ಅಮರಾಪುರ ಶಾಲೆ ಜಾಗೆ ಒತ್ತುವರಿ ಪ್ರಕರಣ ‘ನಾಯಕ ಸಮಾಜ ಕುಟುಂಬಕ್ಕೆ ಸರ್ಕಾರ ಜಾಗ ನೀಡಲಿ

0
247

ಸಿಂಧನೂರು.ಜ.28 – ಶಾಲಾ ಮಕ್ಕಳಿಗೆ ತೊಂದರೆಯಾಗುವದನ್ನು ನಾವು ಬಯಸುವದಿಲ್ಲ. ಕಾನೂನನ್ನು ನಾವು ಗೌರವಿಸುತ್ತೇವೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಮಾಡಲಿ. ತದನಂತರ ಸರ್ಕಾರದಿಂದ ನಮ್ಮ ಸಮಾಜದ ಕುಟುಂಬಗಳಿಗೆ ಜಾಗ ಗುರುತಿಸಿ ನೀಡಿದರೆ ಪ್ರಸ್ತುತ ಜಾಗದಲ್ಲಿ ಇರುವ ಗುಡಿಸಲು ಮತ್ತು ದನಗ ಶೆಡ್‌ನ್ನು ಸ್ವತಃ ನಾವೇ ತೆರವುಗೊಳಿಸಲು ನಾವೇ ಮುಂದಾಗುತ್ತೇವೆ ಎಂದು ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ವೆಂಕೋಬ ನಾಯಕ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಅಮರಾಪುರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಜಾಗದ ಒತ್ತುವರಿ ವಿಚಾರದಲ್ಲಿ ರಾಜಕೀಯ ಬೆರೆಸುವ ತಂತ್ರಗಾರಿಕೆ ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಮಸ್ಕಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೆಸರುಗಳನ್ನು ತಳುಕು ಹಾಕುವದು ಖಂಡನೀಯವಾಗಿದೆ ಎಂದರು.

ಶಾಲೆಯ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ ಅಲ್ಲಿನ ಎಸ್‌ಡಿಎಂಸಿ ಸದಸ್ಯರು, ಕೆಲ ಗ್ರಾಮದ ಪ್ರಮುಖರು ಸುದ್ದಿಗೋಷ್ಟಿ ನಡೆಸಿ ಇರ್ವರ ಹೆಸರು ಪ್ರಸ್ತಾಪಿಸಿದ್ದು ಸರಿಯಲ್ಲ. ಸಚಿವರು ಒಂದು ಜಾತಿಗೆ ಸೀಮಿತವಾಗಿಲ್ಲ. ಅಮರಾಪುರ ಜಾಗದ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಭಾಸ್ಕರ್‌ರಾವ್ ಅವರು ಕಳೆದ ಡಿಸೆಂಬರ್-2019ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಷಯದ ಕುರಿತು ಪರಿಶೀಲನೆ ನಡೆಸಿ, ಸಂಬಂಧಿಸಿದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆದೇಶಿಸಿದ್ದರು. ಮರುದಿನವೇ ಕಂದಾಯ ಅಧಿಕಾರಿಗಳ ಆಪ್ತ ಕಾರ್ಯದರ್ಶಿ ಸಿಂಧನೂರಿನ ತಹಸೀಲ್ದಾರರಿಗೆ ವಿಷಯದ ಕುರಿತು ದೂರವಾಣಿ ಕರೆ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿದ್ದರು ಎಂದು ವೆಂಕೋಬ ನಾಯಕ ತಿಳಿಸಿದರು.
ಶಾಲೆಯ ಜಾಗಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದ ಮುಗ್ಧ ಕುಟುಂಬ ಸುಮಾರು 20 ವರ್ಷಗಳಿಂದಲೂ ಅಲ್ಲೇ ವಾಸವಾಗಿದ್ದಾರೆ ಎಂದು ಗ್ರಾ.ಪಂ. ದೃಢೀಕರಣ ಪತ್ರ ನೀಡಿದೆ. ನೋಟೀಸ್ ಸಹ ನೀಡದೇ ಏಕಾಏಕಿ ತೆರವಿಗೆ ಮುಂದಾಗಿದ್ದು ಸರಿಯಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿ ಜಾಗದ ಸರ್ವೇ ಮಾಡುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ. ಇನ್ನೂ ಸರ್ವೇ ಪೂರ್ಣವಾಗಿಲ್ಲ. ಆದರೂ ಅವರ ಮೇಲೆ ದೌರ್ಜನ್ಯದಿಂದ ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದು ಸಹಿಸುವದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಶ್ವನಾಥ ಹೆಚ್., ರವಿರಾಜ ನಾಯಕ, ಮಲ್ಲಯ್ಯ ನಾಯಕ, ಲಕ್ಷö್ಮಣ ನಾಯಕ ವಕೀಲರು, ಅಯ್ಯನಗೌಡ ನಾಯಕ ಧುಮತಿ, ಯಂಕೋಬ ನಾಯಕ ಜವಳಗೇರಾ, ಚನ್ನಪ್ಪ ಜವಳಗೇರಾ, ರಾಘವೇಂದ್ರ ಯಾಪಲಪರ್ವಿ, ಕೆ.ನಾಗರಾಜ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here