ದೆಹಲಿ ಹಿಂಸಾಚಾರದಲ್ಲಿ ಪ್ರಾಣ ಬಿಟ್ಟ ಪ್ರತಿಯೊಬ್ಬರ ಸಾವಿನ ಹಿಂದೆಯೂ ಕರಳು ಹಿಂಡುವಂತಾ ಕರುಣಾಜನಕ ಕಥೆಗಳು.

0
220

ನವದೆಹಲಿ, ಫೆಬ್ರವರಿ.27: ದೆಹಲಿ ಹಿಂಸಾಚಾರದಲ್ಲಿ ರಾಷ್ಟ್ರ ರಾಜಧಾನಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರಕ್ಕೆ ಹೊತ್ತಿ ಉರಿದಿದೆ. ಸಿಎಎ ಪರ ಮತ್ತು ಸಿಎಎ ವಿರೋಧಿ ಹೋರಾಟದಲ್ಲಿ ಅಮಾಯಕ ಜೀವಗಳು ಬಲಿಯಾಗಿವೆ. ಇದುವರೆಗೂ 34 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗೆ ಪ್ರಾಣ ಬಿಟ್ಟ ಪ್ರತಿಯೊಬ್ಬರ ಸಾವಿನ ಹಿಂದೆಯೂ ಕರಳು ಹಿಂಡುವಂತಾ ಕರುಣಾಜನಕ ಕಥೆಯಿದೆ.

ನೊಂದವರ ನೋವಿನ ಕಥೆಯ ಬಗ್ಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ವಿಸ್ತೃತ ವರದಿ ಮಾಡಿದೆ.

ಫೆಬ್ರವರಿ.14ರ ಪ್ರೇಮಿಗಳ ದಿನವೇ ವೈವಾಹಿಕ ಬದುಕಿಗೆ ಕಾಲಿಟ್ಟ ಯುವತಿಯ ಬದುಕಿಗೆ ಬರಸಿಡಿಲು ಬಡೆದಿದೆ. ಕೆಲಸ ಮುಗಿಸಿ ಮನೆಗೆ ಹೊರಟ ಪತಿ ನಡುಬೀದಿಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಮದುವೆಯಾಗಿ 13 ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕೆಲಸ ಮುಗಿಸಿ ಮನೆಗೆ ಹೊರಟವನಿಗೆ ಚಾಕು ಇರಿತ: ಫೆಬ್ರವರಿ.14ರಂದಷ್ಟೇ ಈಶಾನ್ಯ ದೆಹಲಿಯ ಮುಸ್ತಫಾಬಾದ್ ನಿವಾಸಿ ಆಶಿಕ್ ಹುಸೇನ್ ಹಾಗೂ ತಸ್ಲೀಮ್ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಫೆಬ್ರವರಿ.24ರಂದು ಕೆಲಸ ಮುಗಿಸಿಕೊಂಡು ಸಂಜೆ ಬೇಗ ಮನೆ ಕಡೆಗೆ ಹೊರಟಿದ್ದ ಆಶಿಕ್ ಹುಸೇನ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆಶಿಕ್ ಕತ್ತಿಗೆ ಚಾಕುವಿನಿಂದ ಇರಿದಿದ್ದು, ದೇಹದ ಐದಾರು ಕಡೆ ಗುಂಡೇಟು ಬಿದ್ದಿತ್ತು. ಗಾಯಗೊಂಡ ಆಶಿಕ್ ದೆಹಲಿಯ ಅಲ್ ಹಿಂದ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಪತಿಯ ಕಳೆದುಕೊಂಡು ಕಣ್ಣೀರಿಡುತ್ತಿರುವ ಪತ್ನಿ ಕೆಲಸಕ್ಕೆ ತೆರಳಿದ ಪತಿ ಮನೆಗೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಕುಳಿತ ತಸ್ಲೀಮ್ ಎದುರು ಪತಿ ಹೆಣವಾಗಿ ಬಂದಿದ್ದಾನೆ. ಮದುವೆಯಾಗಿ 13 ದಿನಕ್ಕೆ ಪತಿಯನ್ನು ಕಳೆದುಕೊಂಡ ಪತ್ನಿ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಮದುವೆಯಾಗಿ ಎರಡು ತಿಂಗಳಿನಲ್ಲೇ ಪತಿ ಸಾವು:  ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟ 24 ವರ್ಷದ ಮೊಹಸಿನ್ ಅಲಿ ಸಂಬಂಧಿಕರ ಆಕ್ರಂದನ ಜಿಟಿಬಿ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿತ್ತು. ಕಳೆದ ಫೆಬ್ರವರಿ.25ರಂದು ಮನೆಯಿಂದ ಹೊರ ಬಂದಿದ್ದ ಹಾಪುರ್ ನಿವಾಸಿ ಮೊಹಸಿನ್ ಹೆಣವಾಗಿದ್ದನ್ನು ಕಂಡು ತಾಯಿ ಕಣ್ಣೀರು ಹಾಕಿದರು. ಇನ್ನೊಂದೆಡೆ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದ ಪತ್ನಿ ಪತಿಯನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುವಂತಾಯಿತು.

