ಎಡದಂಡೆ ನಾಲೆ ನೀರು ಸರಬರಾಜು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಎಡದಂಡೆ ನಾಲೆ ಗೇಜ್ ಮೆಂಟೇನ್ ಮಾಡಲು ಜಿಲ್ಲಾಧಿಕಾರಿ ಸೂಚನೆ

0
111

ಸಿಂಧನೂರು,ಜ.20 –  ಎಡದಂಡೆ ಕಾಲುವೆಯ ಕೆಳ ಭಾಗದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಮೇಲ್ಭಾಗದಲ್ಲಿ ಗೇಜ್ ಮೆಂಟೇನ್ ಮಾಡಲು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಎಡದಂಡೆ ನಾಲೆ ನೀರು ಸರಬರಾಜು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಡದಂಡೆ ನಾಲೆಯಿಂದ ವಡ್ಡರಟ್ಟಿ ವಿಭಾಗದಿಂದ ಸಿಂಧನೂರು ವಿಭಾಗಕ್ಕೆ 11.4 ಫೀಟ್ ನೀರು ಕೊಡಬೇಕು. ಈಗ ಬರಿ 10.5 ಫೀಟ್ ಮಾತ್ರ ಕೊಡುತ್ತಿರುವದರಿಂದ ನೀರಿನ ಸಮಸ್ಯೆಯಾಗಿದೆ. ಯಾವುದೇ ಕಾರಣಕ್ಕೂ ಕನಿಷ್ಟ 11.3 ಫೀಟ್ ನೀರು ಕೊಡಲೇಬೇಕು. ಈ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿಗಳೊಂದಿಗೆ ತಾವು ಚರ್ಚಿಸುವದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದರೆ ಪೊಲೀಸ್ ಬದ್ರತೆ ಪಡೆದುಕೊಳ್ಳಲು ತಿಳಿಸಿದರು.
ಮುಖ್ಯ ನಾಲೆಯ ಎಡಭಾಗ ಹಾಗೂ ಉಪಕಾಲುವೆ ವ್ಯಾಪ್ತಿಯಲ್ಲಿ ಬರುವ ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ನೀರು ಬಳಕೆದಾರರ ವಿರುದ್ದ ದೂರು ದಾಖಲಿಸಿರಿ. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೇಲ್ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆದುಕೊಳ್ಳುತ್ತಿರುವದರಿಂದ ಕೆಳ ಭಾಗದಲ್ಲಿ ಸಮಸ್ಯೆಗೆ ಕಾರಣವಾಗಿದೆ. ನೀರಿನ ಗೇಜ್ ಮೆಂಟೇನ್ ಮಾಡಲು ಹೋದರೆ ಜನಪ್ರತಿನಿಧಿಗಳೊಂದಿಗೆ ನೂರಾರು ರೈತರು ಬಂದು ದಬ್ಬಾಳಿಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಾವೇನು ಮಾಡಲು ಸಾಧ್ಯವಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಸಮಸ್ಯೆ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಇಲ್ಲಿ ಶಾಸಕರ ಪಾತ್ರ ಏನೂ ಇಲ್ಲ. ಲಾ & ಆರ್ಡರ್ ಮೇಂಟೇನ್ ಮಾಡಿ. ಅಗತ್ಯ ಬಿದ್ದರೆ ಪೊಲೀಸ್ ಇಲಾಖೆ ಸಹಕಾರ ಪಡೆದುಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಎಸ್‌ಪಿ ಸಿ.ಬಿ.ವೇದಮೂರ್ತಿ, ನೀರಾವರಿ ಇಲಾಖೆ ಸಿಇ ಮಂಜಪ್ಪ, ಲಿಂಗಸ್ಗೂರು ಸಹಾಯಕ ಆಯುಕ್ತ ಡಾ.ದಿಲೀಶ ಶಶಿ, ರಾಯಚೂರು ಎಸಿ ಸಂತೋಷ ಕಾಮಗೌಡ, ಸಿಂಧನೂರು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ, ಸಿರವಾರ ತಹಶೀಲ್ದಾರ ಶೃತಿ ಸೇರಿದಂತೆ ಕಂದಾಯ, ನೀರಾವರಿ, ಪೊಲೀಸ್, ಜೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here