ಮಂಗಳೂರು ಗೊಲಿಬಾರ್ ಪ್ರಕರಣ ಮುಚ್ಚುಹಾಕಲು ಹೊರಟಿರುವ ರಾಜ್ಯಸರಕಾರ ಮತ್ತು ಮಂಗಳೂರು ಪೊಲಿಸರ ವಿರುದ್ದ ಗುಡುಗಿದ ಬಂಡೆ ; ಡಿಕೆಶಿ

0
216

ಬೆಂಗಳೂರು: ತಮ್ಮ ವಿರುದ್ಧ ಧ್ವನಿ ಎತ್ತಿದ ಯುವಕರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳನ್ನು ನಗರ ನಕ್ಸಲರು ಎಂದು ಕರೆದು ಅವಮಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿ, ‘ವಿದ್ಯಾರ್ಥಿಗಳನ್ನು ನಗರ ನಕ್ಸಲರು ಅಂತ ಕರೆದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಯುವಕರು ಇಲ್ಲದಿದ್ರೆ ನೀವು ಅಧಿಕಾರ ಕ್ಕೆ ಬರುತ್ತಿರಲಿಲ್ಲ. ಮೊದಲು ನೀವು ಕ್ಷಮೆ ಕೇಳಿ’ ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಸಿಆರ್ ವಿರುದ್ಧ ಯುವಕರು, ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಬುದ್ಧಿಜೀವಿಗಳು, ವಿದ್ಯಾವಂತರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ಯಾವುದೇ ಪಕ್ಷದ ಸದಸ್ಯರೂ ಅಲ್ಲ. ಯಾವ ಪಕ್ಷವೂ ಈ ರೀತಿ ಮಾಡಿ ಅಂತಾ ನಿರ್ದೇಶನ ಕೊಟ್ಟಿಲ್ಲ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತಿವೆ. ಇವುಗಳ ಹೊರತಾಗಿ, ಅನೇಕ ಚಿಂತಕರು, ಯುವ ಸಮೂಹ ಯಾವುದೇ ರಾಜಕೀಯ ಅಧಿಕಾರದ ನಿರೀಕ್ಷೆ ಇಲ್ಲದೇ ಈ ದೇಶದ ಸಂವಿಧಾನ, ಸ್ವಾಭಿಮಾನ ಉಳಿಸಬೇಕು ಅಂತಾ ಮುಂದೆ ಬರುತ್ತಿದ್ದಾರೆ. ಆದರೆ ನಮ್ಮ ದೇಶದ ಪ್ರಧಾನಮಂತ್ರಿಗಳು ಇವರನ್ನು ನಗರ ನಕ್ಸಲರು ಅಂತಾ ಕರೆಯುತ್ತಿದ್ದಾರೆ. ಇದಕ್ಕಿಂತ ದೊಡ್ಡ ಅವಮಾನ, ದೇಶದ್ರೋಹ ಇನ್ನೊಂದಿಲ್ಲ.

ಈ ವಿಚಾರವಾಗಿ ಪ್ರಧಾನಮಂತ್ರಿಗಳು ಕೂಡಲೇ ಕ್ಷಮೆ ಕೇಳಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ. ಈ ನಗರದ, ರಾಷ್ಟ್ರದ ಯುವಕರು, ವಿದ್ಯಾರ್ಥಿಗಳು, ಚಿಂತಕರು ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಿಮ್ಮನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಗೆಲ್ಲಿಸಿದ್ದು, ಇವರನ್ನು ಬೀದಿಗಿಳಿದು ಪ್ರತಿಭಟನೆ ಮಾಡಿಸಲು ಅಲ್ಲ. ಇಷ್ಟು ಆತುರದಲ್ಲಿ ಇಡೀ ದೇಶದ ಜನ ಆರ್ಥಿಕವಾಗಿ ನರಳುತ್ತಿರುವ ಸಂದರ್ಭದಲ್ಲಿ, ಅವರ ಸ್ವಾಭಿಮಾನದ ಬದುಕಿಗೆ ಕಳಂಕ ತಂದು ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ.
ನಿಮಗೆ ಮತ ಹಾಕಿದ ಯುವಕರು ಸಂಸತ್ತಿನೊಳಗೆ ಬಂದು ನಿಮ್ಮನ್ನು ಪ್ರಶ್ನೆಸಲು ಆಗುವುದಿಲ್ಲ. ಹೀಗಾಗಿ ಅವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಅವರ ಬಾಯಿ ಮುಚ್ಚಿಸುವ ಪ್ರಯತ್ನ, ಅವರು ನಿಮ್ಮ ವಿರುದ್ಧ ಧ್ವನಿ ಎತ್ತಿದರು ಎಂಬ ಮಾತ್ರಕ್ಕೆ ಅವರನ್ನು ನಗರ ನಕ್ಸಲರು ಎಂದು ಕರೆಯುವುದು ಖಂಡನೀಯ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ.

