ಅಮರಾಪುರ ಸರ್ಕಾರಿ ಶಾಲೆ ಜಾಗ ಒತ್ತುವರಿ ಖಂಡಿಸಿ ಜ.30 ರಂದು ಪ್ರತಿಭಟನೆ: ಬಸವರಾಜ ಬಡಿಗೇರ್

0
171

ಸಿಂಧನೂರು, ಜ.26: ತಾಲ್ಲೂಕಿನ ಅಮರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಗ್ರಾಮದ ನಾಗಪ್ಪ ಮತ್ತು ಕೃಷ್ಣಪ್ಪ ಎನ್ನುವವರು ಅತಿಕ್ರಮಿಸಿಕೊಂಡಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ಜ.30 ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಬಡಿಗೇರ್ ತಿಳಿಸಿದರು.
ಅವರು ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ೨೦೦೮ ರಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ೪ ಎಕರೆ ೧ ಗುಂಟೆ ಸರ್ಕಾರಿ ಜಮೀನನ್ನು ಶಾಲೆಗೆಂದು ನೀಡಲಾಗಿತ್ತು. ಆದರೆ ಶಾಲೆಯ ಸುತ್ತಲೂ ಸುಮಾರು 20 ಜನ ಗುಡಿಸಲು ಹಾಗೂ ಹುಲ್ಲಿನ ಬಣವಿಗಳನ್ನು ಅನಧಿಕೃತವಾಗಿ ಹಾಕಿಕೊಂಡಿದ್ದರು. ಸರ್ಕಾರಿ ಜಮೀನನ್ನು ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ ನಂತರ ನಾಗಪ್ಪ ಮತ್ತು ಕೃಷ್ಣಪ್ಪ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ತೆರವುಗೊಳಿಸಿದ್ದಾರೆ. ಗ್ರಾಮಸ್ಥರೆಲ್ಲ ಇಬ್ಬರಿಗೆ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ ಎಂದರು.

ಈ ಕುರಿತು ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ತೆರವುಗೊಳಿಸಲು ಒಂದು ತಿಂಗಳ ಗಡವು ಕೇಳಿದ್ದರು. ನಂತರ ಬಿಆರ್‌ಸಿ ಕೃಷ್ಣಪ್ಪ ಅವರ ಮಧ್ಯಸ್ಥಿಕೆಯಲ್ಲಿ ಮತ್ತೊಂದು ತಿಂಗಳು ಗಡುವು ನೀಡಲಾಗಿತ್ತು. ಜ.23 ರಂದು ಗಡವು ಪೂರ್ಣಗೊಂಡರೂ ಸಹ ನಾಗಪ್ಪ ಮತ್ತು ಕೃಷ್ಣಪ್ಪ ತೆರವುಗೊಳಿಸಿಲ್ಲ.

ಇವೆಲ್ಲವುಗಳನ್ನು ಗಮನಿಸಿದರೆ ಶಿಕ್ಷಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡಿವೆ ಎಂದು ದೂರಿದರು.
ಸ್ವಜಾತಿಯ ನಾಯಕರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಶ್ರೀರಾಮುಲು ಹಾಗೂ ಮಸ್ಕಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲರ ಕುಮ್ಮಕ್ಕಿನಿಂದ ಶಾಲೆ ಜಾಗವನ್ನು ತೆರವುಗೊಳಿಸುತ್ತಿಲ್ಲ.

ಆದ್ದರಿಂದ ಅಧಿಕಾರಿಗಳ ನಿರ್ಲಕ್ಷತೆಯನ್ನು ಖಂಡಿಸಿ, ಸರ್ಕಾರಿ ಜಾಗವನ್ನು ಶಾಲೆಗೆ ಉಳಿಸಬೇಕೆನ್ನುವ ಸದುದ್ದೇಶದಿಂದ ಜ.30 ರಂದು ಗ್ರಾಮಸ್ಥರೆಲ್ಲರೂ ಸೇರಿ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುತ್ತಿದೆ ಎಂದು ಮುಖಂಡರಾದ ಬಸವರಾಜಗೌಡ ಹಾಗೂ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಬಾವಿತಾಳ ಹೇಳಿದರು.
ಗ್ರಾಮಸ್ಥರಾದ ಸಂಗಪ್ಪ ಬಾವಿತಾಳ, ಕೆ.ವೀರಪ್ಪ ದಳಪತಿ, ತಿಪ್ಪಣ್ಣ, ನಾಗರಾಜ ಬಾವಿತಾಳ, ನರಸಪ್ಪ ಅಮರಾಪೂರ ಸುದ್ದಿಗೋಷ್ಠಿಯಲ್ಲಿ ಇದ್ದರು.

LEAVE A REPLY

Please enter your comment!
Please enter your name here