು, ಅದರಂತೆ ನಡೆದುಕೊಂಡಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಮಸೂದೆಗಳು ಅಂಗೀಕಾರಗೊಳ್ಳದೆ ಇರುವುದರಿಂದ ಆರು ತಿಂಗಳ ಸುಗ್ರೀವಾಜ್ಞೆ ಅವ ಬಳಿಕ ನಿರ್ಜಿವಗೊಳ್ಳಲಿವೆ. ಈಗಾಗಲೇ ಸುಗ್ರೀವಾಜ್ಞೆ ಜಾರಿಯಾಗಿ ಮೂರ್ನಾಲ್ಕು ತಿಂಗಳು ಕಳೆದಿವೆ. ಮುಂದಿನ ಅಧಿವೇಶನ ಇನ್ನೆರಡು ತಿಂಗಳ ಒಳಗೆ ನಡೆಯುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಮುಂದಿನ ಅಧಿವೇಶನಕ್ಕೆ ಹೊಸದಾಗಿ ಮಸೂದೆ ಮಂಡಿಸುವ ಅಥವಾ ಇನ್ನೊಮ್ಮೆ ಸುಗ್ರೀವಾಜ್ಞೆಯ ಮೊರೆ ಹೋಗುವ ಅನಿವಾರ್ಯ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿದೆ.

LEAVE A REPLY

Please enter your comment!
Please enter your name here