ತಲೆಯನ್ನು ಡ್ರಿಲ್ ಮಿಷನ್ ನಿಂದ ಕೊರೆದಿರುವ ಘಟನೆ: ದೆಹಲಿ ಹಿಂಸಾಚಾರದಲ್ಲಿ ಪ್ರಜ್ಞೆ ಕಳೆದುಕೊಂಡ ಸಹೋದರ ಇನ್ನೊಂದೆಡೆ 19 ವರ್ಷದ ವಿವೇಕ್ ಚೌಧರಿ ಎಂಬುವವರ ತಲೆಯನ್ನು ಡ್ರಿಲ್ ಮಿಷನ್ ನಿಂದ ಕೊರೆದಿರುವ ಘಟನೆ ನಡೆದಿದೆ. ಇದರಿಂದ ಅಸ್ವಸ್ಥಗೊಂಡ ಯುವಕನಿಗೆ ಖಾಸಗಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನೀಡಿದ್ದು. ಪ್ರಜ್ಞೆ ಕಳೆದುಕೊಂಡು ಮಲಗಿರುವ ಸಹೋದರನ ಪಕ್ಕದಲ್ಲಿ ಸಹೋದರಿ ಸಬಿತಾ ಕಣ್ಣೀರು ಹಾಕುತ್ತಾ ಕುಳಿತಿರುವ ದೃಶ್ಯ ಮನ ಕಲುಕುವಂತಿದೆ.

ಚಹಾ ಕುಡಿಯಲು ಹೊರ ಹೋದವನು ಮರಳಿ ಬರಲಿಲ್ಲ: ದೆಹಲಿಯ ಬ್ರಿಜಿಪುರ್ ಪ್ರದೇಶದಲ್ಲಿ ನೆಲೆಸಿರುವ 21 ವರ್ಷದ ಮೆಹ್ತಾಬ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಅಂದು ನಡೆದ ಘಟನೆಯ ಬಗ್ಗೆ ಮೃತ ಮೆಹ್ತಾಬ್ ಸಹೋದರಿ ವಿವರಿಸಿದ್ದಾರೆ. “ಮನೆಯವರು ಎಷ್ಟು ತಡೆದರೂ ಆತ ನಮ್ಮ ಮಾತು ಕೇಳಲಿಲ್ಲ. ಚಹಾ ಕುಡಿಯುವ ಆಸೆಗೆ ಹಾಲು ತರಲೆಂದು ಅವನು ಹೊರಗೆ ಹೋದನು. ಅದಾಗಿ ಕೆಲಹೊತ್ತಿನಲ್ಲಿಯೇ ನಮ್ಮ ಏರಿಯಾದಲ್ಲಿ ಹಿಂಸಾಚಾರ ಆರಂಭವಾಯಿತು. ನಮ್ಮ ಗಲ್ಲಿಯಲ್ಲಿನ ಗೇಟ್ ನ್ನು ಬಂದ್ ಮಾಡಲಾಯಿತು. ಅವನು ಮನೆಗೆ ವಾಪಸ್ ಬರಲು ಆಗಲಿಲ್ಲ. ಇದರ ಮಧ್ಯೆ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ, ಕೊಂದಿದ್ದಾರೆ” ಎಂದು ಸಹೋದರಿ ಯಾಸ್ಮಿನ್ ಆರೋಪಿಸಿದ್ದಾರೆ.

