NRC, CAA ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗ ರಾಜ್ಯದ ನೆಲಮಂಗಲ ಸಮೀಪ ವಿಚಾರಣಾ ಕೇಂದ್ರವೊಂದು ಸದ್ದಿಲ್ಲದೆ ತಲೆ ಎತ್ತಿದೆ

0
256

ಬೆಂಗಳೂರು,ಡಿ.24- ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ವಿಚಾರಣೆಗೊಳಪಡಿಸುವ ಸಂಬಂಧ ನೆಲಮಂಗಲ ಸಮೀಪ ವಿಚಾರಣಾ ಕೇಂದ್ರವೊಂದು ಸದ್ದಿಲ್ಲದೆ ತಲೆ ಎತ್ತಿದೆ. ನೆಲಮಂಗಲದ ಸೊಂಡಿಕೊಪ್ಪ ಬಳಿ ಸುಮಾರು ಒಂದು ಎಕರೆ ಜಮೀನಿನಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು, ಜನವರಿ ತಿಂಗಳ ಮೊದಲ ವಾರದಿಂದ ಇದು ಕಾರ್ಯಾರಂಭ ಮಾಡಲಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅನ್ಯ ರಾಷ್ಟ್ರಗಳಿಂದ ಬಂದು ನೆಲೆಸಿರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸುವುದೇ ಕೇಂದ್ರದ ಉದ್ದೇಶವಾಗಿದೆ.  ಸಮಾಜ ಕಲ್ಯಾಣ ಇಲಾಖೆಯಿಂದ ಇದನ್ನು ನಿರ್ಮಿಸಲಾಗಿದ್ದು, ಸೊಂಡೆಕೊಪ್ಪ ಸ್ಥಳೀಯರಿಗೆ ಈ ಬಗ್ಗೆ ಯಾವುದೇ ರೀತಿಯ ಕಿಂಚಿತ್ತೂ ಮಾಹಿತಿಯನ್ನು ನೀಡಿಲ್ಲ. ಮೊದಲು ಇದು ಗ್ರಾಮಪಂಚಾಯ್ತಿ ನೂತನ ಕಟ್ಟಡ ಎಂದು ನಂಬಿಸಲಾಗಿತ್ತು.

ಅಂದಹಾಗೆ ಈ ಕಚೇರಿಯನ್ನು ಬ್ಯೂರೋ ಇಮಿಗ್ರೇಷನ್ ಎಂದು ಕರೆಯಲಾಗುತ್ತಿದ್ದು, ಅಕ್ರಮ ವಾಗಿ ನೆಲೆಸಿರುವ ವಿದೇಶಿಗರ ಚಟುವಟಿಕೆ ಮತ್ತು ರಾಜ್ಯದಲ್ಲಿ ಸುತ್ತಾಡುವವರನ್ನು ನಿಯಂತ್ರಿಸಲು ಇದನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಬಂದಿರುವ ಅಕ್ರಮ ವಲಸಿಗರ ಮೇಲೆ ನಿಗಾ ವಹಿಸಲಿದ್ದಾರೆ.

ಸೊಂಡೆಕೊಪ್ಪದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಆರು ಕೊಠಡಿಗಳಿದ್ದು, ಎರಡು ವಾಚ್ ಟವರ್‍ಗಳಿವೆ. ಪ್ರವೇಶ ದ್ವಾರದಲ್ಲಿ ಒಂದು ಭದ್ರತಾ ಕೊಠಡಿ ನಿರ್ಮಾಣ ಮಾಡಲಾಗಿದೆ. ಸುತ್ತಲು 20 ಅಡಿ ಎತ್ತರದ ಗೋಡೆಯನ್ನು ನಿರ್ಮಾಣ ಮಾಡಲಾಗಿದ್ದು, ಅದರ ಮೇಲೆ ಮುಳ್ಳಿನ ತಂತಿಯನ್ನು ಹಾಕಲಾಗಿದೆ.  ಒಂದು ಸಾಮಾನ್ಯ ಅಡುಗೆ ಮನೆ, ಶೌಚಾಲಯ, ಇತರೆ ಸಾಮಾನುಗಳನ್ನಿಡಲು ಒಂದು ಕೋಣೆ, ಹಾಸಿಗೆ, ಬಕೆಟ್ ಸೇರಿದಂತೆ ಮತ್ತಿತರ ವಸ್ತುಗಳನ್ನಿಡಲು ಇನ್ನೊಂದು ಕೊಠಡಿಯನ್ನು ಮೀಸಲಿಡಲಾಗಿದೆ.

ಆದಷ್ಟು ಶೀಘ್ರ ಸಮಾಜ ಕಲ್ಯಾಣ ಇಲಾಖೆ ನಿರ್ಮಾಣ ಮಾಡಿರುವ ಈ ಕೊಠಡಿಯನ್ನು ಗೃಹ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಜನವರಿ ಮೊದಲ ವಾರದಲ್ಲಿ ಇದು ಉದ್ಘಾಟನೆಯಾಗಲಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.  ಆದಷ್ಟು ಶೀಘ್ರ ಕಚೇರಿಗೆ ಅಂತಿಮ ಸ್ಪರ್ಶ ನೀಡಬೇಕೆಂದು ಖುದ್ದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಸಿಆರ್) ಅನುಷ್ಠಾನ ಕುರಿತಂತೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಸರ್ಕಾರದ ಈ ಕ್ರಮ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ರಾಮನಗರ, ದಾವಣಗೆರೆ, ಉತ್ತರಕನ್ನಡ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಸಂಖ್ಯೆಯ ವಿದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here