ಭಾರತದಲ್ಲಿ ಹೂಡಿಕೆಗೆ ವಿದೇಶದವರು ಹಿಂದೇಟು ಹಾಕಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೊಸ ಕಾನೂನನ್ನ ಎಲ್ಲ ದೇಶಗಳು ವಿರೋಧ ಮಾಡ್ತಿವೆ. ನಿಮಗೆ ಬೆಂಬಲ ನೀಡಿರುವ ಎಐಎಡಿಎಂಕೆ, ವೈಎಸ್ ಆರ್ ಕಾಂಗ್ರೆಸ್, ಬಿಜು ಜನತಾದಳ ನಾಯಕರು, ನಿತೀಶ್ ಕುಮಾರ್ ಇರಬಹುದು ಅವರೇ ಈ ವಿಚಾರದಲ್ಲಿ ನಿಮಗೆ ಮತ ನೀಡಿ ತಪ್ಪು ಮಾಡಿದ್ದೀವಿ ಅಂತಾ ಹೇಳುತ್ತಿದ್ದಾರೆ. ನೀವು ಮೊದಲು ಅವರನ್ನು ಸಮಾಧಾನ ಮಾಡಿ ಆನಂತರ ಬೇರೆ ವಿಚಾರ ಮಾತಾಡಿ.

ನಿಮಗೆ ಬೆಂಬಲ ನೀಡಿದ ಯುವಕರು ಮತ್ತು ಪಕ್ಷಗಳು ನಿಮ್ಮ ಧೋರಣೆ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ವಿಡಿಯೋ ಹಳೆಯದು. 144 ನೇ ಸೆಕ್ಷನ್ ಹಾಕುವುದಕ್ಕೆ ಹೇಳಿದ್ದು ಯಾರು? ಇನ್ನೂ ಸಾಯಲಿಲ್ಲವಾ ಅಂತ ಕೇಳಿದ್ದು ಯಾರು? ಪೊಲೀಸರು ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ನಾನು ಮಂಗಳೂರಿನ ಯಾವುದೇ ಪೊಲೀಸ್ ಅಧಿಕಾರಿಯನ್ನು ದೂಷಿಸುವುದಿಲ್ಲ. ಕಾರಣ, ನಮ್ಮಲ್ಲಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಅಂತಾ ನನಗೆ ಗೊತ್ತಿದೆ. ಸರ್ಕಾರದ ಆದೇಶ ಇಲ್ಲದೇ ಯಾವುದೇ ಪೊಲೀಸ್ ಅಧಿಕಾರಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಂಗಳೂರು ಹಾಗೂ ರಾಜ್ಯದ ಘಟನೆಗೆ ನೇರ ಜವಾಬ್ದಾರಿ ರಾಜ್ಯ ಸರ್ಕಾರ. ಮಂಗಳೂರಿನಲ್ಲಿ ಇರೋ ಬಹಳ ಜನ ಹೊರದೇಶದಲ್ಲಿ ಇದ್ದಾರೆ. ಅವರಿಗೆ ಇದು ಬೇಕಿಲ್ಲ. ಅಲ್ಲಿ ಗಲಭೆ ಮಾಡುವವರಿಗೆ ಇದು ಬೇಕು.