ಮಸೀದಿಗೆ ಹೋದ ಸಹೋದರ ವಾಪಸ್ ಬಂದಿದ್ದು ಹೆಣವಾಗಿ:  ಕಳೆದ ಫೆಬ್ರವರಿ.25ರಂದು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಜಾಕಿರ್ ಸೈಫ್ ಕೂಡಾ ಹಿಂಸಾಚಾರದಲ್ಲಿ ಪ್ರಾಣ ಬಿಟ್ಟಿದ್ದಾರೆ. “ಪ್ರಾರ್ಥನೆ ಮಾಡುವುದಕ್ಕಾಗಿ ಮಸೀದಿಗೆ ತೆರಳಿದ್ದ ಆತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾರೆ” ಎಂದು ಮೃತ ಜಾಕಿರ್ ಸಹೋದರಿ ಸಿತಾರಾ ದೂರಿದ್ದಾರೆ.

ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಇಬ್ಬರು ಸಾವು: ಲೋಕನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟವರನ್ನು ಮರೂಫ್ ಅಲಿ ಮತ್ತು ಅಮನ್ ಎಂದು ವೈದ್ಯರು ಗುರುತಿಸಿದ್ದಾರೆ. ಈ ಪೈಕಿ ಮರೂಫ್ ಅಲಿ ಭಜನ್ ಪುರ ನಿವಾಸಿ ಎಂದು ತಿಳಿದು ಬಂದಿದ್ದು, ಘೋಷಣೆಗಳನ್ನು ಕೂಗುತ್ತಾ ಬಂದ ಒಂದು ಗುಂಪು ದಿಢೀರನೇ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಮೃತನ ಸಹೋದರ ಫಿರೋಜ್ ಘಟನೆಯ ಬಗ್ಗೆ ತಿಳಿಸಿದ್ದಾರೆ.

ನಾಲ್ವರಿಗೆ ಆಸಿಡ್ ದಾಳಿಯಿಂದ ಗಂಭೀರ ಗಾಯ: ದೆಹಲಿ ಈಶಾನ್ಯ ಭಾಗದಲ್ಲಿ ಇರುವ ಶಿವವಿಹಾರ್ ಪ್ರದೇಶದಲ್ಲಿ ನಾಲ್ವರ ಮೇಲೆ ಆಸಿಡ್ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಅಂಗಡಿಗಳಿಗೆ ನುಗ್ಗಿ ದರೋಡೆ ನಡೆಸಿದ್ದಾರೆ. ಶಿವ ವಿಹಾರ್ ದ ಅಂಗಡಿಗೆ ನುಗ್ಗಿದ ಕೆಲವರು 52 ವರ್ಷದ ಮೊಹ್ದ್ ವಕೀಲ್ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. ಈ ವೇಳೆ ಜೊತೆಗಿದ್ದ 19 ವರ್ಷದ ಮಗಳು ಅನಮ್ ಎಂಬುವವರಿಗೂ ಸಣ್ಣಪುಟ್ಟ ಸುಟ್ಟ ಗಾಯವಾಗಿದೆ.

