ಪ್ರತಿಭೆಗಳನ್ನ ಗೌರವಿಸಿ ಸೌಲಭ್ಯಗಳನ್ನ ಸಮರ್ಪಕವಾಗಿ ಕಲ್ಪಿಸಲು ಪಣತೊಡಬೇಕೆಂದು ಕರೆ; ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್

0
224

ರಾಯಚೂರು ಜ.01- ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಕಲ್ಪಿಸಿಕೊಡಬೇಕಾದ  ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಪಣತೊಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೊಸ ವರ್ಷದ ಅಂಗವಾಗಿ ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹೊಸ ವರ್ಷದ ಅಂಗವಾಗಿ ಶುಭ ಕೋರುವ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.

ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ನೌಕರಿ ದೊರೆಯುವುದು ದುಸ್ತರವಾಗಿದೆ. ಎಲ್ಲರಿಗೂ ಈ ಅವಕಾಶ ಲಭ್ಯವಾಗುವದಿಲ್ಲ. ದೊರೆತವರು ಸರಕಾರಿ ನೌಕರಿಯನ್ನು ಸೇವೆ ಎಂದು ಪರಿಗಣಿಸಿ ಕಾರ್ಯ ನಿರ್ವಹಿಸಬೇಕು.

ಆರ್ಥಿಕವಾಗಿ ಹಾಗೂ ಜೀವನ ಪೂರ್ತಿ ಭದ್ರತೆ ಒದಗಿಸುವ ಈ ನೌಕರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡಚಣೆಯುಂಟು ಮಾಡಬಾರದು. ಜನಸಾಮಾನ್ಯರು ಹಲವು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ತಮ್ಮ ಬಳಿ ಬರುತ್ತಾರೆ ನಿಮ್ಮ ಹಂತದಲ್ಲಿ ಆಗುವ ಕೆಲಸ ಕಾರ್ಯಗಳನ್ನು ಕೂಡಲೇ ಪೂರ್ಣಗೊಳಿಸಿ ಕಡತಗಳನ್ನು ವಿಳಂಬಕ್ಕೆ ಆಸ್ಪದವಿಲ್ಲದಂತೆ ವಿಲೇವಾರಿ ಮಾಡಿ ಎಂದು ಹೇಳಿದರು.

ಮಾನವೀಯ ಮೌಲ್ಯಗಳು ಇದೀಗ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಬೆಳೆಸಿಕೊಳ್ಳುವತ್ತ ಗಂಭೀರ ಚಿಂತನೆ ನಡೆಸಬೇಕೆಂದ ಅವರು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹೊಸ ವರ್ಷದಲ್ಲಿ ಹೊಸದೇನಾದರೂ ಛಲ ಇಟ್ಟು ಸಾಧಿಸುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೇವದುರ್ಗ ತಾಲೂಕಿನ ಸೋಮನ ಮರಡಿಯ ಗ್ರಾಮದ ಬಾಲಕಿ ಮೋನಮ್ಮ ಅವರಿಗೆ ಜಿಲ್ಲಾಡಳಿತ ವತಿಯಿಂದ 10 ಸಾವಿರ ರೂ ನಗದು ಬಹುಮಾನ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮೋನಮ್ಮ: ಸೋಮನ ಮರಡಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮೋನಮ್ಮ ಅವರು ಸಂಗೀತ ಕ್ಷೇತ್ರದಲ್ಲಿ ರಾಜ್ಯದ ಜನರು ಗುರುತಿಸುವಂತೆ ಸಾಧನೆ ಮಾಡಿ ರಾಯಚೂರು ಜಿಲ್ಲೆಯ ಜನರು ಹೆಮ್ಮೆ ಪಡುವಂತಾಗಿದೆ. ಹಾಡುಗಳನ್ನು ಸುಮಧುರವಾದ ಕಂಠದಿಂದ ಹಾಡಿ ಜನರ ಮನದಲ್ಲಿ ಸ್ಥಾನ ಪಡೆದಿದ್ದಾರೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದುರುಗೇಶ್, ಲಿಂಗಸೂಗೂರು ಸಹಾಯಕ ಆಯುಕ್ತ ದಿಲೇಶ ಸಸಿ,ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ತಹಸೀಲ್ದಾರ್ ಹಂಪಣ್ಣ ಸೇರಿದಂತೆ ವಿವಿಧಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here