‘ಗುಂಡಿಕ್ಕಿ ಕೊಲ್ಲಿ’ ಎಂದು ಪ್ರಚೊದನೆ ನೀಡಿರುವ ಬಿಜೆಪಿ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅರೆಸ್ಟ್ ಮಾಡಿ : ಸಿದ್ದರಾಮಯ್ಯ

0
218

ಬೆಂಗಳೂರು, ಏ.8- ರಾಜಕೀಯ ಷಡ್ಯಂತ್ರದಿಂದ ಒಂದು ಸಮುದಾಯವನ್ನು ಗುರಿಯಾಸಿ ಹೇಳಿಕೆ ನೀಡಿರುವ ಮತ್ತು ಗುಂಡಿಕ್ಕಿಕೊಲ್ಲಿ ಎಂದು ಪ್ರಚೋದನಾಕಾರಿ ಮಾತನಾಡಿರುವ ಬಿಜೆಪಿಯ ಇಬ್ಬರು ಶಾಸಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಕೂಡಲೇ ಬಂಧಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ವಿಡಿಯೋ ಸಂದೇಶದ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹ ಮಾಡಿರುವ ಅವರು, ಹೊನ್ನಾಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸನ ರಚಿಸುವ ಶಾಸನ ಸಭೆಗೆ ಬಂದಿದ್ದಾರೆ. ಕೊರೊನಾ ಹರಡಲು ಒಂದು ಸಮುದಾಯವೇ ಕಾರಣ ಎಂದು ಬಿಂಬಿಸುವ ದುರುದ್ದೇಶದಿಂದ ನಿನ್ನೆ ಹೇಳಿಕೆ ನೀಡಿದ್ದಾರೆ.

ಇದು ರಾಜಕೀಯ ಷಡ್ಯಂತ್ರವಾಗಿದೆ. ಗುಂಡಿಕ್ಕಿ ಕೊಲ್ಲಿ ಎಂದು ಹೇಳುವುದು ಪ್ರಚೋದನಾಕಾರಿ ಹೇಳಿಕೆ. ಕಾನೂನಿನಡಿ ಕ್ರಿಮಿನಲ್ ಅಪರಾಧವಾಗುತ್ತದೆ. ಕೂಡಲೇ ಇಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೇಣುಕಾಚಾರ್ಯ ಮುಖಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ. ಅವರ ಹೇಳಿಕೆ ಮುಖ್ಯಮಂತ್ರಿ ಹೇಳಿಕೆ ಎಂದು ಅರ್ಥೈಸಬೇಕಾಗುತ್ತದೆ. ಕೂಡಲೇ ಆ ಹುದ್ದೆಯಿಂದ ರೇಣುಕಾಚಾರ್ಯರನ್ನು ವಜಾಗೊಳಿಸಬೇಕು. ಈ ಇಬ್ಬರು ಶಾಸಕರಾಗಿರಲು ನಾಲಾಯಕ್ ಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಪೂರ್ವ ಮುಂಗಾರು ಪ್ರಾರಂಭವಾಗಿದೆ. ಇನ್ನೂ ಮುರ್ನಾಲ್ಕು ದಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೆಲವು ಕಡೆ ಗಾಳಿ ಮಳೆ ಜೋರಾಗಿ ಭತ್ತ, ಬಾಳೆ, ಕಬ್ಬು ನೆಲಕ್ಕಚ್ಚಿವೆ ಎಂದು ರೈತರು ಹೇಳಿದ್ದಾರೆ.

ಮುಂದೆಯೂ ಮಳೆಯಾಗುತ್ತದೆ. ಮೈಸೂರು ಸೇರಿ ಕೆಲವು ಕಡೆ ಆಲಿಕಲ್ಲು ಮಳೆಯಾಗಿದೆ. ಇದನ್ನ ಸರ್ವೆ ಮಾಡಿಸಿ ಎಷ್ಟು ಮಳೆಯಾಗಿದೆ ಎಂದು ವರದಿ ಪಡೆದು ಸೂಕ್ತ ಪರಿಹಾರ ಕೊಡಬೇಕು.

ಲಾಕ್ ಡೌನ್ 14ಕ್ಕೆ ಮುಗಿಯುವ ನಿರೀಕ್ಷೆ ಇದೆ. ಒಂದು ವೇಳೆ ವಾರ ಹತ್ತು ದಿನ ಮತ್ತೆ ಮುಂದುವರೆದರೆ ಜನ ವಿರೋಧ ಮಾಡಬಾರದು ಸಹಕಾರ ನೀಡಬೇಕು. ನಾವು ವಿಪಕ್ಷವಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here