85ರ ವೃದ್ಧೆಯಿದ್ದ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ: ದೆಹಲಿಯ ಗಮ್ರಿ ಪ್ರದೇಶದಲ್ಲಿ ಮೊಹಮ್ಮದ್ ಸಯ್ಯದ್ ಸಲ್ಮಾನಿ ಎಂಬುವವರ 85 ವರ್ಷದ ತಾಯಿ ಅಕ್ಬರಿ, ಮನೆಯಿಂದ ಹೊರಬರಲಾಗದೇ ಪ್ರಾಣ ಬಿಟ್ಟಿದ್ದಾರೆ. ಮೂರು ಅಂತಸ್ತಿನ ಕಟ್ಟಡದ ಮೊದಲ ಎರಡು ಅಂತಸ್ತಿನಲ್ಲಿ ಸಲ್ಮಾನಿ ಗಾರ್ಮೆಂಟ್ಸ್ ನಡೆಸುತ್ತಿದ್ದಾರೆ. ಮೊನ್ನೆ ನಮ್ಮ ಏರಿಯಾಗೆ 100 ರಿಂದ 150 ಮಂದಿ ದಿಢೀರನೇ ನುಗ್ಗಿದ್ದು, ಮೊದಲ ಎರಡು ಅಂತಸ್ತಿನಲ್ಲಿದ್ದ ಗಾರ್ಮೆಂಟ್ಸ್ ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನನ್ನ ಪತ್ನಿ ಮತ್ತು ಮಕ್ಕಳು ಮನೆಯಿಂದ ಹೊರಗೆ ಓಡಿ ಬಂದರು. ಆದರೆ, 85 ವರ್ಷದ ತಾಯಿ ಮನೆಯಿಂದ ಹೊರ ಬರಲಾಗದಂತಾ ಸ್ಥಿತಿಯಲ್ಲಿದ್ದು, ಅಲ್ಲಿಯೇ ಪ್ರಾಣ ಬಿಟ್ಟರು ಎನ್ನುತ್ತಾರೆ ನೊಂದ ಮಗ ಸಲ್ಮಾನಿ.

ಜಿಟಿಬಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟವರ ಗುರುತು ಪತ್ತೆ: ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರನ್ನು ಗುರುತೇಜ್ ಬಹದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೂ 20ಕ್ಕೂ ಹೆಚ್ಚು ಮಂದಿ ಮೃತರ ಗುರುತು ಪತ್ತೆಯಾಗಿದೆ. ದೀಪಕ್ ಕುಮಾರ್(34), ಇಶಾಕ್ ಖಾನ್(24), ಮೊಹದ್ ಮುದಸ್ಸಿರ್(30), ವೀರ್ ಬಾನ್(50), ಮೊಹದ್ ಮುಬಾರಕ್ ಹುಸೇನ್(28), ಶಾನ್ ಮೊಹದ್(35), ಪರ್ವೇಜ್(48), ಜಾಕೀರ್(24), ಮೆಹ್ತಾಬ್(22), ಅಶಿಕ್(22), ರಾಹುಲ್ ಸೋಲಂಕಿ(22), ಶಾಹಿದ್(25), ಮೊಹದ್ ಫರ್ಕಾನ್(35), ರಾಹುಲ್ ಠಾಕೂರ್(23), ರತನ್ ಲಾಲ್(42), ಅಂಕಿತ್ ಶರ್ಮಾ(26), ಮೊಸಿನ್ ಅಲಿ(24), ವಿನೋದ್ ಕುಮಾರ್(50), ದಿಲ್ಬಾರ್ ಎಂದು ಗುರುತಿಸಲಾಗಿದೆ. ಇನ್ನು, ಲೋಕನಾಯಕ ಆಸ್ಪತ್ರೆಯಲ್ಲಿ ಮಹ್ರೂಫ್ ಅಲಿ(30), ಅಮನ್(17) ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here