ನೋಟು ರದ್ದು ಮಾಡಿದ ನಿರ್ಧಾರದಿಂದ ಇನ್ನು ಆರ್ಥಿಕತೆ ಚೇತರಿಸಿಕೊಂಡಿಲ್ಲ. ಈಗ ಮತ್ತೇ ನೋಟು ರದ್ದತಿ ಬಗ್ಗೆ ಚಿಂತನೆ ನಡೆಸುತ್ತಿದ್ದೀರಿ. ಎರಡು ಸಾವಿರು ರು. ನೋಟು ವಾಪಸ್ ನೀಡಬೇಡಿ ಅಂತಾ ಬ್ಯಾಂಕ್ ನವರಿಗೆ ಹೇಳುತ್ತಿದ್ದೀರಿ. ಈ ಬಗ್ಗೆ ನೀವೇ ಚರ್ಚೆ ಮಾಡುತ್ತಿದ್ದೀರಿ. ಈ ರೀತಿ ಜನರಿಗೆ ತೊಂದರೆ ಯಾಕೆ ನೀಡುತ್ತೀರಿ. ಅದಿಕಾರ ಇರುವುದು ಜನರಿಗೆ ತೊಂದರೆ ಕೊಡುವುದಕ್ಕೆ ಅಲ್ಲ. ನಿಮಗೆ ಅಧಿಕಾರ ಇದೆ ಅಂತಾ ಒಂದೊಂದೇ ವರ್ಗವನ್ನು ಗುರಿಯಾಗಿಸಿ ತೊಂದರೆ ಕೊಡುತ್ತಿದ್ದೀರಲ್ಲಾ, ಭಾರತೀಯರು ನಿಮ್ಮನ್ನು ಕ್ಷಮಿಸುವುದಿಲ್ಲ.

ಬಿಜೆಪಿ ನಾಯಕರು ಏನಾದರೂ ಹೇಳಲಿ, ಕಾಂಗ್ರೆಸ್ ತಲೆಗಾದರೂ ಕಟ್ಟಲಿ ಬಿಡಲಿ, ನಾವು ಅದಕ್ಕೆ ಹೆದರುವುದಿಲ್ಲ. ಇಂದು ನಾಗರೀಕರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಇವತ್ತು ರಸ್ತೆಗಿಳಿದು ದಂಗೆಗೆದ್ದಿದ್ದಾರೆ. ಅವರ ಭಾವನೆ ಕೆರಳಿಸಬೇಡಿ. ಇಡೀ ಭಾರತ ಅಭಿವೃದ್ಧಿಯಾಗಬೇಕು ಅಂತಾ ಪ್ರಪಂಚ ಎದುರು ನೋಡುತ್ತಿದೆ. ಬೇರೆ ದೇಶಕ್ಕೆ ಹೋಗಿ ಯಾವುದೋ ವ್ಯಕ್ತಿ ಅಥವಾ ಪಕ್ಷದ ಬಗ್ಗೆ ಮಾತನಾಡಿ ನಮ್ಮ ದೇಶದ ಗೌರವವನ್ನು ಹಾಳು ಮಾಡಬೇಡಿ.

ದೇಶದಲ್ಲಿ ಯಾರೂ ಪಂಚರ್ ಹಾಕ್ಬಾರ್ದಾ? ಕಸ ಗುಡಿಸಬಾರದಾ? ನಿಮ್ಮ ಮನೆ ಮುಂದೆ ಬಂದು ಯಾರಾದ್ರು ಕಸ ಹಾಕಿದರೆ ಅದನ್ನು ಕ್ಲೀನ್ ಮಾಡುವವರು ಯಾರು? ಹಿಂದೆ ಗುಜರಾತಲ್ಲಿ ಹೊಟ್ಟೆ ಸೀಳಿದ್ದು ಆಯ್ತು, ಈಗ ಎದೆ ಸೀಳಲು ಮುಂದಾಗುತ್ತೀರಾ? ಇದೇನಾ ನಮ್ಮ ಸಂಸ್ಕೃತಿ, ನಿಮ್ಮ ಧರ್ಮದಲ್ಲಿ ಇದನ್ನೇ ಹೇಳಿಕೊಟ್ಟಿದ್ದಾರಾ? ಈ ದೇಶದಲ್ಲಿ ವಿದ್ಯಾವಂತರ, ಬುದ್ಧಿವಂತರೂ ಇಲ್ಲದಿದ್ದರೂ ನಡೆಯುತ್ತದೆ, ಪ್ರಜ್ಞಾವಂತಿಕೆ ಇದ್ದರೆ ಸಾಕು. ಅದು ಈ ದೇಶದ ಬಡ ಜನತೆಯಲ್ಲಿದೆ. ಇದನ್ನು ಮರೆಯಬಾರದು.

ಜಾರ್ಖಂಡ್ ಚುನಾವಣೆ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ. ಜನ ಈಗಾಗಲೇ ಉತ್ತರ ಹೇಳಿದ್ದಾರೆ. ಇದು ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ.’
ಕೃಪೆ : ವಿಜಯವಾಣಿ.ನೆಟ್

LEAVE A REPLY

Please enter your comment!
Please enter your name here