ನೂತನ ಕೆರೆಗೆ ನಿರಂತರ ನೀರು ತುಂಬಿಸುವ ಭರವಸೆ, ಹೋರಾಟಕ್ಕೆ ಸಂದ ಪ್ರತಿಫಲ-ಪ್ರಭುರಾಜ ಕೊಡ್ಲಿ

0
243

ಮಾನ್ವಿ ಜ.10 ಕುಡಿಯುವ ನೀರಿನ ಕೆರೆ ಕಾಮಗಾರಿ ತ್ವರಿತಗೊಳಿಸಿ ಶೀಘ್ರವೇ ಇದಕ್ಕೆ ನೀರು ತುಂಬಿಸಿ ಜನರಿಗೆ ಪೂರೈಸಬೇಕೆಂದು ಒತ್ತಾಯಿಸಿ ಜನಶಕ್ತಿ ಕೇಂದ್ರದ ಪ್ರಧಾನ ಸಂಚಾಲಕ ಪ್ರಭುರಾಜ ಕೊಡ್ಲಿ ನೇತ್ರತ್ವದಲ್ಲಿ ಇನ್ನಿತರ ಪದಾಧಿಕಾರಿಗಳು ಕಳೆದ ೧೧೦ ದಿನಗಳಿಂದ ಹೋರಾಟ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಮರೇಶ ಬಿರಾದಾರ್ ಹಾಗೂ ಇತರ ಅಧಿಕಾರಿಗಳು ಪೂರ್ಣಗೊಂಡ ನೂತನ ಕೆರೆಗೆ ನಿರಂತರ ನೀರು ತುಂಬಿಸಿ ಜನರಿಗೆ ಸರಬರಾಜು ಮಾಡುವ ಭರವಸೆ ನೀಡಿದ ನಿಮಿತ್ಯ ಹೋರಾಟಗಾರರು ತಮ್ಮ 110 ದಿನಗಳ ನಿರತಂತರ ಹೋರಾಟವನ್ನು ಶುಕ್ರವಾರ ಅಂತ್ಯ ಗೊಳಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಹೋರಾಟಗಾರ ಪ್ರಭುರಾಜ ಕೊಡ್ಲಿ ನಿಗದಿತ ಅವಧಿಯೊಳಗೆ ಮುಗಿಯಬೇಕಿದ್ದ ಕೆರೆ ಕಾಮಗಾರಿ ಬಗ್ಗೆ ಗುತ್ತೇದಾರರು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ ಮಾಡಿದ ಕಾರಣ ಕೆರೆ ಕಾಮಗಾರಿ ತ್ವರಿತಕ್ಕೆ ಒತ್ತಾಯಿಸಿ ಕಳೆದ 110 ದಿನಗಳಿಂದ ಕೆರೆ ಹತ್ತಿರ ನಿರಂತರ ಧರಣಿ ಆರಂಭಿಸಲಾಗಿತ್ತು. ಕೆರೆ ಕಾಮಗಾರಿ ಮುಗಿಯುವವರೆಗೂ ಬರಿಗಾಲಲ್ಲಿ ಸಂಚರಿಸುವ, ತಲೆಗೂದಲು, ಗಡ್ಡ ತೆಗೆಯದೇ ಕೇವಲ ಲುಂಗಿ-ಬನಿಯನ್ ಧರಿಸಿ ಹೋರಾಟ ಮಾಡುವ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿತ್ತು. ಪೈಪ್‌ಲೈನ್, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ವಿಳಂಬ ಆದಾಗ ಸೆಗಣಿ ನೀರು ಮೈಮೇಲೆ ಸುರಿದು ಕೊಂಡು ವಿನೂತನ ಪ್ರತಿಭಟನೆ ಮಾಡಲಾಗಿತ್ತು. ಕಳೆದ 110 ದಿನಗಳಿಂದ ನಡೆಸುತ್ತಿದ ಹೋರಾಟಕ್ಕೆ ಮಣಿದ ಅಧಿಕಾರಿಗಳು, ಗುತ್ತೇದಾರರು ಕಾಮಗಾರಿ ತ್ವರಿತ ಮಾಡಿ ಕೆರೆಗೆ ನೀರು ಭರ್ತಿ ಮಾಡುವ ಯೋಜನೆ ಕೈಗೊಂಡ ನಿಮಿತ್ಯ 110 ದಿನಗಳ ನಿರಂತರ ಹೋರಾಟವನ್ನು ಅಂತ್ಯಗೊಳಿಸಲಾಗಿದೆ. ನೀರು ಭರ್ತಿ ಮಾಡದೇ ನಿರ್ಲಕ್ಷ ವಹಿಸಿದರೆ ಪುನಃ ಹೋರಾಟ ಆರಂಭಿಸಲಾಗವುವುದು.110 ದಿನಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದಾಗಿದ್ದು ಹೋರಾಟಕ್ಕೆ ಸಹಕಾರ-ಸ್ಪಂದನೆ ನೀಡಿದ ಅಧಿಕಾರಿಗಳು, ಗುತ್ತೇದಾರರು, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಭುರಾಜ ಕೊಡ್ಲಿ ಹೇಳಿದರು.
ನಂತರ ಮಾತನಾಡಿದ ತಹಸೀಲ್ದಾರ್ ಅಮರೇಶ ಬಿರಾದಾರ್ ಈಗಾಗಲೇ ಕೆರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಹೋರಾಟಗಾರರ ಬೇಡಿಕೆಯಂತೆ ನೂತನ ಕೆರೆಗೆ ಕಾಲುವೆ ನೀರು ಭರ್ತಿ ಮಾಡುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಕಾಲುವೆ ಮೇಲ್ಬಾಗದಲ್ಲಿ ರೈತರು ಭತ್ತ ನಾಟಿ ಮಾಡುತ್ತಿರುವುದರಿಂದ ಮಾರ್ಚ್ ನಂತರ ಕೆರೆಗೆ ಕಾಲುವೆ ನೀರು ತುಂಬಿಸಲಾಗುವುದು. ಅಲ್ಲಿಯ ತನಕ ಸದ್ಯ ನದಿಯ ನೀರನ್ನು ಕೆರೆಗೆ ತುಂಬಿಸಲಾಗುತ್ತಿದ್ದು ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಜನರಿಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋರಾಟಗಾರಿಗೆ ಎಳೆ ನೀರು ಕುಡಿಸುವ ಮೂಲಕ ತಹಸೀಲ್ದಾರ್ ಅಮರೇಶ ಬಿರಾದಾರ್ ಹೋರಾಟವನ್ನು ಅಂತ್ಯಗೊಳಿಸಿದರು. ನಂತರ ಈ ಮೊದಲೇ ಮಾತು ಕೊಟ್ಟ ಪ್ರಕಾರ ಹೋರಾಟಗಾರರು ಗಂಗಾಮಾತೆಗೆ ಪೂಜೆ ಸಲ್ಲಿಸಿ ಜೈಕಾರ್ ಘೋಷಣೆ ಮಾಡಿದರು. ನಂತರ ಸೇವಿಂಗ್ ಮಾಡಿಕೊಂಡು ಹೊಸ ಬಟ್ಟೆ ಧರಿಸಿ ಹೋರಾಟಕ್ಕೆ ಸಂದ ಪ್ರತಿಫಲ ಇದಾಗಿದೆ ಎಂದು ಸಂತಸ ಹಂಚಿಕೊಂಡರು.
ಈ ಸಂಧರ್ಭದಲ್ಲಿ ಹೋರಾಟಗಾರರಾದ ಎಸ್.ಎಂ.ಶಾನ್‌ವಾಜ್, ಹನುಮಂತ ಕೋಟೆ, ಮೈನುದ್ದೀನ್, ಎಂ.ಡಿ.ನುಸರತ್, ಸಾಬೀರ್‌ಪಾಷಾ, ಈರಣ್ಣ ಗವಿಗಟ್, ದೇವರಾಜ ಬೆಟ್ಟದೂರು, ರಾಮು ದೊಡ್ಡಿ, ಕೆರೆ ಕಾಮಗಾರಿ ಗುತ್ತಿಗೆ ಪಡೆದ ಮ್ಯಾನೇಜರ್ ರಿತೀಶ್ ನಾಯ್ಕ್, ಅಧಿಕಾರಿಗಳಾದ ಪಂಚಮುಖಿ, ಶರಣಪ್ಪ, ಎಎಸ್‌ಐ ವೀರನಗೌಡ ಇತರರು ಇದ್ದರು.

LEAVE A REPLY

Please enter your comment!
Please enter your name here