ರಾಜಕೀಯ ಸಂಸದೀಯ ಕಾರ್ಯದರ್ಶಿ ನೇಮಕ ಕಾನೂನು ಬಾಹಿರ, ಕಾಯ್ದೆ ರದ್ದು : ಹೈಕೋರ್ಟ್ ಮಹತ್ವದ ಆದೇಶ

0
268

ಬೆಂಗಳೂರು,ಜ.4- ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಪ್ರಶ್ನಿಸಿ ಬೆಂಗಳೂರಿನ ವಿಜಯನಗರ ನಿವಾಸಿ ಎಂ.ಬಿ.ಆದಿನಾರಾಯಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ಪ್ರಕಟಿಸಿತು.  ಸಂಸದೀಯ ಕಾರ್ಯದರ್ಶಿಗಳ ವೇತನ ಹಾಗೂ ಭತ್ಯೆ ಕಾಯ್ದೆಯನ್ನು ಇದೇ ವೇಳೆ ಹೈಕೋರ್ಟ್ ಕಾನೂನು ಬಾಹಿರ ಎಂದು ಘೋಷಿಸಿ ರದ್ದುಪಡಿಸಿದೆ.

ಸಂಸದೀಯ ಕಾರ್ಯ ದರ್ಶಿಗಳ ನೇಮಕ ಕಾನೂನು ಬಾಹಿರ ಎಂದು ಮಹತ್ವದ ಆದೇಶ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠ ಭವಿಷ್ಯದ ನೇಮಕಕ್ಕೂ ಅವಕಾಶವಿಲ್ಲ ಎಂದು ಹೇಳಿದೆ.  ರಾಜ್ಯ ಸರ್ಕಾರದ ಸಂಸದೀಯ ಕಾರ್ಯ ದರ್ಶಿಗಳ ಹುದ್ದೆಗೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ನೇಮಿಸಿದ ಎಚ್.ಡಿ.ಕುಮಾರಸ್ವಾಮಿಗಳು ಮುಖ್ಯಮಂತ್ರಿಯಾಗಿದ್ದಾಗ ಹೊರಡಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಸಂಸದೀಯ ಕಾರ್ಯದರ್ಶಿಯನ್ನು ನೇಮಕ ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರವಿಲ್ಲ. ಒಟ್ಟು ಶಾಸಕರ ಪೈಕಿ ಶೇ.15ರಷ್ಟು ಶಾಸಕರನ್ನು ಮಾತ್ರ ಸಚಿವ ಸಂಪುಟದ ಸದಸ್ಯರನ್ನಾಗಿ ನಿಯೋಜಿಸಲು ಅವಕಾಶವಿದೆ. ಈ ಸಂಸದೀಯ ಕಾರ್ಯದರ್ಶಿಗಳು ಸಚಿವ ಸಂಪುಟ ಸ್ಥಾನಮಾನ ಹೊಂದಿದ್ದು ಭತ್ಯೆಯನ್ನು ಪಡೆಯುತ್ತಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್, ಕೌಜಲಗಿ ಮಹಾಂತೇಶ್ ಶಿವಾನಂದ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಇಟ್ನಾಳ್, ಡಿ.ಎಸ್.ವಲಗೇರಿ, ವಿಧಾನಪರಿಷತ್ ಸದಸ್ಯರಾದ ಕೆ.ಎಂ.ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕ ಮಾಡಿದ್ದರು.

ಸಂಸದೀಯ ವ್ಯವಹಾರ ಇಲಾಖೆ ಕಾರ್ಯದರ್ಶಿ 2019ರ ಜನವರಿ 7ರಂದು ಅಧಿಕೃತ ರಾಜ್ಯಪತ್ರ ಬಿಡುಗಡೆ ಮಾಡಿದ್ದರು. ಈ ಕ್ರಮ ಪ್ರಶ್ನಿಸಿದ್ದ ಅರ್ಜಿದಾರರು ಸಂಸದೀಯ ಕಾರ್ಯದರ್ಶಿ ನೇಮಕಾತಿಯು ಸಂವಿಧಾನ ಪರಿಚ್ಛೇಧ 164(1-ಎ)ಕ್ಕೆ ವಿರುದ್ಧವಾಗಿದೆ.ಹಾಗಾಗಿ ಇವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

LEAVE A REPLY

Please enter your comment!
Please enter your name here